ಚೆನ್ನೈ(ಫೆ.16): ಇಂಗ್ಲೆಂಡ್‌ ವಿರುದ್ದದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಬರೋಬ್ಬರಿ 317 ರನ್‌ಗಳ ಭಾರೀ ಅಂತರದ ಗೆಲುವು ದಾಖಲಿಸಿದೆ. ಇದರೊಂದಿಗೆ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-1ರ ಸಮಬಲ ಸಾಧಿಸಿದೆ. 

ಹೌದು, ಗೆಲ್ಲಲು 482 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ತಂಡಕ್ಕೆ ಭಾರತೀಯ ಸ್ಪಿನ್ನರ್‌ಗಳು ಪ್ರವಾಸಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಅಕ್ಷರ್ ಪಟೇಲ್‌ 5 ವಿಕೆಟ್‌ ಕಬಳಿಸಿದರೆ, ರವಿಚಂದ್ರನ್ ಅಶ್ವಿನ್ 3 ಹಾಗೂ ಕುಲ್ದೀಪ್‌ ಯಾದವ್ 2 ವಿಕೆಟ್‌ ಪಡೆಯುವ ಮೂಲಕ ಇಂಗ್ಲೆಂಡ್‌ಗೆ ಭಾರತದಲ್ಲಿ ದೊಡ್ಡ ಸೋಲಿನ ರುಚಿ ತೋರಿಸಿದರು. ಇದರೊಂದಿಗೆ ಏಷ್ಯಾಖಂಡದಲ್ಲಿ ಸತತ 6 ಗೆಲುವು ದಾಖಲಿಸಿ ಮುನ್ನುಗ್ಗುತ್ತಿದ್ದ ಇಂಗ್ಲೆಂಡ್ ಗೆಲುವಿನ ನಾಗಾಲೋಟಕ್ಕೆ ಭಾರತ ಬ್ರೇಕ್ ಹಾಕಿದೆ. 

INDvsEng ಚೆನ್ನೈ ಟೆಸ್ಟ್ ಗೆಲುವಿನ ಹೊಸ್ತಿಲಲ್ಲಿ ಟೀಂ ಇಂಡಿಯಾ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಟೀಂ ಇಂಡಿಯಾ ರೋಹಿತ್ ಶರ್ಮಾ ಬಾರಿಸಿದ ಸಮಯೋಚಿತ ಶತಕ(161)ದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 329 ರನ್‌ ಬಾರಿಸಿತ್ತು. ಇದಕ್ಕುತ್ತರವಾಗಿ ಅಶ್ವಿನ್‌ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌ ತಂಡ ಕೇವಲ 134 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಅಶ್ವಿನ್‌ ಭರ್ಜರಿ ಶತಕದ ನೆರವಿನಿಂದ ಟೀಂ ಇಂಡಿಯಾ 286 ರನ್‌ ಕಲೆಹಾಕುವ ಮೂಲಕ ಇಂಗ್ಲೆಂಡ್‌ಗೆ ಗೆಲ್ಲಲು 482 ರನ್‌ಗಳ ಕಠಿಣ ಗುರಿ ನೀಡಿತ್ತು.