Asianet Suvarna News Asianet Suvarna News

DK ಅಂದ್ರೆ ಡೆತ್ ಓವರ್ ಕಿಲ್ಲರ್; ದಿನೇಶ್ ಕಾರ್ತಿಕ್ ಆಟಕ್ಕೆ ಫ್ಯಾನ್ಸ್ ಫಿದಾ..!

* ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಭಾರತ ಜಯಭೇರಿ
* ಡೆತ್ ಓವರ್‌ನಲ್ಲಿ ಭಾರತವನ್ನು ಗೆಲ್ಲಿಸಿದ ದಿನೇಶ್ ಕಾರ್ತಿಕ್
* ದಿನೇಶ್ ಕಾರ್ತಿಕ್ ಬ್ಯಾಟಿಂಗ್‌ಗೆ ನೆಟ್ಟಿಗರು ಫಿದಾ

Wicket Keeper Batter Dinesh Karthik Finishes 2nd T20I against Australia In Style With Six And Four In Last Over kvn
Author
First Published Sep 24, 2022, 4:52 PM IST

ನಾಗ್ಪುರ(ಸೆ.24): ಆಸ್ಟ್ರೆಲಿಯಾ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 6 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ನಾಗ್ಪುರದಲ್ಲಿ ನಡೆದ 8 ಓವರ್‌ಗಳ ಚುಟುಕು ಕ್ರಿಕೆಟ್‌ ಪಂದ್ಯದಲ್ಲಿ ರನ್‌ ಮಳೆಯೇ ಹರಿದಿದ್ದು, ಕೊನೆಗೂ ರೋಚಕ ಜಯ ಸಾಧಿಸುವ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ ಸಮಬಲ ಸಾಧಿಸಿದೆ. ಕೊನೆಯಲ್ಲಿ ಬಂದು ಮ್ಯಾಚ್ ಫಿನಿಶ್ ಮಾಡಿದ ದಿನೇಶ್ ಕಾರ್ತಿಕ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಹೌದು, ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಗೆಲುವಿನ ನಗೆ ಬೀರಿತ್ತು. ಹೀಗಾಗಿ ಸರಣಿ ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಎರಡನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಭಾರತ ತಂಡವು ಸಿಲುಕಿತ್ತು. ಶುಕ್ರವಾರ ಇಡೀ ದಿನ ಮಳೆ ಬರದಿದ್ದರೂ ಕಳೆದ ಒಂದೆರಡು ದಿನ ಸುರಿದಿದ್ದ ಮಳೆಯಿಂದಾಗಿ ಮೈದಾನದಲ್ಲಿ ನೀರು ನಿಂತಿತ್ತು. ಮಿಡ್‌ ವಿಕೆಟ್‌ ಬೌಂಡರಿ ಬಳಿ ಭಾರೀ ತೇವಾಂಶವಿತ್ತು. ಕಾಲಿಟ್ಟರೆ ಜಾರುವ ಪರಿಸ್ಥಿತಿ ಇದ್ದ ಕಾರಣ ಆ ಸ್ಥಳವನ್ನು ಒಣಗಿಸಲು ಮೈದಾನ ಸಿಬ್ಬಂದಿ ಹರಸಾಹಸ ಪಟ್ಟರು. ಪರಿಸ್ಥಿತಿಯನ್ನು ಅವಲೋಕಿಸಿದ ಅಂಪೈರ್ 8 ಓವರ್‌ಗಳ ಪಂದ್ಯ ಆಯೋಜಿಸಲು ತೀರ್ಮಾನಿಸಿದರು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ನಿಗದಿತ 8 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 90 ರನ್ ಬಾರಿಸಿತ್ತು. ಇನ್ನು ಗುರಿ ಬೆನ್ನತ್ತಿದ ಟೀಂ ಇಂಡಿಯಾ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಕೆ ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಜೋಡಿ 2.4 ಓವರ್‌ಗಳಲ್ಲಿ 39 ರನ್‌ಗಳ ಜತೆಯಾಟ ನಿಭಾಯಿಸಿತು. ಇದರ ಹೊರತಾಗಿಯೂ ಕೊನೆಯಲ್ಲಿ ಕೆಲ ವಿಕೆಟ್ ಕಳೆದುಕೊಂಡಿದ್ದರಿಂದ ಕೊನೆಯ ಓವರ್‌ನಲ್ಲಿ ಭಾರತ ಗೆಲ್ಲಲು 9 ರನ್‌ಗಳ ಅಗತ್ಯವಿತ್ತು.

Ind vs Aus ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಹೊಸ ಮೈಲಿಗಲ್ಲು ನೆಟ್ಟ ರೋಹಿತ್ ಶರ್ಮಾ

ಇತ್ತೀಚಿಗಿನ ದಿನಗಳಲ್ಲಿ ಮ್ಯಾಚ್ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಬಂದಿರುವ ದಿನೇಶ್ ಕಾರ್ತಿಕ್‌, ಕೊನೆಯ ಓವರ್‌ನಲ್ಲಿ ಬೌಲಿಂಗ್ ಮಾಡಿದ ಡೇನಿಯಲ್‌ ಸ್ಯಾಮ್ಸ್‌ ಅವರ ಮೊದಲ ಎಸೆತವನ್ನು ಸಿಕ್ಸರ್ ಗಟ್ಟಿದ್ದ ಡಿಕೆ, ಎರಡನೇ ಎಸೆತದಲ್ಲಿ ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಟೀಂ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆಯೇ ನಾನ್‌ ಸ್ಟ್ರೈಕರ್‌ನಲ್ಲಿದ್ದ ರೋಹಿತ್ ಶರ್ಮಾ ಓಡಿ ಬಂದು ಡಿಕೆಯನ್ನು ಅಪ್ಪಿಕೊಂಡರು. ಈ ವಿಡಿಯೋ ವೈರಲ್ ಆಗಿದೆ.

ದಿನೇಶ್ ಕಾರ್ತಿಕ್, 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಬಳಿಕ ಭಾರತ ತಂಡದಿಂದ ಹೊರಬಿದ್ದಿದ್ದರು. ಆದರೆ ಕಳೆದ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೂಡಿಕೊಂಡ ಡಿಕೆ, ಬೌಲರ್‌ಗಳನ್ನು ಮನಬಂದಂತೆ ದಂಡಿಸುವ ಮೂಲಕ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡರು. ಇದಾದ ನಂತರ ಮತ್ತೆ ಟೀಂ ಇಂಡಿಯಾಗೆ ಎಂಟ್ರಿಕೊಟ್ಟ ದಿನೇಶ್ ಕಾರ್ತಿಕ್‌, ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. 

ಇದೀಗ ನೆಟ್ಟಿಗರು ಡಿಕೆ ಅಂದ್ರ ಡೆತ್ ಓವರ್‌ನ ಕಿಲ್ಲರ್ ಎಂದು ಬಣ್ಣಿಸಲಾರಂಭಿಸಿದ್ದಾರೆ. ಇದೇ ರೀತಿಯ ಪ್ರದರ್ಶನವನ್ನು ಡಿಕೆ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಮುಂದುವರೆಸಲಿ ಎನ್ನುವುದು ಟೀಂ ಇಂಡಿಯಾ ಅಭಿಮಾನಿಗಳ ಹಾರೈಕೆಯಾಗಿದೆ.

Follow Us:
Download App:
  • android
  • ios