ನವದೆಹಲಿ(ಜೂ.22): ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನತೆ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಟೀಂ ಇಂಡಿಯಾ ಅನುಭವಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ಕುತಂತ್ರಿ ಚೀನಾ ವಿರುದ್ಧ ಕಿಡಿಕಾರಿದ್ದಾರೆ. ಭಾರತದ ನಂಬಿಕೆಗೆ ಚೀನಾ ಎಂದಿಗೂ ಅರ್ಹವಲ್ಲ ಎಂದು ರೈನಾ ಗುಡುಗಿದ್ದಾರೆ.

ಭಾರತೀಯ ಸೈನಿಕರನ್ನು ಹತ್ಯೆ ಮಾಡಿದ್ದಕ್ಕಾಗಿ ಚೀನಾ ವಿರುದ್ಧ ಸಿಟ್ಟು ಬರುತ್ತಿದೆ. ಸರ್ಕಾರ ಇಲ್ಲಿಯವರೆಗೆ ಏನೆಲ್ಲಾ ಮಾಡಿದೆಯೋ ಒಳ್ಳೆಯ ಕೆಲಸವನ್ನೇ ಮಾಡಿದೆ. ಆದರೆ ನಮ್ಮ ಸೈನಿಕರು ಪ್ರಾಣ ಕಳೆದುಕೊಂಡಿದ್ದು ಬೇಸರದ ಸಂಗತಿ. ಇಲ್ಲಿ ಬೆಚ್ಚಗೆ ಕುಳಿತುಕೊಂಡು ಮಾತನಾಡುವುದು ಸುಲಭ. ಆದರೆ ಗಡಿಯಲ್ಲಿ ಕೆಲಸ ಮಾಡುವುದು ಅಷ್ಟು ಸುಲಭವಲ್ಲ. ಅವರ ಕೆಲಸವನ್ನು ಹೊಗಳಲು ಪದಗಳು ಸಾಲುತ್ತಿಲ್ಲ ಎಂದು ರೈನಾ ಹೇಳಿದ್ದಾರೆ.  ನಮ್ಮ ಸೈನ್ಯ ಬಲಿಷ್ಠವಾಗಿಯೇ ಇದೆ. ಪ್ರತಿಯೊಬ್ಬ ಸೈನಿಕನಿಗೂ ನನ್ನದೊಂದು ಸಲಾಮ್. ಮೊದಲು ಕೊರೋನಾ ಬಂತು, ಈಗ ಗಡಿಯಲ್ಲಿ ಘರ್ಷಣೆ. ಇದನ್ನೆಲ್ಲಾ ನೋಡಿದ್ರೆ ಇದೆಲ್ಲಾ ಮೊದಲೇ ತೀರ್ಮಾನವಾಗಿತ್ತೇನೋ ಎಂದು ಅನಿಸಲಾರಂಭಿಸಿದೆ. ನಮ್ಮ ಸೈನಿಕರು ಬಲಿಷ್ಠರಾಗಿದ್ದಾರೆ, ಅವರ ಧೈರ್ಯವನ್ನು ಮೆಚ್ಚಲೇ ಬೇಕು. ನಮ್ಮ ಸೈನಿಕರೆಲ್ಲಾ ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ರೈನಾ ಹೇಳಿದ್ದಾರೆ.

ಪೂರ್ವ ಲಡಾಖ್‌ನ ಗಲ್ವಾನ್ ಪ್ರದೇಶದಲ್ಲಿ ಜೂನ್ 15ರಿಂದ ಭಾರತ-ಚೀನಾ ಸೈನಿಕರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಈ ಘಟನೆಯಲ್ಲಿ ಭಾರತದ 20 ವೀರ ಯೋಧರು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಚೀನಿ ವಸ್ತುಗಳನ್ನು ಬಾಯ್ಕಾಟ್ ಮಾಡಬೇಕು ಎನ್ನುವ ಅಭಿಯಾನ ಜೋರಾಗಿ ಕೇಳಿ ಬರುತ್ತಿದೆ. ಚೀನಾ ಉತ್ಫನ್ನಗಳ ಪ್ರಾಯೋಜಕತ್ವದ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ಮುಂದಿನವಾರ ನಡೆಯಲಿರುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದೆ. ಸದ್ಯ ಚೀನಾ ಮೊಬೈಲ್ ಉತ್ಪಾದನಾ ಕಂಪನಿ ವಿವೋ 5 ವರ್ಷದ ಅವಧಿಗೆ ಟೈಟಲ್ ಸ್ಪಾನ್ಸರ್‌ಶಿಪ್ ಹಕ್ಕು ಪಡೆದಿದೆ. ಇದಕ್ಕಾಗಿ ವಿವೋ ಕಂಪನಿಯು ಬಿಸಿಸಿಐಗೆ ವಾರ್ಷಿಕ 440 ಕೋಟಿ ರುಪಾಯಿಗಳನ್ನು ನೀಡುತ್ತಿದೆ.

ಚೀನಾ ವಸ್ತು ಪ್ರಚಾರ ಮಾಡಲ್ಲ, ಬಳಸಲ್ಲ; ಪ್ರತಿಜ್ಞೆ ಮಾಡಿದ ಹರ್ಭಜನ್!

ಸ್ಪಾನ್ಸರ್‌ಶಿಪ್‌ ಬಗ್ಗೆ ಬಿಸಿಸಿಐ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ನಮ್ಮ ಕೆಲಸವೇನಿದ್ದರು ಉತ್ತಮವಾಗಿ ಆಡುವುದು, ಈ ಮೂಲಕ ದೇಶದ ಗೌರವ ಹೆಚ್ಚುವಂತೆ ಮಾಡುವುದಾಗಿದೆ.  ಒಂದುವೇಳೆ ಪ್ರಧಾನಿ ಹೇಳಿದರೆ ನಾವು ಗಡಿಯಲ್ಲಿ ಸೇವೆ ಸಲ್ಲಿಸಲು ರೆಡಿಯಿದ್ದೇವೆ. ಪ್ರತಿಯೊಬ್ಬ ಸೈನಿಕರಿಗೂ ಗೊತ್ತಿದೆ, ಇಡೀ ದೇಶದ ಜನರು ಅವರ ಜೊತೆಗಿದ್ದಾರೆಂದು ಎಂದು ರೈನಾ ಹೇಳಿದ್ದಾರೆ. ಎರಡು ದಿನಗಳ ಹಿಂದಷ್ಟೇ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಚೀನಾ ವಸ್ತುಗಳನ್ನು ಪ್ರಚಾರ ಮಾಡಲ್ಲ ಹಾಗೆಯೇ ಬಳಸುವುದು ಇಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.

ನನ್ನದು ಸೈನ್ಯದ ಹಿನ್ನಲೆಯಿರುವ ಕುಟುಂಬ. ಸೈನಿಕರ ಜೀವನ ಅಷ್ಟು ಸುಲಭವಲ್ಲ ಎನ್ನುವುದು ನೆನಪಿರಲಿ. ಚೀನಾ ಭಾರತದ ನಂಬಿಕೆಗೆ ಅರ್ಹವಲ್ಲ. ಚೀನಾ ಉತ್ಫನ್ನಗಳನ್ನು ಬಳಸದಿರುವುದರಿಂದ ಏನನ್ನು ಕಳೆದುಕೊಳ್ಳುವುದಿಲ್ಲ ಎಂದು ರೈನಾ ಅಬ್ಬರಿಸಿದ್ದಾರೆ.