* ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಟೀಂ ಇಂಡಿಯಾ ರೆಡಿ* ಭಾರತಕ್ಕಿಂತ ಕಿವೀಸ್‌ಗೆ ಹೆಚ್ಚು ಲಾಭವೆಂದ ಚೇತೇಶ್ವರ್ ಪೂಜಾರ* ಚೇತೇಶ್ವರ್ ಪೂಜಾರ ಭಾರತ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್

ಸೌಥಾಂಪ್ಟನ್‌(ಜೂ.14): ಇಂಗ್ಲೆಂಡ್ ವಾತಾವರಣದಲ್ಲಿ ಆತಿಥೇಯರ ಎದುರು ಎರಡು ಟೆಸ್ಟ್‌ ಪಂದ್ಯಗಳನ್ನಾಡಿರುವ ನ್ಯೂಜಿಲೆಂಡ್ ತಂಡಕ್ಕೆ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಅನುಕೂಲವಾಗಲಿದೆ ಎಂದು ಟೀಂ ಇಂಡಿಯಾ ಟೆಸ್ಟ್‌ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ದದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ನ್ಯೂಜಿಲೆಂಡ್ ತಂಡ 1-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ. ಲಾರ್ಡ್ಸ್‌ನಲ್ಲಿ ನಡೆದ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಇನ್ನು ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಕಿವೀಸ್ ತಂಡ 8 ವಿಕೆಟ್‌ ಅಂತರದಲ್ಲಿ ಜಯಿಸುವ ಮೂಲಕ ಆತಿಥೇಯರಿಗೆ ತವರಿನಲ್ಲೇ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ ಟೀಂ ಇಂಡಿಯಾ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಸೌಥಾಂಪ್ಟನ್‌ನಲ್ಲೇ ಅಭ್ಯಾಸ ನಡೆಸುತ್ತಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ಜೂನ್ 18ರಿಂದ ಸೌಥಾಂಪ್ಟನ್‌ನಲ್ಲಿ ಆರಂಭವಾಗಲಿದೆ.

ಇಂಗ್ಲೆಂಡ್ ವಾತಾವರಣದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಈಗಾಗಲೇ ಎರಡು ಟೆಸ್ಟ್‌ ಪಂದ್ಯಗಳನ್ನಾಡಿರುವುದರಿಂದ ಸಹಜವಾಗಿಯೇ ಅವರಿಗೆ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಅನುಕೂಲವಾಗಲಿದೆ. ನಾವು ಫೈನಲ್ ಪ್ರವೇಶಿಸಿರುವುದರಿಂದ, ನಾವೆಲ್ಲರೂ ಉತ್ತಮ ಪ್ರದರ್ಶನ ತೋರಿದರೆ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಗೆಲ್ಲಬಹುದು ಎನ್ನುವ ವಿಶ್ವಾಸವಿದೆ ಎಂದು ಬಿಸಿಸಿಐ ಟಿವಿಗೆ ನೀಡಿದ ಸಂದರ್ಶನದಲ್ಲಿ ಚೇತೇಶ್ವರ್ ಪೂಜಾರ ಅಭಿಪ್ರಾಯಪಟ್ಟಿದ್ದಾರೆ.

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌‌: ಮತ್ತೆ ಅಗ್ರಸ್ಥಾನಕ್ಕೇರಿದ ನ್ಯೂಜಿಲೆಂಡ್‌

ನಾವು ನ್ಯೂಜಿಲೆಂಡ್ ತಂಡದ ಬಗ್ಗೆ ಹೆಚ್ಚು ಯೋಚಿಸಲು ಹೋಗುವುದಿಲ್ಲ, ಬದಲಾಗಿ ನಮಗೆ ಸಿಕ್ಕಿರುವ ಕಾಲಾವಕಾಶದಲ್ಲಿ ಉತ್ತಮವಾಗಿ ಅಭ್ಯಾಸ ಮಾಡುವತ್ತ ಗಮನ ಹರಿಸಿದ್ದೇವೆ. ಇರುವ ಸಮಯವನ್ನು ಸರಿಯಾಗಿ ಬಳಸಿಕೊಂಡರೆ, ತಂಡದ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ತೋರಲಿದೆ ಎಂದು ಪೂಜಾರ ಹೇಳಿದ್ದಾರೆ.

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಿರುವುದೇ ಟೀಂ ಇಂಡಿಯಾದ ಒಂದು ಸಾಧನೆ. ಅದರಲ್ಲೂ ನನಗಂತೂ ಇದು ವಿಶೇಷ ಅನುಭವ. ಯಾಕೆಂದರೆ ನಾನು ಭಾರತ ಟೆಸ್ಟ್ ತಂಡವನ್ನು ಮಾತ್ರ ಪ್ರತಿನಿಧಿಸುತ್ತಿದ್ದೇನೆ. ಟೆಸ್ಟ್ ಕ್ರಿಕೆಟ್‌ ಒಂದು ಸವಾಲಿನ ಕ್ರಿಕೆಟ್ ಮಾದರಿ. ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪ್ರವೇಶಿಸಲು ತಂಡವಾಗಿ ನಾವೆಲ್ಲರೂ ಕಠಿಣ ಪರಿಶ್ರಮ ಹಾಕಿದ್ದೇವೆ ಎಂದು ಪೂಜಾರ ಹೇಳಿದ್ದಾರೆ.