* ರೋಚಕ ಘಟ್ಟದತ್ತ ಭಾರತ-ಇಂಗ್ಲೆಂಡ್‌ ಟೆಸ್ಟ್‌:  ಇಂಗ್ಲೆಂಡ್‌ ಗೆಲುವಿಗೆ 378 ರನ್‌ ಗುರಿ* ಲೀಸ್‌ ಅರ್ಧಶತಕ, ಭರ್ಜರಿ ಆರಂಭದ ಬಳಿಕ ಕುಸಿದ ಇಂಗ್ಲೆಂಡ್‌* ರೂಟ್‌-ಬೇರ್‌ಸ್ಟೋವ್‌ ಶತಕದ ಜೊತೆಯಾಟ, ಬೂಮ್ರಾಗೆ 2 ವಿಕೆಟ್‌ 

ಬರ್ಮಿಂಗ್‌ಹ್ಯಾಮ್‌ (ಜುಲೈ 4): ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ನಿರ್ಣಾಯಕ 5ನೇ ಟೆಸ್ಟ್‌ ಪಂದ್ಯ ರೋಚಕ ಘಟ್ಟತಲುಪಿದ್ದು, ಉಭಯ ತಂಡಗಳಿಂದಲೂ ಗೆಲುವಿಗಾಗಿ ತೀವ್ರ ಪೈಪೋಟಿ ನಡೆಯುತ್ತಿವೆ. 2ನೇ ಇನ್ನಿಂಗ್ಸ್‌ನಲ್ಲಿ 245ಕ್ಕೆ ಆಲೌಟಾದ ಭಾರತ, ಇಂಗ್ಲೆಂಡ್‌ ಗೆಲುವಿಗೆ 378 ರನ್‌ಗಳ ದೊಡ್ಡ ಗುರಿ ನೀಡಿದ್ದು, ಆತಿಥೇಯರು 3 ವಿಕೆಟ್‌ಗೆ 200ಕ್ಕೂ ಹೆಚ್ಚು ರನ್‌ ಕಲೆ ಹಾಕಿದ್ದಾರೆ.

ಉತ್ತಮ ಯೋಜನೆಯೊಂದಿಗೆ ಬ್ಯಾಟಿಂಗ್‌ಗಿಳಿದ ಇಂಗ್ಲೆಂಡ್‌ ಮೊದಲ ವಿಕೆಟ್‌ಗೆ 21.4 ಓವರ್‌ಗಳಲ್ಲಿ 107 ರನ್‌ ಜೊತೆಯಾಟ ಪಡೆಯಿತು. ಮೊದಲ 3 ದಿನ ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸಿದ್ದ ಭಾರತ ಇನ್ನೇನು ಪಂದ್ಯ ಕೈಬಿಟ್ಟಿತು ಎನ್ನುವಷ್ಟರಲ್ಲಿ ಆತಿಥೇಯ ಇಂಗ್ಲೆಂಡ್‌ನ 3 ವಿಕೆಟ್‌ ಪತನವಾಯಿತು. 46 ರನ್‌ ಗಳಿಸಿದ್ದ ಜ್ಯಾಕ್‌ ಕ್ರಾಲಿ ವಿಕೆಟ್‌ ಪಡೆದು ಸಂಭ್ರಮಿಸಿದ ಬೂಮ್ರಾ, ತಮ್ಮ ಮುಂದಿನ ಓವರ್‌ನಲ್ಲೇ ಓಲಿ ಪೋಪ್‌(00)ಗೂ ಪೆವಿಲಿಯನ್‌ ಹಾದಿ ತೋರಿಸಿದರು.

ಬಳಿಕ ಅಲೆಕ್ಸ್‌ ಲೀಸ್‌( 65 ಎಸೆತಗಳಲ್ಲಿ 56) ರನ್‌ಔಟ್‌ ಆಗಿ ನಿರ್ಗಮಿಸಿದರು. ಕೇವಲ 2 ರನ್‌ ಅಂತರದಲ್ಲಿ 3 ವಿಕೆಟ್‌ ಕಿತ್ತ ಭಾರತ ಪಂದ್ಯದ ಮೇಲೆ ಮತ್ತೆ ಹಿಡಿತ ಸಾಧಿಸಿತು. ಆದರೆ ಜೋ ರೂಟ್‌ ಹಾಗೂ ಮೊದಲ ಇನ್ನಿಂಗ್‌್ಸನ ಶತಕವೀರ ಜಾನಿ ಬೇರ್‌ಸ್ಟೋವ್‌ ಶತಕದ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದ್ದು, ಪಂದ್ಯ ಗೆಲ್ಲಿಸುವ ಹೊಣೆ ಹೊತ್ತುಕೊಂಡಿದ್ದಾರೆ.

ಪಂತ್‌ ಫಿಫ್ಟಿ: 3ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 125 ರನ್‌ ಗಳಿಸಿದ್ದ ಭಾರತ 4ನೇ ದಿನ ಆರಂಭದಲ್ಲೇ ಕುಸಿತ ಕಂಡಿತು. 50 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದ ಚೇತೇಶ್ವರ ಪೂಜಾರ 66 ರನ್‌ ಗಳಿಸಿ ಔಟಾದರು. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ರಿಷಭ್‌ ಪಂತ್‌ ಮತ್ತೊಮ್ಮೆ ತಂಡಕ್ಕೆ ನೆರವಾದರು. ಅವರು 86 ಎಸೆತಗಳಲ್ಲಿ 57 ರನ್‌ ಗಳಿಸಿ ನಿರ್ಗಮಿಸಿದರು. ಇವರಿಬ್ಬರು ಹೊರತುಪಡಿಸಿ ಉಳಿದವರು ದೊಡ್ಡ ಮೊತ್ತ ದಾಖಲಿಸಲು ವಿಫಲರಾದರು. ಶ್ರೇಯಸ್‌ ಅಯ್ಯರ್‌ 19, ರವೀಂದ್ರ ಜಡೇಜಾ 23 ರನ್‌ಗಳಿಸಲಷ್ಟೇ ಶಕ್ತರಾದರು. ಮೊಹಮದ್‌ ಶಮಿ 13 ರನ್‌ ಕೊಡುಗೆ ನೀಡಿದರು. ಇಂಗ್ಲೆಂಡ್‌ ಪರ ನಾಯಕ ಸ್ಟೋಕ್ಸ್‌ 33 ರನ್‌ಗೆ 4 ವಿಕೆಟ್‌ ಕಿತ್ತರೆ, ಸ್ಟುವರ್ಚ್‌ ಬ್ರಾಡ್‌ ಹಾಗೂ ಮ್ಯಾಥ್ಯೂ ಪಾಟ್ಸ್‌ ತಲಾ 2 ವಿಕೆಟ್‌ ಪಡೆದರು.

ENG VS IND ಟೀಂ ಇಂಡಿಯಾ 245 ‌ರನ್‌ಗೆ ಆಲೌಟ್, ಇಂಗ್ಲೆಂಡ್‌ಗೆ 378 ರನ್ ಟಾರ್ಗೆಟ್!

ಪಂದ್ಯದಲ್ಲಿ 200 ರನ್‌: ರಿಷಭ್‌ ಪಂತ್‌ ದಾಖಲೆ
: ವಿದೇಶಿ ನೆಲದಲ್ಲಿ ಟೆಸ್ಟ್‌ ಪಂದ್ಯವೊಂದರಲ್ಲಿ 200ಕ್ಕೂ ಹೆಚ್ಚು ರನ್‌ ಗಳಿಸಿದ ಭಾರತದ ಮೊದಲ ವಿಕೆಟ್‌ ಕೀಪರ್‌ ಎನ್ನುವ ದಾಖಲೆಯನ್ನು ರಿಷಭ್‌ ಪಂತ್‌ ಬರೆದಿದ್ದಾರೆ. ಮೊದಲ ಇನ್ನಿಂಗ್‌್ಸನಲ್ಲಿ 146 ರನ್‌ ಗಳಿಸಿದ್ದ ಪಂತ್‌, 2ನೇ ಇನ್ನಿಂಗ್‌್ಸನಲ್ಲಿ 57 ರನ್‌ ಗಳಿಸಿ ಔಟಾದರು. ಪಂದ್ಯದಲ್ಲಿ ಒಟ್ಟು 203 ರನ್‌ ಗಳಿಸಿದರು.

Birmingham Test: ಮತ್ತೆ ಅರ್ಧಶತಕ ಚಚ್ಚಿ ಹೊಸ ದಾಖಲೆ ಬರೆದ ರಿಷಭ್‌ ಪಂತ್..!

ಇಂದು ಕ್ರೀಡಾಂಗಣಕ್ಕೆ ಉಚಿತ ಪ್ರವೇಶ!: ಇಂಗ್ಲೆಂಡ್‌ ವಿರುದ್ಧ ಐತಿಹಾಸಿಕ ಸರಣಿ ಗೆಲುವಿನ ನಿರೀಕ್ಷೆಯಲ್ಲಿರುವ ಭಾರತಕ್ಕೆ ಅಂತಿಮ ದಿನದಂದು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳ ಬೆಂಬಲ ಸಿಗಲಿದೆ. 5ನೇ ಹಾಗೂ ಅಂತಿಮ ದಿನದಾಟಕ್ಕೆ ಪ್ರೇಕ್ಷಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಎಡ್ಜ್‌ಬಾಸ್ಟನ್‌ ಕ್ರೀಡಾಂಗಣ ಭಾರತೀಯ ಅಭಿಮಾನಿಗಳಿಂದ ತುಂಬಿ ತುಳುಕುವ ನಿರೀಕ್ಷೆ ಇದೆ.