ಮುಂದಿನ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಕೆಲ ಬದಲಾವಣೆ ತರಲು ಮುಂದಾದ ಐಸಿಸಿ
* ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭ
* ಚೊಚ್ಚಲ ಆವೃತ್ತಿಯ ಫೈನಲ್‌ನಲ್ಲಿ ಭಾರತ-ನ್ಯೂಜಿಲೆಂಡ್ ಮುಖಾಮುಖಿ
* ಎರಡನೇ ಆವೃತ್ತಿಯ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಕೆಲವು ಬದಲಾವಣೆ ಸಾಧ್ಯತೆ.
ನವದೆಹಲಿ(ಜೂ.15): ತೀವ್ರ ಚರ್ಚೆಗೊಳಗಾಗಿರುವ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಅಂಕ ನೀಡಿಕೆ ಮಾದರಿಯನ್ನು ಬದಲಾಯಿಸಲು ಐಸಿಸಿ ಚಿಂತನೆ ನಡೆಸಿದೆ ಎಂದು ಅದರ ಹಂಗಾಮಿ ಸಿಇಒ ಜೆಫ್ ಅಲರ್ಡೈಸ್ ತಿಳಿಸಿದ್ದಾರೆ.
ಎರಡು ವರ್ಷಗಳ ಕಾಲ ನಡೆಯಲಿರುವ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಕೋವಿಡ್ ಕಾರಣದಿಂದಾಗಿ ಸಾಕಷ್ಟು ಅನಿಶ್ಚಿತತೆಗೆ ಒಳಗಾಗಿತ್ತು. ಹಲವು ದ್ವಿಪಕ್ಷಿಯ ಟೆಸ್ಟ್ ಸರಣಿಗಳು ರದ್ದಾದರೆ, ಮತ್ತೆ ಕೆಲವು ಟೂರ್ನಿಗಳು ಅನಿವಾರ್ಯವಾಗಿ ಮುಂದೂಡಲ್ಪಟ್ಟಿದ್ದವು. ಹೀಗಾಗಿ ಐಸಿಸಿ ತನ್ನ ನಿಯಮಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ತರಲು ಮುಂದಾಗಿದೆ.
ಸದ್ಯದ ಮಾದರಿ ಪ್ರಕಾರ ಪ್ರತಿ ಸರಣಿ 120 ಅಂಕ ಹೊಂದಿದೆ. 2 ಪಂದ್ಯಗಳ ಸರಣಿ ಆಗಿದ್ದರೆ ಪ್ರತಿ ಪಂದ್ಯ 60 ಅಂಕ ಹೊಂದಿದ್ದರೆ, 4 ಪಂದ್ಯಗಳ ಸರಣಿಯಲ್ಲಿ ಪ್ರತಿ ಪಂದ್ಯ 30 ಅಂಕ ಹೊಂದಿರುತ್ತದೆ. ಈ ಮಾದರಿಯ ಬದಲಾಗಿ ಪ್ರತಿ ಪಂದ್ಯಕ್ಕೂ ಸಮಾನ ಅಂಕಗಳ ಮಾದರಿ ಜಾರಿಗೊಳಿಸುವ ಚಿಂತನೆಯನ್ನು ಐಸಿಸಿ ಹೊಂದಿದೆ.
ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ನ್ಯೂಜಿಲೆಂಡ್‌ಗೆ ಹೆಚ್ಚು ಅನುಕೂಲವೆಂದ ಪೂಜಾರ
ಚೊಚ್ಚಲ ಆವೃತ್ತಿಯ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹಾಗೂ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಜೂನ್ 18ರಿಂದ ಆರಂಭವಾಗಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕೆ ಸೌಥಾಂಪ್ಟನ್ ಆತಿಥ್ಯವನ್ನು ವಹಿಸಿದೆ.