ಹಾಲಿ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ವಿರುದ್ದ ಮೊದಲ ಗೆಲುವು ಸಾಧಿಸಿ ಬೀಗುತ್ತಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇದೀಗ ಎರಡನೇ ಏಕದಿನ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಪುಣೆ(ಮಾ.26): ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದ ಭಾರತ, ಶುಕ್ರವಾರ ನಡೆಯಲಿರುವ 2ನೇ ಪಂದ್ಯದಲ್ಲೂ ಗೆದ್ದು ಸರಣಿ ವಶಪಡಿಸಿಕೊಳ್ಳುವ ಉತ್ಸಾಹದಲ್ಲಿದೆ. ಟೆಸ್ಟ್, ಟಿ20 ಸರಣಿಗಳ ಬಳಿಕ ಏಕದಿನ ಸರಣಿಯನ್ನೂ ತನ್ನದಾಗಿಸಿಕೊಳ್ಳುವತ್ತ ಕೊಹ್ಲಿ ಪಡೆ ಚಿತ್ತ ನೆಟ್ಟಿದೆ.
ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಗಾಯಗೊಂಡು ಸರಣಿಯಿಂದಲೇ ಹೊರಬಿದ್ದಿರುವ ಶ್ರೇಯಸ್ ಅಯ್ಯರ್ ಬದಲಿಗೆ ಮುಂಬೈನ ಸೂರ್ಯಕುಮಾರ್ ಯಾದವ್‌ಗೆ ಅವಕಾಶ ಸಿಗುವ ನಿರೀಕ್ಷೆ ಇದೆ. ಕಳೆದ ವಾರ ಭಾರತ ಟಿ20 ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಸೂರ್ಯ, ತಮ್ಮ ಸ್ಫೋಟಕ ಆಟದಿಂದ ಗಮನ ಸೆಳೆದಿದ್ದರು. ಇದೀಗ ಏಕದಿನ ತಂಡಕ್ಕೂ ಕಾಲಿಡುವ ಸಮಯ ಒದಗಿ ಬಂದಿದೆ.
ಮೊದಲ ಪಂದ್ಯದ ವೇಳೆ ಮೊಣಕೈಗೆ ಪೆಟ್ಟು ತಿಂದಿದ್ದ ರೋಹಿತ್ ಶರ್ಮಾ, ಚೇತರಿಸಿಕೊಂಡಿದ್ದು ಈ ಪಂದ್ಯದಲ್ಲಿ ಆಡಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ. ಒಂದು ವೇಳೆ ರೋಹಿತ್ ಹೊರಗುಳಿಯಲು ನಿರ್ಧರಿಸಿದರೆ, ಶುಭ್‌ಮನ್ ಗಿಲ್‌ಗೆ ಅವಕಾಶ ಸಿಗಲಿದೆ. ಲಯ ಕಂಡುಕೊಂಡಿರುವ ಶಿಖರ್ ಧವನ್ ಸ್ಥಿರ ಪ್ರದರ್ಶನ ತೋರಬೇಕಿದೆ. ನಾಯಕ ವಿರಾಟ್ ಕೊಹ್ಲಿ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿಲ್ಲ. ಇನ್ನುಳಿದ 2 ಪಂದ್ಯಗಳಲ್ಲಿ ಅಭಿಮಾನಿಗಳು ಕೊಹ್ಲಿಯಿಂದ ಶತಕ ನಿರೀಕ್ಷಿಸುತ್ತಿದ್ದಾರೆ. ಕೆ.ಎಲ್.ರಾಹುಲ್ ಸಹ ಲಯಕ್ಕೆ ಮರಳಿದ್ದು, ಮಧ್ಯಮ ಕ್ರಮಾಂಕ ಬಲಿಷ್ಠವಾಗಿ ತೋರುತ್ತಿದೆ. ಕೃನಾಲ್ ಪಾಂಡ್ಯ ತಮ್ಮ ಆಲ್ರೌಂಡ್ ಆಟದಿಂದ ಭರವಸೆ ಮೂಡಿಸಿದ್ದಾರೆ.
2ನೇ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡಕ್ಕೆ ಮತ್ತೊಂದು ಆಘಾತ; ಗಾಯದ ಮೇಲೆ ಬರೆ!
ಇಂಗ್ಲೆಂಡ್‌ಗೆ ಸಂಕಷ್ಟ: ಒಂದು ಕಡೆ ಲಯದ ಸಮಸ್ಯೆಯಾದರೆ ಮತ್ತೊಂದು ಕಡೆ ಗಾಯಾಳುಗಳ ಸಮಸ್ಯೆಯಿಂದಾಗಿ ಇಂಗ್ಲೆಂಡ್ ಸಂಕಷ್ಟದಲ್ಲಿದೆ. ಮೊದಲ ಪಂದ್ಯದಲ್ಲಿ ಬೇರ್‌ಸ್ಟೋವ್, ರಾಯ್ ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್‌ಮನ್‌ನಿಂದಲೂ ಉತ್ತಮ ಆಟ ಮೂಡಿಬರಲಿಲ್ಲ. ಇನ್ನು ಮೊದಲ ಪಂದ್ಯದ ವೇಳೆ ಗಾಯಗೊಂಡಿದ್ದ ನಾಯಕ ಇಯಾನ್ ಮೊರ್ಗನ್, ಬ್ಯಾಟ್ಸ್‌ಮನ್ ಸ್ಯಾಮ್ ಬಿಲ್ಲಿಂಗ್ಸ್ 2ನೇ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ಇಬ್ಬರು ಅನುಭವಿ ಬ್ಯಾಟ್ಸ್‌ಮನ್‌ಗಳ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ಸರಣಿ ಉಳಿಸಿಕೊಳ್ಳಲು ಹೋರಾಡಬೇಕಿದೆ.
ಇಂಗ್ಲೆಂಡ್ ಬೌಲರ್‌ಗಳು ಮೊದಲ ಪಂದ್ಯದಲ್ಲಿ ಪರಿಣಾಮಕಾರಿಯಾಗಿರಲಿಲ್ಲ. ಪ್ರಮುಖವಾಗಿ ಡೆತ್ ಓವರ್‌ಗಳಲ್ಲಿ ದುಬಾರಿಯಾಗಿದ್ದರು. ಹೀಗಾಗಿ ಬೌಲರ್‌ಗಳ ಮೇಲೆ ಸಹಜವಾಗಿಯೇ ಒತ್ತಡವಿದೆ. ಮೇಲ್ನೋಟಕ್ಕೆ ಭಾರತವೇ ಈ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡ ಎನಿಸಿದ್ದರೂ, ಇಂಗ್ಲೆಂಡ್ ಏಕದಿನ ಕ್ರಿಕೆಟ್‌ನ ವಿಶ್ವ ಚಾಂಪಿಯನ್ ಅನ್ನೋದನ್ನು ಮರೆಯುವ ಹಾಗಿಲ್ಲ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ(ನಾಯಕ), ಸೂರ್ಯಕುಮಾರ್, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಶಾರ್ದೂಲ್ ಠಾಕೂರ್, ಭುವನೇಶ್ವರ್ ಕುಮಾರ್, ಕುಲ್ದೀಪ್/ಚಹಲ್, ಪ್ರಸಿದ್ಧ್ ಕೃಷ್ಣ.
ಇಂಗ್ಲೆಂಡ್: ಜೇಸನ್ ರಾಯ್, ಜಾನಿ ಬೇರ್‌ಸ್ಟೋವ್, ಲಿವಿಂಗ್‌ಸ್ಟೋನ್/ಮೊರ್ಗನ್, ಬಿಲ್ಲಿಂಗ್ಸ್/ಮಲಾನ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಸ್ಯಾಮ್ ಕರ್ರನ್, ಮೋಯಿನ್ ಅಲಿ, ಟಾಮ್ ಕರ್ರನ್, ಆದಿಲ್ ರಶೀದ್, ಮಾರ್ಕ್ ವುಡ್.
ಸ್ಥಳ: ಪುಣೆ
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
