* ಭಾರತ-ಆಸ್ಟ್ರೇಲಿಯಾ ನಡುವಿನ ನಿರ್ಣಾಯಕ ಟಿ20 ಪಂದ್ಯಕ್ಕೆ ಕ್ಷಣಗಣನೆ* ಈಗಾಗಲೇ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಜಯಿಸಿವೆ* ಬೌಲಿಂಗ್‌ನಲ್ಲಿ ಸಾಕಷ್ಟು ದುಬಾರಿಯಾಗುತ್ತಿರುವ ಹರ್ಷಲ್ ಪಟೇಲ್‌

ಹೈದರಾಬಾದ್‌(ಸೆ.25): ಟಿ20 ವಿಶ್ವಕಪ್‌ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿರುವ ಟೀಂ ಇಂಡಿಯಾ, ಭಾನುವಾರ ವಿಶ್ವ ಚಾಂಪಿಯನ್‌ ಆಸ್ಪ್ರೇಲಿಯಾ ವಿರುದ್ಧ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಸೆಣಸಲಿದೆ. ಮೊದಲ ಪಂದ್ಯದಲ್ಲಿ ಆಸೀಸ್‌ ಜಯಿಸಿದರೆ, 2ನೇ ಪಂದ್ಯವನ್ನು ಭಾರತ ಗೆದ್ದಿತ್ತು. ಸರಣಿ ಗೆಲುವಿಗಾಗಿ ಉಭಯ ತಂಡಗಳು ಪೈಪೋಟಿ ನಡೆಸಲಿವೆ.

ಭಾರತಕ್ಕೆ ತನ್ನ ಪ್ರಮುಖ ಬೌಲರ್‌ಗಳಾದ ವೇಗಿ ಹರ್ಷಲ್‌ ಪಟೇಲ್‌ ಹಾಗೂ ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಹಲ್‌ರ ಲಯದ್ದೇ ಚಿಂತೆಯಾಗಿದೆ. ಈ ಪಂದ್ಯದಲ್ಲಿ ಇಬ್ಬರೂ ಸುಧಾರಿತ ಪ್ರದರ್ಶನ ತೋರಬೇಕಾದ ಒತ್ತಡದಲ್ಲಿದ್ದಾರೆ. ಡೆತ್ ಓವರ್ ಸ್ಪೆಷಲಿಸ್ಟ್‌ ಎಂದೇ ಗುರುತಿಸಿಕೊಂಡಿರುವ ಹರ್ಷಲ್ ಪಟೇಲ್ ಮೊದಲೆರಡು ಟಿ20 ಪಂದ್ಯಗಳಲ್ಲೂ ಸಾಕಷ್ಟು ದುಬಾರಿಯಾಗಿದ್ದಾರೆ. ಮೊದಲ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 49 ರನ್ ನೀಡಿದ್ದ ಹರ್ಷಲ್ ಪಟೇಲ್, ಎರಡನೇ ಟಿ20 ಪಂದ್ಯದಲ್ಲಿ ಕೇವಲ 2 ಓವರ್‌ ಬೌಲಿಂಗ್ ಮಾಡಿ 32 ರನ್ ನೀಡಿ ದುಬಾರಿ ಎನಿಸಿಕೊಂಡಿದ್ದರು. ಇನ್ನೊಂದೆಡೆ ತಂಡದ ಸ್ಟಾರ್ ಸ್ಪಿನ್ನರ್ ಯುಜುವೇಂದ್ರ ಚಹಲ್ ದುಬಾರಿ ಬೌಲರ್ ಎನಿಸಿಕೊಳ್ಳುವುದರ ಜತೆಗೆ ವಿಕೆಟ್ ಕಬಳಿಸಲು ಸಹ ವಿಫಲವಾಗುತ್ತಿರುವುದು ತಂಡದ ತಲೆನೋವು ಹೆಚ್ಚುವಂತೆ ಮಾಡಿದೆ. 

ಏಷ್ಯಾಕಪ್ ಟೂರ್ನಿಯ ವೇಳೆಯೇ ರವೀಂದ್ರ ಜಡೇಜಾ ಗಾಯಗೊಂಡು ಹೊರಬಿದ್ದ ಬಳಿಕ ಅವರ ಸ್ಥಾನವನ್ನು ಅಕ್ಷರ್‌ ಪಟೇಲ್‌ ಯಶಸ್ವಿಯಾಗಿ ತುಂಬಿದ್ದಾರೆ. ದಿನೇಶ್‌ ಕಾರ್ತಿಕ್‌ ಹಾಗೂ ರಿಷಭ್‌ ಪಂತ್‌ ಇಬ್ಬರನ್ನೂ ಆಡುವ ಹನ್ನೊಂದರಲ್ಲಿ ಆಯ್ಕೆ ಮಾಡುವ ಪ್ರಯೋಗವನ್ನು ನಾಗ್ಪುರ ಪಂದ್ಯದಲ್ಲಿ ಮಾಡಲಾಗಿತ್ತು. ಈ ಪ್ರಯೋಗ ಮುಂದುವರಿಯಬಹುದು. ಕೆ ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ, ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಕೂಡಾ ಉತ್ತಮ ಲಯದಲ್ಲಿದ್ದಾರೆ. ಇನ್ನು ಬೌಲರ್‌ಗಳು ಕೂಡಾ ಶಿಸ್ತುಬದ್ದ ದಾಳಿ ನಡೆಸಿದರೆ, ಟಿ20 ಸರಣಿ ಟೀಂ ಇಂಡಿಯಾ ಪಾಲಾಗಲಿದೆ. 

DK ಅಂದ್ರೆ ಡೆತ್ ಓವರ್ ಕಿಲ್ಲರ್; ದಿನೇಶ್ ಕಾರ್ತಿಕ್ ಆಟಕ್ಕೆ ಫ್ಯಾನ್ಸ್ ಫಿದಾ..!

ಆಸ್ಪ್ರೇಲಿಯಾ ತನ್ನ ಬೌಲಿಂಗ್‌ ಹಾಗೂ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಿಕೊಳ್ಳಲು ಎದುರು ನೋಡುತ್ತಿದೆ. ತಂಡ ಸರಣಿ ಗೆದ್ದ ಸಂಭ್ರಮದೊಂದಿಗೆ ತವರಿಗೆ ಮರಳಲು ಕಾತರಿಸುತ್ತಿದೆ. ಫಿಂಚ್ ಜತೆಗೆ ಕ್ಯಾಮರೋನ್ ಗ್ರೀನ್ ಸ್ಪೋಟಕ ಆರಂಭ ಒದಗಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ. ತಾರಾ ಆಲ್ರೌಂಡರ್ ಗ್ಲೆನ್‌ ಮ್ಯಾಕ್ಸ್‌ವೆಲ್‌ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್‌ ಹಾಗೂ ಟಿಮ್ ಡೇವಿಡ್ ಅಬ್ಬರಿಸಿದರೆ ಆಸ್ಟ್ರೇಲಿಯಾ ತಂಡವನ್ನು ನಿಯಂತ್ರಿಸುವುದು ಸುಲಭದ ಮಾತಲ್ಲ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಕೆ ಎಲ್ ರಾಹುಲ್‌, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್‌ ಪಾಂಡ್ಯ, ದಿನೇಶ್ ಕಾರ್ತಿಕ್‌, ರಿಷಭ್ ಪಂತ್‌, ಅಕ್ಷರ್‌ ಪಟೇಲ್, ಹರ್ಷಲ್‌ ಪಟೇಲ್, ಜಸ್ಪ್ರೀತ್ ಬುಮ್ರಾ, ಯುಜುವೇಂದ್ರ ಚಹಲ್‌.

ಆಸ್ಪ್ರೇಲಿಯಾ: ಆರೋನ್ ಫಿಂಚ್‌(ನಾಯಕ), ಕ್ಯಾಮರೋನ್ ಗ್ರೀನ್‌, ಸ್ಟೀವ್ ಸ್ಮಿತ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ಟಿಮ್ ಡೇವಿಡ್‌, ಮ್ಯಾಥ್ಯೂ ವೇಡ್‌, ಡೇನಿಯಲ್ ಸ್ಯಾಮ್ಸ್‌, ಶಾನ್ ಅಬಾಟ್‌, ಪ್ಯಾಟ್ ಕಮಿನ್ಸ್‌, ಆಡಂ ಜಂಪಾ, ಜೋಶ್ ಹೇಜಲ್‌ವುಡ್‌.

ಪಂದ್ಯ: ಸಂಜೆ 7ಕ್ಕೆ
ಸ್ಥಳ: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂ, ಹೈದರಾಬಾದ್‌
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌