Asianet Suvarna News Asianet Suvarna News

ಟೀಂ ಇಂಡಿಯಾ ಬೇವು, ಆಸ್ಟ್ರೇಲಿಯಾಗೆ ಬೆಲ್ಲ, 3ನೇ ಪಂದ್ಯದಲ್ಲಿ ಮುಗ್ಗರಿಸಿ ಸರಣಿ ಕೈಚೆಲ್ಲಿದ ಭಾರತ!

ಯುಗಾದಿ ಹಬ್ಬಕ್ಕೆ ಭಾರತಕ್ಕೆ ಗೆಲುವಿನ ಸಿಹಿ ಸಿಕ್ಕಿಲ್ಲ. ಇದರ ಜೊತೆಗೆ ಸರಣಿಯೂ ಕೈತಪ್ಪಿದೆ. 3ನೇ ಪಂದ್ಯದಲ್ಲಿ ಅನಗತ್ಯ ತಪ್ಪುಗಳನ್ನು ಮಾಡಿದ ಟೀಂ ಇಂಡಿಯಾ ಟಾರ್ಗೆಟ್ ಚೇಸ್ ಮಾಡಲು ವಿಫಲವಾಗಿದೆ. ಈ ಮೂಲಕ 1-2 ಅಂತರದಲ್ಲಿ ಸರಣಿ ಸೋತಿದೆ.

IND vs AUS Australia thrash team India by 21 runs in 3rd odi and lift trophy with 2 1 ckm
Author
First Published Mar 22, 2023, 10:11 PM IST

ಚೆನ್ನೈ(ಮಾ.22): ಯುಗಾದಿ ಹಬ್ಬಕ್ಕೆ ಗೆಲುವಿನ ಉಡುಗೊರೆ ನಿರೀಕ್ಷಿಸಿದ್ದ ಟೀಂ ಇಂಡಿಯಾ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಆಸ್ಟ್ರೇಲಿಯಾ ಬೆಲ್ಲದ ಸವಿಯುಂಡರೆ, ಭಾರತ ಸೋಲಿನ ಜೊತೆಗೆ ಸರಣಿ ಕೈಚೆಲ್ಲಿದ ಕಹಿ ಎದುರಾಗಿದೆ. ದಿಟ್ಟ ಹೋರಾಟ ನೀಡಿ ಚೇಸಿಂಗ್ ವಿಶ್ವಾಸ ಮೂಡಿಸಿದ್ದ ಟೀಂ ಇಂಡಿಯಾ ಅನಗತ್ಯ ತಪ್ಪುಗಳಿಂದ ಸೋಲಿನ ಆಘಾತ ಎದುರಿಸಿದೆ. 3ನೇ ಏಕದಿನದಲ್ಲಿ ಭಾರತ 248 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಆಸ್ಟ್ರೇಲಿಯಾ 21 ರನ್ ಗೆಲುವು ದಾಖಲಿಸಿದೆ. ಇದರ ಜೊತೆಗೆ 2-1 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ.  

ಆಸ್ಟ್ರೇಲಿಯಾ ನೀಡಿದ 270 ರನ್ ಟಾರ್ಗಟ್ ಚೇಸ್ ಮಾಡಲು ಕಣಕ್ಕಿಳಿದ ಟೀಂ ಇಂಡಿಯಾಗೆ ಡೀಸೆಂಟ್ ಆರಂಭ ಸಿಕ್ಕಿತು. ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಮೊದಲ ವಿಕೆಟ್‌ಗೆ 65 ರನ್ ಜೊತೆಯಾಟ ನೀಡಿದರು. ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾದರು. ಹೀಗಾಗಿ ರೋಹಿತ್ 17 ಎಸೆತದಲ್ಲಿ 30 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇತ್ತ ಗಿಲ್ ಎಚ್ಚರಿಕೆ ಹೆಜ್ಜೆ ಮೂಲಕ 37 ರನ್ ಸಿಡಿಸಿ ಔಟಾದರು.

ಮೊನ್ನೆ ನಾಟು ನಾಟು, ಇಂದು ಲುಂಗಿ ಡ್ಯಾನ್ಸ್, ಕೊಹ್ಲಿ ಸ್ಟೆಪ್ಸ್‌ಗೆ ಅಭಿಮಾನಿಗಳು ಫಿದಾ!

77 ರನ್‌ಗೆ 2 ವಿಕೆಟ್ ಕಳೆದುಕೊಂಡ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಜೊತೆಯಾಟ ನೆರವಾಯಿತು. ಕೊಹ್ಲಿ ಹಾಗೂ ರಾಹುಲ್ ಬ್ಯಾಟಿಂಗ್ ಟೀಂ ಇಂಡಿಯಾವನ್ನು ಆಪತ್ತಿನಿಂದ ಪಾರು ಮಾಡಿತು. ಆದರೆ ಸಿಕ್ಸರ್ ಮೂಲಕ ಅಬ್ಬರ ಆರಂಭಿಸಿದ ರಾಹುಲ್ 32 ರನ್ ಸಿಡಿಸಿ ಔಟಾದರು. ರಾಹುಲ್ ವಿಕೆಟ್ ಪತನ ಟೀಂ ಇಂಡಿಯಾದಲ್ಲಿ ಆತಂಕ ಛಾಯೆ ಮೂಡಿಸಿತು. ಇದರ ಬೆನ್ನಲ್ಲೇ ಬಡ್ತಿ ಪಡೆದು ಕಣಕ್ಕಿಳಿದ ಅಕ್ಸರ್ ಪಟೇಲ್ ವಿನಾಕಾರಣ ರನೌಟ್‌ಗೆ ಬಲಿಯಾದರು. ಟೀಂ ಇಂಡಿಯಾ 152 ರನ್‌ಗೆ 4 ವಿಕೆಟ್ ಕಳೆದುಕೊಂಡಿತು.

ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಈ ಮೂಲಕ ಟೀಂ ಇಂಡಿಯಾ ಅಭಿಮಾನಿಗಳ ಚಿಂತೆ ದೂರವಾಯಿತು. ಆದರೆ ಸಿಕ್ಸರ್ ಪ್ರಯತ್ನಿಸಿದ ಕೊಹ್ಲಿ, ನೇರವಾಗಿ ಡೇವಿಡ್ ವಾರ್ನರ್‌ಗೆ ಕ್ಯಾಚ್ ನೀಡಿ ವಿಕೆಟ್ ಕೈಚೆಲ್ಲಿದದರು. 54 ರನ್ ಸಿಡಿಸಿದ ಕೊಹ್ಲಿ ವಿಕೆಟ್ ಪತನ ಟೀಂ ಇಂಡಿಯಾದಲ್ಲಿ ಸೋಲಿನ ಗೆರೆ ಮೂಡಿಸಿತು. ಇದರ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ವಿಕೆಟ್ ಪತನ ಟೀಂ ಇಂಡಿಯಾವನ್ನು ಸೋಲಿನ ಸಂಕಷ್ಟಕ್ಕೆ ತಳ್ಳಿತು.

ICC ODI World Cup 2023: ಫೈನಲ್‌ಗೆ ಮೋದಿ ಸ್ಟೇಡಿಯಂ ಆತಿಥ್ಯ, 12 ನಗರಗಳಲ್ಲಿ ನಡೆಯಲಿದೆ ಕ್ರಿಕೆಟ್ ಮಹಾ ಸಂಗ್ರಾಮ

ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಜೊತೆಯಾಟ ಮತ್ತೆ ಟೀಂ ಇಂಡಿಯಾದಲ್ಲಿ ಗೆಲುವಿನ ಆಸೆ ಚಿಗುರಿಸಿತು. ಒಂದು ಹಂತದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಜಡೇಜಾ ಪಂದ್ಯದ ಮೇಲೆ ಹಿಡಿತ ಸಾಧಿಸಲು ಆರಂಭಿಸಿದರು. ಇದರಿಂದ ಟೀಂ ಇಂಡಿಯಾದ ಆತ್ಮವಿಶ್ವಾಸ ಹೆಚ್ಚಾಯಿತು. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಹಾರ್ದಿಕ್ 40 ರನ್ ಸಿಡಿಸಿ ನಿರ್ಗಮಿಸಿದರು.

ಇತ್ತ 18 ರನ್ ಸಿಡಿಸಿ ಆಸರೆಯಾಗಿದ್ದ ರವೀಂದ್ರ ಜಡೇಜಾ ಕೂಡ ನಿರ್ಗಮಿಸಿದರು. 225 ರನ್‌ಗೆ 8 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು. ಮೊಹಮ್ಮದ್ ಶಮಿ 14 ರನ್ ಕಾಣಿಕೆ ನೀಡಿ ಔಟಾದರು. ಟೀಂ ಇಂಡಿಯಾ ಗೆಲುವಿಗೆ ಅಂತಿಮ 6 ಎಸೆತದಲ್ಲಿ 22 ರನ್ ಅವಶ್ಯಕತೆ ಇತ್ತು.  ಅಂತಿಮ ಓವರ್‌ನ ಮೊದಲ ಎಸೆತದಲ್ಲಿ ಕುಲ್ದೀಪ್ ಯಾದವ್ ವಿಕೆಟ್ ಪತನಗೊಂಡಿತು. ಈ ಮೂಲಕ ಭಾರತ 49.1 ಓವರ್‌ನಲ್ಲಿ 248 ರನ್‌ಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ 21 ರನ್ ಗೆಲುವು ದಾಖಲಿಸಿ 2-1 ಅಂತರದಲ್ಲಿ ಸರಣಿ ಗೆದ್ದುಕೊಂಡಿತು. 
 

Follow Us:
Download App:
  • android
  • ios