Asianet Suvarna News Asianet Suvarna News

ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್‌ ಪ್ರಕಟ: 2ನೇ ಸ್ಥಾನಕ್ಕೇರಿದ ಜೋ ರೂಟ್‌

* ಲಾರ್ಡ್ಸ್‌ ಟೆಸ್ಟ್‌ ಮುಕ್ತಾಯದ ಬೆನ್ನಲ್ಲೇ ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಪ್ರಕಟ

* ಸ್ಮಿತ್, ಲಬುಶೇನ್ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಜೋ ರೂಟ್‌

* ಟಾಪ್ 5 ಬೌಲಿಂಗ್‌ ವಿಭಾಗದಲ್ಲಿ ಯಾವುದೇ ಬದಲಾವಣೆಯಿಲ್ಲ

 

ICC Test player ranking Announces Joe Root climbs to No 2 Spot kvn
Author
Dubai - United Arab Emirates, First Published Aug 18, 2021, 4:27 PM IST

ದುಬೈ(ಆ.18): ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಲಾರ್ಡ್ಸ್‌ ಟೆಸ್ಟ್‌ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ಪರಿಷ್ಕೃತ ಟೆಸ್ಟ್ ರ‍್ಯಾಂಕಿಂಗ್‌ ಪ್ರಕಟಿಸಿದ್ದು, ಬ್ಯಾಟಿಂಗ್ ವಿಭಾಗದಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್‌ ಎರಡು ಸ್ಥಾನ ಜಿಗಿತ ಕಂಡು ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ಆಸ್ಟ್ರೇಲಿಯಾದ ತಾರಾ ಬ್ಯಾಟ್ಸ್‌ಮನ್‌ಗಳಾದ ಜೋ ರೂಟ್ ಹಾಗೂ ಮಾರ್ನಸ್‌ ಲಬುಶೇನ್ ಅವರನ್ನು ಹಿಂದಿಕ್ಕಿ ರೂಟ್‌ ಎರಡನೇ ಸ್ಥಾನಕ್ಕೇರಿದ್ದಾರೆ. ಭಾರತ ವಿರುದ್ದದ ಲಾರ್ಡ್ಸ್‌ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ರೂಟ್ ಅಜೇಯ 180 ರನ್‌ ಬಾರಿಸಿದ್ದರು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ 33 ರನ್‌ ಬಾರಿಸುವ ಮೂಲಕ ಆಂಗ್ಲರ ಪರ ಎರಡೂ ಇನಿಂಗ್ಸ್‌ನಲ್ಲೂ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಸದ್ಯ ರೂಟ್‌ 893 ರೇಟಿಂಗ್‌ ಅಂಕಗಳನ್ನು ಹೊಂದಿದ್ದರೆ, ನ್ಯೂಜಿಲೆಂಡ್ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ 901 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದಾರೆ.

ನಮ್ಮಲ್ಲಿ ಒಬ್ಬನನ್ನು ಕೆಣಕಿದರೆ ಇಡೀ ತಂಡವೇ ತಿರುಗಿಬೀಳುತ್ತೆ: ಕೆ.ಎಲ್ ರಾಹುಲ್‌ ಎಚ್ಚರಿಕೆ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರಿಷಭ್ ಪಂತ್ ಕ್ರಮವಾಗಿ 5,6,7ನೇ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಇನ್ನು ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 129 ರನ್‌ ಚಚ್ಚಿದ್ದ ಕೆ.ಎಲ್‌. ರಾಹುಲ್ 19 ಸ್ಥಾನಗಳ ಜಿಗಿತ ಕಂಡು 37ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನುಳಿದಂತೆ ಟಾಪ್‌ 10 ಪಟ್ಟಿಯಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಂ 2 ಸ್ಥಾನ ಮೇಲೇರಿ 8ನೇ ಸ್ಥಾನಕ್ಕೆ ಲಗ್ಗೆಯಿಟ್ಟರೆ, ಡೇವಿಡ್ ವಾರ್ನರ್ ಹಾಗೂ ಕ್ವಿಂಟನ್ ಡಿ ಕಾಕ್‌ ಕ್ರಮವಾಗಿ ಒಂದೊಂದು ಸ್ಥಾನ ಕುಸಿತ ಕಂಡು 9 ಹಾಗೂ 10ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಇನ್ನು ಬೌಲಿಂಗ್‌ ವಿಭಾಗದಲ್ಲಿ ಟಾಪ್‌ 5 ಪಟ್ಟಿಯೊಳಗೆ ಯಾವುದೇ ಬದಲಾವಣೆಗಳು ಆಗಿಲ್ಲ. ಪ್ಯಾಟ್ ಕಮಿನ್ಸ್ ಅಗ್ರಸ್ಥಾನದಲ್ಲೇ ಮುಂದುವರೆದಿದ್ದರೆ, ಮೊದಲೆರಡು ಟೆಸ್ಟ್‌  ರವಿಚಂದ್ರನ್ ಅಶ್ವಿನ್ 2ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಇನ್ನು ಲಾರ್ಡ್ಸ್‌ ಟೆಸ್ಟ್‌ನಲ್ಲಿ 8 ವಿಕೆಟ್ ಕಬಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ 18 ಸ್ಥಾನ ಜಿಗಿತ ಕಂಡು 38ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಟೀಂ ಇಂಡಿಯಾ ಮತ್ತೋರ್ವ ವೇಗಿ ಜಸ್ಪ್ರೀತ್ ಬುಮ್ರಾ ಒಂದು ಸ್ಥಾನ ಜಾರಿ 10ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
 

Follow Us:
Download App:
  • android
  • ios