ಟೀಂ ಇಂಡಿಯಾಗೆ ಬಿಗ್ ಶಾಕ್; ಮೈದಾನ ತೊರೆದ ಹಾರ್ದಿಕ್ ಪಾಂಡ್ಯ..! 8 ವರ್ಷಗಳ ಬಳಿಕ ಕಿಂಗ್ ಕೊಹ್ಲಿ ಬೌಲಿಂಗ್
ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂಟೋ, ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳವಂತೆ ಬ್ಯಾಟಿಂಗ್ ಮಾಡುವತ್ತ ಬಾಂಗ್ಲಾದೇಶ ಬ್ಯಾಟರ್‌ಗಳು ದಿಟ್ಟ ಹೆಜ್ಜೆಯಿಟ್ಟಿದ್ದಾರೆ.
ಪುಣೆ(ಅ.19): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯದ ಮಧ್ಯದಲ್ಲೇ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮೈದಾನ ತೊರೆದಿದ್ದಾರೆ. ಬಾಂಗ್ಲಾದೇಶ ಎದುರು ಬೌಲಿಂಗ್ ರನ್‌ಅಪ್ ಮಾಡುವ ವೇಳೆ ಸ್ನಾಯು ಸೆಳೆತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಾರ್ದಿಕ್ ಪಾಂಡ್ಯ, ಮೈದಾನ ತೊರೆದಿದ್ದು, ಟೀಂ ಇಂಡಿಯಾ ಪಾಳಯದಲ್ಲಿ ಆತಂಕ ಮನೆ ಮಾಡಿದೆ. ಇನ್ನು ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ.
ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂಟೋ, ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳವಂತೆ ಬ್ಯಾಟಿಂಗ್ ಮಾಡುವತ್ತ ಬಾಂಗ್ಲಾದೇಶ ಬ್ಯಾಟರ್‌ಗಳು ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಟೀಂ ಇಂಡಿಯಾ ಮಾರಕ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಅವರ ಮೊದಲ ಎಂಟು ಓವರ್‌ಗಳನ್ನು ದಿಟ್ಟವಾಗಿ ಎದುರಿಸುವಲ್ಲಿ ಬಾಂಗ್ಲಾ ಆರಂಭಿಕ ಜೋಡಿ ಯಶಸ್ವಿಯಾಯಿತು.
ಬುಮ್ರಾಗೆ ರೆಸ್ಟ್ ಕೊಡಿ, ಬಾಂಗ್ಲಾ ಎದುರು ಈತನಿಗೆ ಮಣೆ ಹಾಕಿ ಎಂದ ಸುನಿಲ್ ಗವಾಸ್ಕರ್..!
ಹೀಗಾಗಿ ನಾಯಕ ರೋಹಿತ್ ಶರ್ಮಾ, ಬೌಲಿಂಗ್ ಪರಿವರ್ತನೆ ಮಾಡಲು ಮುಂದಾಗಿ 9ನೇ ಓವರ್ ಬೌಲಿಂಗ್ ಮಾಡಲು ಹಾರ್ದಿಕ್ ಪಾಂಡ್ಯಗೆ ಚೆಂಡನ್ನಿತ್ತರು. ಲಿಟನ್ ದಾಸ್‌ಗೆ ಮೊದಲ ಎಸೆತವನ್ನು ಚುಕ್ಕಿ ಎಸೆತ ಹಾಕಿದ ಪಾಂಡ್ಯ, ಆ ಬಳಿಕ ಸತತ ಎರಡು ಎಸೆತಗಳಲ್ಲಿ ಎರಡು ಬೌಂಡರಿ ಚಚ್ಚಿಸಿಕೊಂಡರು. ಇದಾದ ಬಳಿಕ ದಿಢೀರ್ ಎನ್ನುವಂತೆ ಪಾಂಡ್ಯಗೆ ಸ್ನಾಯು ಸೆಳೆತ ಕಂಡು ಬಂದಿದೆ. ಬಳಿಕ ತಂಡದ ಫಿಸಿಯೋ ಮೈದಾನಕ್ಕೆ ಆಗಮಿಸಿ, ನೋವಿನ ಕುರಿತಂತೆ ಪ್ರಥಮ ಚಿಕಿತ್ಸೆ ಮಾಡಿದರೂ, ಸರಿಯಾಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಹಾರ್ದಿಕ್ ಪಾಂಡ್ಯ ಮೈದಾನ ತೊರೆದರು.
ICC World Cup: ಭಾರತ ಎದುರು ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ
8 ವರ್ಷಗಳ ಬಳಿಕ ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ: ಓವರ್‌ನ ಅರ್ಧದಲ್ಲೇ ಹಾರ್ದಿಕ್ ಪಾಂಡ್ಯ ಮೈದಾನ ತೊರೆದಿದ್ದರಿಂದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಇನ್ನುಳಿದ 3 ಎಸೆತ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದರು. ಅಂದಹಾಗೆ ವಿರಾಟ್ ಕೊಹ್ಲಿ ಬರೋಬ್ಬರಿ 8 ವರ್ಷಗಳ ಬಳಿಕ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದರು. ವಿರಾಟ್ ಕೊಹ್ಲಿ 2015ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಸಿಡ್ನಿಯಲ್ಲಿ ಕೊನೆಯ ಬಾರಿಗೆ ಬೌಲಿಂಗ್ ಮಾಡಿದ್ದರು.
ಬಾಂಗ್ಲಾದೇಶ ಭರ್ಜರಿ ಆರಂಭ: ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಬಾಂಗ್ಲಾದೇಶ ತಂಡವು, ಭಾರತ ಎದುರು ಭರ್ಜರಿ ಆರಂಭ ಪಡೆದಿದೆ. ಮೊದಲ 14 ಓವರ್ ಅಂತ್ಯದ ವೇಳೆಗೆ ಬಾಂಗ್ಲಾದೇಶ ತಂಡವು ವಿಕೆಟ್ ನಷ್ಟವಿಲ್ಲದೇ 90 ರನ್ ಬಾರಿಸಿದೆ. ತಂಜೀದ್ ಹಸನ್ ಅಜೇಯ 50 ರನ್ ಸಿಡಿಸಿದರೆ, ಮತ್ತೊಂದು ತುದಿಯಲ್ಲಿ ಲಿಟನ್ ದಾಸ್ 37 ರನ್ ಬಾರಿಸಿ ಅರ್ಧಶತಕದತ್ತ ದಾಪುಗಾಲಿಡುತ್ತಿದ್ದಾರೆ.