ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಕ್ರಮಣಶೀಲ ನೀತಿಯನ್ನು ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಟೀಕಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಪುಣೆ(ಮಾ.26): ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯ ಆಕ್ರಮಣಶೀಲತೆ ಹಾಗೂ ಮೈದಾನದಲ್ಲಿ ಅವರು ಕೆಲವೊಮ್ಮೆ ವರ್ತಿಸುವ ರೀತಿ ಬಗ್ಗೆ ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಟೀಕೆ ಮಾಡಿದ್ದಾರೆ.
ಸುದ್ದಿಗೋಷ್ಠಿ ವೇಳೆ ಕೊಹ್ಲಿಯ ಆಕ್ರಮಣಶೀಲತೆ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರಿಸಿದ ಸ್ಟೋಕ್ಸ್, ‘ಪ್ರತಿ ತಂಡ ಹಾಗೂ ಪ್ರತಿ ಆಟಗಾರ ಮೈದಾನದಲ್ಲಿ ಅವರದ್ದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಕೊಹ್ಲಿಯಂತೆ ವರ್ತಿಸುವುದು ನಮ್ಮ ತಂಡಕ್ಕೆ ಸರಿ ಹೊಂದುವುದಿಲ್ಲ. ಕಳೆದ ನಾಲ್ಕೈದು ವರ್ಷಗಳಲ್ಲಿ ಎದುರಾಳಿ ಆಟಗಾರನ ಮೇಲೆ ಆಕ್ರಮಣಶೀಲತೆ ತೋರಿ, ಮಾನಸಿಕ ಒತ್ತಡ ಹೇರುವಂತಹ ಆಟವಾಡಿಲ್ಲ’ ಎಂದಿದ್ದಾರೆ.
ಸರಣಿ ಜಯದ ಮೇಲೆ ಕಣ್ಣಿಟ್ಟ ಟೀಂ ಇಂಡಿಯಾ
ಪ್ರಸಿದ್ಧ್ ಕೃಷ್ಣ ಆಟದ ಬಗ್ಗೆ ರಾಹುಲ್ ಮೆಚ್ಚುಗೆ
ಪುಣೆ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಬಗ್ಗೆ ಟೀಂ ಇಂಡಿಯಾದಲ್ಲಿರುವ ರಾಜ್ಯದ ತಾರಾ ಕ್ರಿಕೆಟಿಗ ಕೆ.ಎಲ್.ರಾಹುಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್,‘ಪ್ರಸಿದ್ಧ್ ಕೃಷ್ಣ ತಮ್ಮ ಚೊಚ್ಚಲ ಪಂದ್ಯದಲ್ಲಿ ಬೌಲ್ ಮಾಡಿದ ರೀತಿ ನೋಡಿ ನನಗೆ ಅಚ್ಚರಿಯಾಗಿಲ್ಲ. ಕರ್ನಾಟಕದಿಂದ ಭಾರತ ತಂಡಕ್ಕೆ ಆಡಲಿರುವ ಮುಂದಿನ ಆಟಗಾರ ಅವರೇ ಎಂದು ನನಗೆ ವಿಶ್ವಾಸವಿತ್ತು. ನಾವಿಬ್ಬರು ಒಂದೇ ಸಾಲಿನವರಲ್ಲ. ಆದರೆ ಅವರು ಕಿರಿಯರ ಕ್ರಿಕೆಟ್ ಹಾಗೂ ನೆಟ್ಸ್‌ನಲ್ಲಿ ಆಡುವುದನ್ನು ಅನೇಕ ಬಾರಿ ನೋಡಿದ್ದೆ. ಅವರ ಆಟ ಎಲ್ಲರ ಗಮನ ಸೆಳೆಯಲಿದೆ’ ಎಂದರು.
