ಚರಿತ್ ಅಸಲಂಕಾ ಶತಕ; ಬಾಂಗ್ಲಾದೇಶಕ್ಕೆ ಸವಾಲಿನ ಗುರಿ ನೀಡಿದ ಶ್ರೀಲಂಕಾ

ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಟಾಸ್ ಸೋತ ಶ್ರೀಲಂಕಾ ತಂಡವು ಮೊದಲು ಬ್ಯಾಟಿಂಗ್ ಮಾಡಲಿಳಿಯಿತು. ಆದರೆ ಲಂಕಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಕುಸಾಲ್ ಪೆರೆರಾ 4 ರನ್ ಬಾರಿಸಿ ಶೌರಿಫುಲ್ಲಾ ಇಸ್ಲಾಂಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಪಥುಮ್ ನಿಸ್ಸಾಂಕ ಹಾಗೂ ನಾಯಕ ಕುಸಾಲ್ ಮೆಂಡಿಸ್ 61 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

ICC World Cup 2023 Charith Asalanka Ton Propel Sri Lanka To 279 vs Bangladesh kvn

ನವದೆಹಲಿ(ನ.06): ಮಧ್ಯಮ ಕ್ರಮಾಂಕದ ಪ್ರತಿಭಾನ್ವಿತ ಬ್ಯಾಟರ್ ಚರಿತ ಅಸಲಂಕಾ(108) ಬಾರಿಸಿದ ಆಕರ್ಷಕ ಶತಕ ಹಾಗೂ ಪಥುಮ್ ನಿಸ್ಸಾಂಕ(41) ಮತ್ತು ಸದೀರ ಸಮರವಿಕ್ರಮ(41) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ತಂಡವು ಬಾಂಗ್ಲಾದೇಶಕ್ಕೆ ಸವಾಲಿನ ಗುರಿ ನೀಡಿದೆ. 2023ರ ಏಕದಿನ ವಿಶ್ವಕಪ್‌ಗೆ ಸೆಮೀಸ್‌ ಕನಸು ಜೀವಂತವಾಗಿಟ್ಟುಕೊಳ್ಳಲು ಹೋರಾಡುತ್ತಿರುವ ಲಂಕಾ, ಇಂದು ಶತಾಯಗತಾಯ ಗೆಲುವು ಸಾಧಿಸಲು ಎದುರು ನೋಡುತ್ತಿದೆ.

ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಟಾಸ್ ಸೋತ ಶ್ರೀಲಂಕಾ ತಂಡವು ಮೊದಲು ಬ್ಯಾಟಿಂಗ್ ಮಾಡಲಿಳಿಯಿತು. ಆದರೆ ಲಂಕಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಕುಸಾಲ್ ಪೆರೆರಾ 4 ರನ್ ಬಾರಿಸಿ ಶೌರಿಫುಲ್ಲಾ ಇಸ್ಲಾಂಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಪಥುಮ್ ನಿಸ್ಸಾಂಕ ಹಾಗೂ ನಾಯಕ ಕುಸಾಲ್ ಮೆಂಡಿಸ್ 61 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ನಾಯಕ ಕುಸಾಲ್ ಮೆಂಡಿಸ್ 19 ರನ್ ಬಾರಿಗೆ ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್‌ಗೆ ವಿಕೆಟ್ ಒಪ್ಪಿಸಿದರು.

ಶತಕ ಸಿಡಿಸಿದ ಅಸಲಂಕಾ: ಕೇವಲ 135 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಶ್ರೀಲಂಕಾಗೆ ಚರಿತ್ ಅಸಲಂಕಾ ಆಕರ್ಷಕ ಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಅಸಲಂಕಾ 105 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 108 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಅಸಲಂಕಾ ಶತಕ ಲಂಕಾ ಬೃಹತ್ ಮೊತ್ತ ಕಲೆಹಾಕಲು ನೆರವಾದರು.

ಮ್ಯಾಥ್ಯೂಸ್ ವಿವಾದಾತ್ಮಕ ಔಟ್: ಸದೀರ ಸಮರವಿಕ್ರಮ 41 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಬಳಿಕ ಕ್ರೀಸ್‌ಗಿಳಿದ ಅನುಭವಿ ಬ್ಯಾಟರ್ ಏಂಜಲೋ ಮ್ಯಾಥ್ಯೂಸ್ ಒಂದು ಬಾಲ್ ಎದುರಿಸದೇ ವಿವಾದಾತ್ಮಕವಾಗಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಮೈದಾನಕ್ಕಿಳಿದ ಮ್ಯಾಥ್ಯೂಸ್‌ಗೆ ಹೆಲ್ಮೆಟ್‌ನಲ್ಲಿ ಸಮಸ್ಯೆಯಾಗಿದೆ. ಹೀಗಾಗಿ ಹೊಸ ಹೆಲ್ಮೆಟ್ ತರಿಸಿಕೊಳ್ಳಲು ಮುಂದಾದರು. ಕ್ರೀಸ್‌ಗಿಳಿದು ಎರಡು ನಿಮಿಷಕ್ಕಿಂತ ಹೆಚ್ಚು ನಿಮಿಷ ಸಮಯ ವ್ಯಯಿಸಿದ್ದರಿಂದ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಔಟ್‌ಗೆ ಮನವಿ ಸಲ್ಲಿಸಿದರು. ನಿಯಮದ ಪ್ರಕಾರ ಕ್ರೀಸ್‌ಗಿಳಿದ ಬ್ಯಾಟರ್ ಎರಡು ನಿಮಿಷದೊಳಗೆ ಮೊದಲ ಚೆಂಡು ಎದುರಿಸದೇ ಹೋದರೆ ಅಂಪೈರ್ ಟೈಮ್‌ ಔಟ್ ನೀಡಬಹುದು. ಅದರಂತೆ ಮ್ಯಾಥ್ಯೂಸ್ ಅವರನ್ನು ಅಂಪೈರ್ ಟೈಮ್‌ ಔಟ್ ಘೋಷಿಸಿದರು. ಮ್ಯಾಥ್ಯೂಸ್ ನಿರಾಸೆಯಿಂದ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಇನ್ನುಳಿದಂತೆ ಧನಂಜಯ ಡಿ ಸಿಲ್ವಾ(34) ಹಾಗೂ ಮಹೀಶ್ ತೀಕ್ಷಣ ಆಕರ್ಷಕ 22 ಬಾರಿಸುವ ಮೂಲಕ ತಂಡ 275ರ ಗಡಿ ದಾಟುವಂತೆ ಮಾಡುವಲ್ಲಿ ಯಶಸ್ವಿಯಾದರು.

ಬಾಂಗ್ಲಾದೇಶ ತಂಡದ ಪರ ತಂಜಿಮ್ ಹಸನ್ ಶಕೀಬ್ 3 ವಿಕೆಟ್ ಪಡೆದರೆ, ಶೌರಿಫುಲ್ಲಾ ಇಸ್ಲಾಂ ಹಾಗೂ ಶಕೀಬ್ ಅಲ್ ಹಸನ್ ತಲಾ ಎರಡು ವಿಕೆಟ್ ಪಡೆದರು. ಇನ್ನು ಮೆಹದಿ ಹಸನ್ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
 

Latest Videos
Follow Us:
Download App:
  • android
  • ios