* ಭಾರತ ವಿರುದ್ದದ ಹೆಡಿಂಗ್ಲೆ ಟೆಸ್ಟ್‌ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ* ಜೋ ರೂಟ್‌ ಪಡೆಯಲ್ಲಿ ಮಹತ್ತರ ಬದಲಾವಣೆ* ಲಾರ್ಡ್ಸ್‌ ಟೆಸ್ಟ್ ಪಂದ್ಯ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್ ತಂಡದಲ್ಲಿ ಬದಲಾವಣೆ

ಲಂಡನ್(ಆ.19): ಭಾರತ ವಿರುದ್ದ ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಆತಿಥೇಯ ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲಿ ಮೇಜರ್ ಸರ್ಜರಿಯಾಗಿದೆ. ಆಗಸ್ಟ್‌ 25ರಿಂದ ಆರಂಭವಾಗಲಿರುವ ಹೆಡಿಂಗ್ಲೆ ಟೆಸ್ಟ್‌ ಪಂದ್ಯಕ್ಕೆ ಬಲಿಷ್ಠ ತಂಡ ಪ್ರಕಟಗೊಂಡಿದ್ದು ಡೇವಿಡ್‌ ಮಲಾನ್‌ ತಂಡ ಕೂಡಿಕೊಂಡಿದ್ದಾರೆ. 

ಹೌದು, ಭಾರತ ವಿರುದ್ದದ 5 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯಕ್ಕೆ 15 ಆಟಗಾರರನ್ನೊಳಗೊಂಡ ಇಂಗ್ಲೆಂಡ್ ತಂಡ ಪ್ರಕಟವಾಗಿದೆ. 2018ರಲ್ಲಿ ಟೀಂ ಇಂಡಿಯಾ ವಿರುದ್ದವೇ ಎಡ್ಜ್‌ಬಾಸ್ಟನ್‌ನಲ್ಲಿ ಕಡೆಯ ಬಾರಿಗೆ ಟೆಸ್ಟ್‌ ಪಂದ್ಯವನ್ನಾಡಿದ್ದ ಸೀಮಿತ ಓವರ್‌ಗಳ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ ಡೇವಿಡ್‌ ಮಲಾನ್ ಅವರಿಗೆ ಮತ್ತೊಮ್ಮೆ ಟೆಸ್ಟ್‌ ತಂಡಕ್ಕೆ ಕರೆ ಬಂದಿದೆ. ಮಾರ್ಕ್‌ ವುಡ್‌ ಭುಜದ ನೋವಿನಿಂದ ಬಳಲುತ್ತಿದ್ದು ವೇಗಿ ಸಕೀಬ್ ಮೊಹಮೂದ್‌ ಕೂಡಾ ತಂಡ ಕೂಡಿಕೊಂಡಿದ್ದಾರೆ. 

Scroll to load tweet…

ಡೋಮಿನಿಕ್ ಸಿಬ್ಲಿ, ಜಾಕ್‌ ಕ್ರಾವ್ಲೆಗೆ ಗೇಟ್‌ಪಾಸ್‌: ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ಪ್ರದರ್ಶನ ತೋರಲು ವಿಫಲವಾಗಿದ್ದ ಡೋಮಿನಿಕ್ ಸಿಬ್ಲಿ ಹಾಗೂ ಜಾಕ್‌ ಕ್ರಾವ್ಲಿಗೆ ವಿಶ್ರಾಂತಿ ನೀಡಲಾಗಿದೆ. ಇದೀಗ ರೋರಿ ಬರ್ನ್ಸ್‌ ಜತೆಗೆ ಹಸೀಬ್ ಹಮೀದ್‌ ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಪರ ಇನಿಂಗ್ಸ್ ಆರಂಭಿಸಲಿದ್ದಾರೆ. ಸ್ಟುವರ್ಟ್‌ ಬ್ರಾಡ್‌, ಓಲಿ ಸ್ಟೋನ್‌, ಕ್ರಿಸ್ ವೋಕ್ಸ್ ಹಾಗೂ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮತ್ತೊಮ್ಮೆ ಆಯ್ಕೆಗೆ ಅಲಭ್ಯರಾಗಿದ್ದಾರೆ.

ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್‌ ಪ್ರಕಟ: 2ನೇ ಸ್ಥಾನಕ್ಕೇರಿದ ಜೋ ರೂಟ್‌

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 5 ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಎರಡನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 151 ರನ್‌ಗಳ ಅಂತರದಲ್ಲಿ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ ವಿರಾಟ್ ಕೊಹ್ಲಿ ಪಡೆ 1-0 ಮುನ್ನಡೆ ಸಾಧಿಸಿದೆ. ಹೀಗಾಗಿ ಮೂರನೇ ಟೆಸ್ಟ್ ಪಂದ್ಯದಲ್ಲಿ ಯಾವ ತಂಡ ಮೇಲುಗೈ ಸಾಧಿಸಲಿದೆ ಎನ್ನುವ ಕುತೂಹಲ ಜೋರಾಗಿದೆ. 

ಮೂರನೇ ಟೆಸ್ಟ್‌ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಹೀಗಿದೆ ನೋಡಿ:

Scroll to load tweet…

ಜೋ ರೂಟ್‌(ನಾಯಕ), ಮೋಯಿನ್ ಅಲಿ, ಜೇಮ್ಸ್ ಆ್ಯಂಡರ್‌ಸನ್‌, ಜಾನಿ ಬೇರ್‌ಸ್ಟೋವ್, ರೋರಿ ಬರ್ನ್ಸ್‌, ಜೋಸ್ ಬಟ್ಲರ್(ವಿಕೆಟ್ ಕೀಪರ್), ಸ್ಯಾಮ್ ಕರ್ರನ್‌, ಹಸೀಬ್ ಹಮೀದ್, ಡೇನಿಯಲ್ ಲಾರೆನ್ಸ್, ಸಕೀಬ್ ಮೊಹಮೂದ್‌, ಡೇವಿಡ್ ಮಲಾನ್‌, ಕ್ರೆಗ್ ಒವರ್‌ಟನ್‌, ಓಲಿ ಪೋಪ್, ಓಲಿ ರಾಬಿನ್‌ಸನ್‌, ಮಾರ್ಕ್‌ ವುಡ್.