* ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಮೊದಲ ಬಾರಿಗೆ ತಟಸ್ಥ ಸ್ಥಳದಲ್ಲಿ ಪಂದ್ಯವಾಡಲು ಸಜ್ಜಾದ ಟೀಂ ಇಂಡಿಯಾ* ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಮುಖಾಮುಖಿ* ಇಂಗ್ಲೆಂಡ್‌ನ ಸೌಥಾಂಪ್ಟನ್‌ನಲ್ಲಿ ನಡೆಯಲಿದೆ ಚೊಚ್ಚಲ ಟೆಸ್ಟ್ ವಿಶ್ವಕಪ್ ಫೈನಲ್

ನವದೆಹಲಿ(ಮೇ.24): ಭಾರತೀಯ ಕ್ರಿಕೆಟ್‌ನ 89 ವರ್ಷಗಳ ಟೆಸ್ಟ್‌ ಇತಿಹಾಸದಲ್ಲಿ ಮೊದಲ ಬಾರಿಗೆ ತಟಸ್ಥ ಸ್ಥಳದಲ್ಲಿ ಟೆಸ್ಟ್‌ ಪಂದ್ಯವನ್ನು ಆಡಲು ಭಾರತ ತಂಡ ಸಜ್ಜಾಗಿದೆ. ನ್ಯೂಜಿಲೆಂಡ್‌ ವಿರುದ್ಧದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ಇಂಗ್ಲೆಂಡ್‌ನ ಸೌಥಾಂಪ್ಟನ್‌ನಲ್ಲಿ ನಡೆಯಲಿದೆ. 

ಇಷ್ಟು ದಿನ ಟೀಂ ಇಂಡಿಯಾ ತನ್ನ ತವರು ಇಲ್ಲವೇ ಎದುರಾಳಿಯ ತವರಿನಲ್ಲಿ ಮಾತ್ರ ಆಡಿದೆ. ಭಾರತ ಹಾಗೂ ಬಾಂಗ್ಲಾದೇಶ ಮಾತ್ರ ಈ ವರೆಗೂ ತಟಸ್ಥ ಸ್ಥಳದಲ್ಲಿ ಟೆಸ್ಟ್‌ ಪಂದ್ಯವನ್ನು ಆಡಿರಲಿಲ್ಲ. 2009ರ ಬಳಿಕ ಪಾಕಿಸ್ತಾನದ ಬಹುತೇಕ ಟೆಸ್ಟ್‌ ಸರಣಿಗಳು ಯುಎಇನಲ್ಲಿ ನಡೆದಿವೆ. ಭಾರತ, ಪಾಕಿಸ್ತಾನ ವಿರುದ್ಧ ಕಳೆದೊಂದು ದಶಕದಲ್ಲಿ ಟೆಸ್ಟ್‌ ಆಡಿಲ್ಲ.

ಪಟೌಡಿ ಸರಣಿ ಮುಂದೂಡಿ ಇಂಗ್ಲೆಂಡ್‌ನಲ್ಲಿ IPL ಆಯೋಜಿಸುವ ವರದಿ ಸುಳ್ಳು;BCCI ಸ್ಪಷ್ಟನೆ!

ಬಹುನಿರೀಕ್ಷಿತ ಚೊಚ್ಚಲ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯವು ಜೂನ್‌ 18ರಿಂದ 22ರವರೆಗೆ ನಡೆಯಲಿದೆ. ಕೇನ್‌ ವಿಲಿಯಮ್ಸನ್‌ ನೇತೃತ್ವದ ನ್ಯೂಜಿಲೆಂಡ್ ತಂಡವು ವಿರಾಟ್ ಕೊಹ್ಲಿ ನೇತೃತ್ವದ ಬಲಿಷ್ಠ ಭಾರರತ ತಂಡಕ್ಕೆ ಸವಾಲೊಡ್ಡಲಿದೆ. ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡ ಹಾಗೂ ಕೇನ್‌ ವಿಲಿಯಮ್ಸನ್‌ ನೇತೃತ್ವದ ನ್ಯೂಜಿಲೆಂಡ್ ತಂಡ ಇದುವರೆಗೂ ಐಸಿಸಿ ಟ್ರೋಫಿ ಜಯಿಸಿಲ್ಲ. ಹೀಗಾಗಿ ಯಾವುದೇ ತಂಡ ಟ್ರೋಫಿ ಜಯಿಸಿದರೂ ಇತಿಹಾಸ ನಿರ್ಮಾಣವಾಗಲಿದೆ.