* ಟಿ20 ಸರಣಿ ಬಳಿಕ 3 ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭ* ಟಿ20 ಪ್ರದರ್ಶನವನ್ನೇ ಮರುಕಳಿಸುವಂತೆ ಮಾಡಲು ಸಜ್ಜಾದ ರೋಹಿತ್ ಪಡೆ* ರೋಹಿತ್ ಶರ್ಮಾ ಜತೆ ಇನಿಂಗ್ಸ್ ಆರಂಭಿಸಲಿರುವ ಶಿಖರ್ ಧವನ್
ಲಂಡನ್(ಜು.12): ಟಿ20 ಸರಣಿಯಲ್ಲಿ ಮೊದಲ ಎಸೆತದಿಂದಲೇ ಬಿರುಸಿನ ಆಟಕ್ಕೆ ಮೊರೆ ಹೋದಂತೆ ಏಕದಿನ ಸರಣಿಯಲ್ಲಿ ಮುನ್ನುಗ್ಗಲು ಹೋಗದಿದ್ದರೂ, ಇಂಗ್ಲೆಂಡ್ ವಿರುದ್ಧ ಗೆಲ್ಲಲು ಭಾರತ ಬಳಸಬಹುದಾದ ಸೂತ್ರದಲ್ಲಿ ಹೆಚ್ಚೇನೂ ಬದಲಾಗುವ ನಿರೀಕ್ಷೆ ಇಲ್ಲ. 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಮಂಗಳವಾರ ಇಲ್ಲಿನ ದಿ ಓವಲ್ ಮೈದಾನದಲ್ಲಿ ನಡೆಯಲಿದ್ದು, ಭಾರತ ಆಕ್ರಮಣಕಾರಿ ನಡೆಯನ್ನು ಮುಂದುವರಿಸದೆ ಇರಲು ಯಾವುದೇ ಕಾರಣಗಳಿಲ್ಲ. ಏಕದಿನ ಕ್ರಿಕೆಟ್‌ಗೆ ಹೊಸ ಭಾಷ್ಯ ಬರೆದಿರುವ ಇಂಗ್ಲೆಂಡ್, ಈ ಮಾದರಿಯು ಟಿ20 ಕ್ರಿಕೆಟ್‌ನ ಮುಂದುವರಿದ ಭಾಗ ಎನ್ನುವುದನ್ನು ಕ್ರಿಕೆಟ್ ಜಗತ್ತಿಗೆ ತೋರಿಸಿದ್ದು, 2023ರ ಏಕದಿನ ವಿಶ್ವಕಪ್‌ನಲ್ಲಿ ಗೆಲ್ಲುವ ಫೇವರಿಟ್ ಎನಿಸಿಕೊಳ್ಳಬೇಕಿದ್ದರೆ ಭಾರತವೂ ತನ್ನ ಆಟದ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ಆ ಬದಲಾವಣೆಗೆ ಈ ಸರಣಿ ಸಾಕ್ಷಿಯಾಗಬಹುದು.
ನಾಯಕ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಲಿರುವ ಶಿಖರ್ ಧವನ್, ಕೇವಲ ಏಕದಿನ ಮಾದರಿಯಲ್ಲಿ ಆಡುತ್ತಿದ್ದು ವಿಶ್ವಕಪ್ ವರೆಗೂ ಸ್ಥಾನ ಉಳಿಸಿಕೊಳ್ಳಬೇಕಿದ್ದರೆ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟವಾಡಿ ಯಶಸ್ಸು ಸಾಧಿಸಬೇಕಿದೆ. ಟಿ20 ಸರಣಿಯಲ್ಲಿ ಲಯ ಸಾಧಿಸಲು ವಿಫಲರಾದ ವಿರಾಟ್ ಕೊಹ್ಲಿ ಈ ಸರಣಿಯನ್ನು ಬಳಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಸೂಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ರವೀಂದ್ರ ಜಡೇಜಾ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಜಸ್‌ಪ್ರೀತ್ ಬುಮ್ರಾ ಮುನ್ನಡೆಸಲಿರುವ ಬೌಲಿಂಗ್ ಪಡೆಗೆ ಯುವ ಎಡಗೈ ವೇಗಿ ಅಶ್‌ರ್‍ದೀಪ್ ಸಿಂಗ್ ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ.
ಇಂಗ್ಲೆಂಡ್‌ಗೆ ಸ್ಟೋಕ್ಸ್, ರೂಟ್ ಬಲ: ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮತ್ತು ಜಾನಿ ಬೇರ್‌ಸ್ಟೋವ್ ಜೊತೆ ಮಾಜಿ ನಾಯಕ ಜೋ ರೂಟ್ ಸೇವೆ ಸಹ ಇಂಗ್ಲೆಂಡ್‌ಗೆ ಲಭ್ಯವಾಗಲಿದೆ. ಪೂರ್ಣಾವಧಿ ನಾಯಕನಾದ ಬಳಿಕ ಮೊದಲ ಸರಣಿಯಲ್ಲಿ ಸೋಲು ಕಂಡ ಜೋಸ್ ಬಟ್ಲರ್, ಈಗ ತಂಡಕ್ಕೆ ಯಶಸ್ಸು ದೊರಕಿಸಿಕೊಡುವ ಜೊತೆಗೆ ವೈಯಕ್ತಿಕವಾಗಿಯೂ ಲಯಕ್ಕೆ ಮರಳಲು ಕಾಯುತ್ತಿದ್ದಾರೆ. ಬಲಿಷ್ಠ ಇಂಗ್ಲೆಂಡ್‌ನಿಂದ ಭಾರತಕ್ಕೆ ದೊಡ್ಡ ಸವಾಲು ಎದುರಾಗುವ ನಿರೀಕ್ಷೆ ಇದ್ದು, ಪಂದ್ಯ ಅಭಿಮಾನಿಗಳ ಕುತೂಹಲ ಕೆರಳಿಸಿದೆ.
Rohit Sharma 8 ತಿಂಗಳ ಕ್ಯಾಪ್ಟನ್ಸಿಯಲ್ಲಿ ದಿಗ್ಗಜರ ದಾಖಲೆಗಳು ದಮನ..!
ಸಂಭವನೀಯ ಆಟಗಾರರ ಪಟ್ಟಿ
ಇಂಗ್ಲೆಂಡ್: ಜೋಸ್ ಬಟ್ಲರ್(ನಾಯಕ), ಜೇಸನ್ ರಾಯ್, ಜೋ ರೂಟ್, ಜಾನಿ ಬೇರ್‌ಸ್ಟೋವ್, ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಮೋಯಿನ್ ಅಲಿ, ಸ್ಯಾಮ್ ಕರ್ರನ್, ಡೇವಿಡ್ ವಿಲ್ಲಿ, ರೀಸ್ ಟಾಪ್ಲಿ, ಪಾರ್ಕಿನ್‌ಸನ್.
ಭಾರತ: ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಅಶ್‌ರ್‍ದೀಪ್ ಸಿಂಗ್, ಯುಜುವೇಂದ್ರ ಚಹಲ್.
ಪಂದ್ಯ: ಸಂಜೆ 5.30ಕ್ಕೆ
ನೇರ ಪ್ರಸಾರ: ಸೋನಿ ಸಿಕ್ಸ್
ಪಿಚ್ ರಿಪೋರ್ಚ್
ದಿ ಓವಲ್ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಸಹಕಾರಿಯಾಗುವ ಸಾಧ್ಯತೆ ಹೆಚ್ಚು. ಇಲ್ಲಿ 71 ಏಕದಿನ ಪಂದ್ಯಗಳು ನಡೆಯಲಿದ್ದು, ಮೊದಲ ಇನ್ನಿಂಗ್‌್ಸನ ಸರಾಸರಿ ಮೊತ್ತ 254 ರನ್. ಪಿಚ್ ಉತ್ತಮ ಬೌನ್ಸ್ ಸಹ ಹೊಂದಿದ್ದು, ವೇಗಿಗಳು ಪರಿಣಾಮಕಾರಿಯಾಗಬಲ್ಲರು. ಟಾಸ್ ಗೆಲ್ಲುವ ತಂಡ ಮೊದಲು ಫೀಲ್ಡ್ ಮಾಡು ಸಾಧ್ಯತೆ ಜಾಸ್ತಿ.
