Asianet Suvarna News Asianet Suvarna News

"ತಂಡಕ್ಕಾಗಿ ಆಡಿ, ದಾಖಲೆಗಾಗಿ ಅಲ್ಲ": ವಿರಾಟ್ ಕೊಹ್ಲಿ ಮೇಲೆ ಗುಡುಗಿದ ಚೇತೇಶ್ವರ್ ಪೂಜಾರ..!

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡವು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 256 ರನ್ ಬಾರಿಸಿತ್ತು. ಇನ್ನು ಗುರಿ ಬೆನ್ನತ್ತಿದ ಭಾರತ ಶುಭ್‌ಮನ್ ಗಿಲ್ ಆಕರ್ಷಕ ಅರ್ಧಶತಕ ಹಾಗೂ ವಿರಾಟ್ ಕೊಹ್ಲಿ ಅಜೇಯ ಶತಕದ ನೆರವಿನಿಂದ ಕೇವಲ 3 ವಿಕೆಟ್ ಕಳೆದುಕೊಂಡು ಅನಾಯಾಸವಾಗಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿತ್ತು.

ICC World Cup Cheteshwar Pujara not happy with the way to Virat Kohli Reach 100 against Bangladesh kvn
Author
First Published Oct 21, 2023, 2:03 PM IST | Last Updated Oct 21, 2023, 2:03 PM IST

ಪುಣೆ(ಅ.21): ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ಸುಲಭವಾಗಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗಿದ್ದೂ ವಿರಾಟ್ ಕೊಹ್ಲಿ ಶತಕ ಸಿಡಿಸಿದ ರೀತಿಯ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆಗಳು ಜೋರಾಗಿವೆ. 

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಕಳೆದ ಗುರುವಾರ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ವೃತ್ತಿಜೀವನದ 48ನೇ ಏಕದಿನ ಶತಕ ಸಿಡಿಸಿ ಸಂಭ್ರಮಿಸಿದರು. ವಿರಾಟ್ ಕೊಹ್ಲಿ ಬಾರಿಸಿದ ಈ ಶತಕವನ್ನು ಹಲವು ಕ್ರಿಕೆಟ್ ಪಂಡಿತರು ಕೊಂಡಾಡಿದ್ದಾರೆ. ಆದರೆ ಮತ್ತೆ ಕೆಲವರು ವಿರಾಟ್ ಕೊಹ್ಲಿ ಶತಕ ಸಿಡಿಸಲು ಕೊನೆಯಲ್ಲಿ ಹೆಚ್ಚು ಸಮಯ ತೆಗೆದುಕೊಂಡಿದ್ದು ಅಸಮಾಧಾನಕ್ಕೆ ಕಾರಣವಾಗಿದೆ. 

ವಿರಾಟ್ ಕೊಹ್ಲಿ ಶತಕಕ್ಕೆ ಮುನ್ನ ಅಂಪೈರ್ ವೈಡ್‌ ಕೊಡಲಿಲ್ಲವೇಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಕೊಹ್ಲಿ ಶತಕ ನೋಡಲು ಅಭಿಮಾನಿಗಳು ಮಾತ್ರವಲ್ಲ, ಅವರ ಸಹ ಆಟಗಾರರೂ ಉತ್ಸುಕಗೊಂಡಿದ್ದರು. ಪಂದ್ಯ ಗೆಲ್ಲಲು 19 ರನ್‌ ಬೇಕಿದ್ದಾಗ, ಕೊಹ್ಲಿಯ ಶತಕಕ್ಕೂ 19 ರನ್ ಬೇಕಿತ್ತು. ಆ ಬಳಿಕ ಸತತವಾಗಿ ಸ್ಟ್ರೈಕ್‌ ತಮ್ಮಲ್ಲೇ ಉಳಿಸಿಕೊಂಡ ವಿರಾಟ್‌, ಸಿಕ್ಸರ್‌ ಮೂಲಕ ಶತಕ ಪೂರೈಸಿದರು. ತಮ್ಮ ನೆಚ್ಚಿನ ಸಹ ಆಟಗಾರನಿಗೆ ರಾಹುಲ್‌ ಉತ್ತಮ ಬೆಂಬಲ ನೀಡಿದರು. ಒಂಟಿ ರನ್‌ಗಳನ್ನು ಓಡಲು ನಿರಾಕರಿಸಿದ ರಾಹುಲ್‌, 2 ಬಾರಿ ಅತಿವೇಗವಾಗಿ ಎರಡು ರನ್‌ ಓಡಿ, ಕೊಹ್ಲಿಯ ಶತಕಕ್ಕೆ ಕೊಡುಗೆ ನೀಡಿದರು. ಬಾಂಗ್ಲಾ ಬೌಲರ್‌ಗಳು ವೈಡ್‌ಗಳನ್ನೆಸೆದು ಕೊಹ್ಲಿಗೆ ಶತಕ ನಿರಾಕರಿಸಲು ಯತ್ನಿಸಿದರೂ, ಆ ಯತ್ನಗಳು ಫಲ ನೀಡಲಿಲ್ಲ.

ಇದೀಗ ವಿರಾಟ್ ಕೊಹ್ಲಿ ಶತಕ ಸಿಡಿಸಿದ ರೀತಿಯ ಬಗ್ಗೆ ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಅಸಮಾಧಾನ ಹೊರಹಾಕಿದ್ದಾರೆ. "ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದನ್ನು ನಾನು ನೋಡಿದೆ. ನೀವು ಎಷ್ಟು ಸಾಧ್ಯವೋ ಅಷ್ಟು ಬೇಗ ಪಂದ್ಯವನ್ನು ಮುಗಿಸಲು ಪ್ರಯತ್ನಿಸಬೇಕು. ಯಾಕೆಂದರೆ ನೆಟ್‌ ರನ್‌ರೇಟ್‌ ಟಾಪ್‌ನಲ್ಲಿರಬೇಕು ಎನ್ನುವುದು ನಿಮ್ಮ ಗಮನದಲ್ಲಿರಬೇಕು. ನೀವು ಒಂದು ಹಂತದಲ್ಲಿ ನೆಟ್‌ ರನ್‌ರೇಟ್‌ಗಾಗಿ ಹೋರಾಡುವ ಪರಿಸ್ಥಿತಿ ಬಂದರೆ, ಆಗ ನೀವು ಹಿಂತಿರುಗಿ ನೋಡಲು ಬರುವುದಿಲ್ಲ" ಎಂದು ಪೂಜಾರ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಸ್ವಾರ್ಥಿ ನಾ? ಶತಕದ ಹಿಂದಿನ ಸೀಕ್ರೇಟ್ ಬಿಚ್ಚಿಟ್ಟ ಕನ್ನಡಿಗ ಕೆ ಎಲ್ ರಾಹುಲ್..!

ಇನ್ನು ಮುಂದುವರೆದು ಮಾತನಾಡಿದ ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ ಹಾಗೂ ಟೀಂ ಇಂಡಿಯಾ ಆಟಗಾರರಿಗೆ ವೈಯುಕ್ತಿಕ ದಾಖಲೆಗಿಂತ ತಂಡದ ಹಿತಾಸಕ್ತಿಯ ಕಡೆಗೆ ಗಮನ ಕೊಡಬೇಕು ಎಂದು ಕಿವಿಮಾತು ಹೇಳಿದ್ದಾರೆ. "ಸಾಮೂಹಿಕ ನಿರ್ಧಾರವಾಗಿ ನೀವು ಕೆಲವೊಮ್ಮೆ ಸ್ವಲ್ಪ ತ್ಯಾಗ ಮಾಡಬೇಕಾಗಬಹುದು ಎಂದು ನನಗನಿಸುತ್ತಿದೆ. ನೀವು ತಂಡವನ್ನು ಗಮನದಲ್ಲಿಟ್ಟುಕೊಂಡು ಆಡಬೇಕು. ತಂಡ ಮೊದಲ ಆಧ್ಯತೆಯಾಗಬೇಕು. ನಾನೂ ಕೂಡಾ ಹಾಗೆ ಯೋಚಿಸುತ್ತೇನೆ. ನೀವು ದಾಖಲೆಗಳನ್ನು ಕೂಡಾ ನಿರ್ಮಿಸಿ, ಆದರೆ ಆ ದಾಖಲೆ ಮಾಡುವ ಸಲುವಾಗಿ ತಂಡದ ಹಿತಾಸಕ್ತಿಗೆ ಹಿನ್ನಡೆಯಾಗುವಂತೆ ಮಾಡಬೇಡಿ. ಒಬ್ಬ ಆಟಗಾರನಾಗಿ ನಿಮಗೆ ಆಯ್ಕೆಗಳಿರುತ್ತವೆ. ಕೆಲವು ಕ್ರಿಕೆಟಿಗರು ಒಂದು ಶತಕ ಬಾರಿಸಿದರೆ ಮುಂದಿನ ಪಂದ್ಯಕ್ಕೆ ಅನುಕೂಲವಾಗಲಿದೆ ಎಂದು ಭಾವಿಸುತ್ತಾರೆ. ಇದು ನೀವು ಯಾವ ಮನಸ್ಥಿತಿ ಹೊಂದಿದ್ದೀರ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ" ಎಂದು ಸೌರಾಷ್ಟ್ರ ಮೂಲದ ಕ್ರಿಕೆಟಿಗ ಹೇಳಿದ್ದಾರೆ.

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡವು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 256 ರನ್ ಬಾರಿಸಿತ್ತು. ಇನ್ನು ಗುರಿ ಬೆನ್ನತ್ತಿದ ಭಾರತ ಶುಭ್‌ಮನ್ ಗಿಲ್ ಆಕರ್ಷಕ ಅರ್ಧಶತಕ ಹಾಗೂ ವಿರಾಟ್ ಕೊಹ್ಲಿ ಅಜೇಯ ಶತಕದ ನೆರವಿನಿಂದ ಕೇವಲ 3 ವಿಕೆಟ್ ಕಳೆದುಕೊಂಡು ಅನಾಯಾಸವಾಗಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿತ್ತು.

Latest Videos
Follow Us:
Download App:
  • android
  • ios