Asianet Suvarna News Asianet Suvarna News

Ind vs Ban ರವಿಚಂದ್ರನ್‌ ಅಶ್ವಿನ್ ಅರ್ಧಶತಕದ ವೈಭವ, 404 ರನ್‌ ಗಳಿಸಿದ ಟೀಂ ಇಂಡಿಯಾ..!

ಬಾಂಗ್ಲಾದೇಶ ಎದುರು ಮೊದಲ ಇನಿಂಗ್ಸ್‌ನಲ್ಲಿ 404 ರನ್ ಬಾರಿಸಿ ಟೀಂ ಇಂಡಿಯಾ
ಆಕರ್ಷಕ ಅರ್ಧಶತಕ ಸಿಡಿಸಿ ಗಮನ ಸೆಳೆದ ರವಿಚಂದ್ರನ್ ಅಶ್ವಿನ್‌
8ನೇ ವಿಕೆಟ್‌ಗೆ 87 ರನ್‌ಗಳ ಜತೆಯಾಟವಾಡಿದ ಅಶ್ವಿನ್-ಕುಲ್ದೀಪ್ ಜೋಡಿ

Ind vs Ban Cheteshwar Pujara Shreyas Iyer Propel Team India To 404 against Bangladesh kvn
Author
First Published Dec 15, 2022, 1:03 PM IST

ಚಿತ್ತಗಾಂಗ್(ಡಿ.15): ಅನುಭವಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಬಾರಿಸಿದ ಆಕರ್ಷಕ ಅರ್ಧಶತಕ(58) ಹಾಗೂ ಕುಲ್ದೀಪ್ ಯಾದವ್ ಬಾರಿಸಿದ ಸಮಯೋಚಿತ 40 ರನ್‌ಗಳ ನೆರವಿನಿಂದ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 404 ರನ್‌ ಬಾರಿಸಿ ಸರ್ವಪತನ ಕಂಡಿದೆ. ಈ ಮೂಲಕ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿಯೇ ಸವಾಲಿನ ಮೊತ್ತ ಕಲೆಹಾಕಿದೆ. 

ಮೊದಲ ದಿನದಾಟದಂತ್ಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 278 ರನ್‌ ಬಾರಿಸಿದ್ದ ಟೀಂ ಇಂಡಿಯಾ, ಎರಡನೇ ದಿನದಾಟದ ಆರಂಭದಲ್ಲೇ ಶ್ರೇಯಸ್ ಅಯ್ಯರ್ ವಿಕೆಟ್ ಕಳೆದುಕೊಂಡಿತು. ಮೊದಲ ದಿನದಾಟದಂತ್ಯದ ವೇಳೆಗೆ 82 ರನ್ ಗಳಿಸಿದ್ದ ಶ್ರೇಯಸ್ ಅಯ್ಯರ್, ತನ್ನ ಖಾತೆಗೆ ಕೇವಲ 4 ರನ್ ಸೇರಿಸಿ ಎಬೊದತ್ ಹೊಸೈನ್‌ಗೆ ವಿಕೆಟ್ ಒಪ್ಪಿಸಿದರು. 

ಟೀಂ ಇಂಡಿಯಾಗೆ ಸ್ಪಿನ್ನರ್‌ಗಳ ಆಸರೆ: ಹೌದು, ಎರಡನೇ ದಿನದಾಟದ ಆರಂಭದಲ್ಲೇ ಶ್ರೇಯಸ್ ಅಯ್ಯರ್ ವಿಕೆಟ್ ಕಳೆದುಕೊಂಡು ಕೊಂಚ ಆತಂಕ್ಕೆ ಸಿಲುಕಿದ್ದ ಟೀಂ ಇಂಡಿಯಾಗೆ 8ನೇ ವಿಕೆಟ್‌ಗೆ ಅನುಭವಿ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಹಾಗೂ ಕುಲ್ದೀಪ್ ಯಾದವ್ ಆಸರೆಯಾದರು. 8ನೇ ವಿಕೆಟ್‌ಗೆ ಈ ಜೋಡಿ 200 ಎಸೆತಗಳನ್ನು ಎದುರಿಸಿ 87 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸಮಯೋಚಿತ ಬ್ಯಾಟಿಂಗ್ ನಡೆಸಿದ ರವಿಚಂದ್ರನ್ ಅಶ್ವಿನ್‌ 113 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 58 ರನ್‌ ಬಾರಿಸಿ ಮೆಹದಿ ಹಸನ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನೊಂದು ತುದಿಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ಕುಲ್ದೀಪ್ ಯಾದವ್ 114 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 40 ರನ್‌ ಬಾರಿಸಿ ತೈಜುಲ್ ಇಸ್ಲಾಂಗೆ ವಿಕೆಟ್‌ ಒಪ್ಪಿಸಿದರು. 

Ind vs Ban ಅಶ್ವಿನ್‌-ಕುಲ್ದೀಪ್‌ ಜುಗಲ್ಬಂದಿ, ಬೃಹತ್ ಮೊತ್ತದತ್ತ ಟೀಂ ಇಂಡಿಯಾ

ಅಶ್ವಿನ್ ವಿಕೆಟ್ ಪತನವಾಗುತ್ತಿದ್ದಂತೆಯೇ ಟೀಂ ಇಂಡಿಯಾ ದಿಢೀರ್ ಕುಸಿತ ಕಂಡಿತು. ಟೀಂ ಇಂಡಿಯಾ ಕೇವಲ 19 ರನ್‌ಗಳ ಅಂತರದಲ್ಲಿ ಕೊನೆಯ 4 ವಿಕೆಟ್ ಕಳೆದುಕೊಂಡಿತು. ಕೊನೆಯಲ್ಲಿ ಉಮೇಶ್ ಯಾದವ್ 2 ಸಿಕ್ಸರ್ ಸಹಿತ ಅಜೇಯ 15 ರನ್ ಬಾರಿಸಿದರೆ, ಮೊಹಮ್ಮದ್ ಸಿರಾಜ್ 4 ರನ್‌ ಗಳಿಸಿ ಮೆಹದಿ ಹಸನ್‌ಗೆ ವಿಕೆಟ್ ಒಪ್ಪಿಸಿದರು.

ಬಾಂಗ್ಲಾದೇಶ ತಂಡದ ಪರ ಸ್ಪಿನ್ನರ್‌ಗಳಾದ ಮೆಹದಿ ಹಸನ್ ಹಾಗೂ ತೈಜುಲ್ ಅಹಮದ್ ತಲಾ 4 ವಿಕೆಟ್ ಪಡೆದರೆ, ಎಬೊದತ್ ಹೊಸೈನ್ ಹಾಗೂ ಖಾಲಿದ್ ಅಹಮದ್ ತಲಾ ಒಂದೊಂದು ವಿಕೆಟ್ ಕಬಳಿಸಿದರು. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಟೀಂ ಇಂಡಿಯಾ, ಆರಂಭದಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 48 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಆದರೆ ನಾಲ್ಕನೇ ವಿಕೆಟ್‌ಗೆ ರಿಷಭ್ ಪಂತ್ ಹಾಗೂ ಚೇತೇಶ್ವರ್ ಪೂಜಾರ ಜೋಡಿ ಚುರುಕಿನ 64 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ರಿಷಭ್‌ ಪಂತ್ ಕೇವಲ 45 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 46 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು.

ರಿಷಭ್ ಪಂತ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ಶ್ರೇಯಸ್ ಅಯ್ಯರ್, ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಜತೆಗೂಡಿ ಸಮಯೋಚಿತ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಐದನೇ ವಿಕೆಟ್‌ಗೆ ಈ ಜೋಡಿ 317 ಎಸೆತಗಳನ್ನು ಎದುರಿಸಿ 149 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಸಮಯೋಚಿತ ಬ್ಯಾಟಿಂಗ್ ನಡೆಸಿದ ಚೇತೇಶ್ವರ್ ಪೂಜಾರ ಕೇವಲ 10 ರನ್‌ ಅಂತರದಲ್ಲಿ ಶತಕ ವಂಚಿತರಾದರು. ಪೂಜಾರ 203 ಎಸೆತಗಳನ್ನು ಎದುರಿಸಿ 11 ಬೌಂಡರಿ ಸಹಿತ 90 ರನ್ ಬಾರಿಸಿ ತೈಜುಲ್ ಇಸ್ಲಾಂ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು. 

Follow Us:
Download App:
  • android
  • ios