ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಐತಿಹಾಸಿಕ ದಾಖಲೆ ಬರೆದ ದೀಪ್ತಿ ಶರ್ಮಾಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್ ಕಬಳಿಸಿದ ಭಾರತದ ಮೊದಲ ಕ್ರಿಕೆಟರ್ವೆಸ್ಟ್ ಇಂಡೀಸ್ ಎದುರಿನ ಟಿ20 ವಿಶ್ವಕಪ್ ಪಂದ್ಯದಲ್ಲಿ ಈ ದಾಖಲೆ ನಿರ್ಮಾಣ
ಕೇಪ್‌ಟೌನ್(ಫೆ.16): ಅಂತಾರಾಷ್ಟ್ರೀಯ ಟಿ20ಯಲ್ಲಿ 100 ವಿಕೆಟ್ ಪಡೆದ ಭಾರತದ ಮೊದಲ ಕ್ರಿಕೆಟರ್ ಎನ್ನುವ ದಾಖಲೆಯನ್ನು ದೀಪ್ತಿ ಶರ್ಮಾ ಬರೆದಿದ್ದಾರೆ. ಬುಧವಾರ ಟಿ20 ವಿಶ್ವಕಪ್‌ನ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಏಫೈ ಫ್ಲೆಚರ್‌ರ ವಿಕೆಟ್ ಪಡೆಯುವ ಮೂಲಕ ದೀಪ್ತಿ ಈ ಮೈಲಿಗಲ್ಲು ತಲುಪಿದರು. 89 ಪಂದ್ಯಗಳಲ್ಲಿ ಅವರು 100 ವಿಕೆಟ್ ಪಡೆದಿದ್ದಾರೆ. ಭಾರತ ಪುರುಷರ ತಂಡದ ಪರ ಯಜುವೇಂದ್ರ ಚಹಲ್ 75 ಪಂದ್ಯದಲ್ಲಿ 91 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ.
ಭಾರತ ಜಯಭೇರಿ!
ಕೇಪ್‌ಟೌನ್: ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡ ಸತತ 2ನೇ ಗೆಲುವು ಸಾಧಿಸಿ ಸೆಮಿಫೈನಲ್‌ನತ್ತ ದಿಟ್ಟಹೆಜ್ಜೆ ಇರಿಸಿದೆ. ಬುಧವಾರ ‘ಬಿ’ ಗುಂಪಿನ ತನ್ನ 2ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ವೆಸ್ಟ್‌ಇಂಡೀಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಜಯದೊಂದಿಗೆ ಗುಂಪಿನಲ್ಲಿ 2ನೇ ಸ್ಥಾನ ಕಾಯ್ದುಕೊಂಡಿರುವ ಭಾರತಕ್ಕೆ ಇಂಗ್ಲೆಂಡ್ ಹಾಗೂ ಐರ್ಲೆಂಡ್ ವಿರುದ್ಧ ಪಂದ್ಯ ಬಾಕಿ ಇದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವಿಂಡೀಸ್, ನಿಧಾನಗತಿ ಆರಂಭದಿಂದ ಒತ್ತಡಕ್ಕೆ ಸಿಲುಕಿತು. 14ನೇ ಓವರಲ್ಲಿ 77 ರನ್‌ಗೆ 1 ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್, 2 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಗುರಿಯಾಯಿತು. ಈ ಪರಿಣಾಮ 20 ಓವರಲ್ಲಿ 6 ವಿಕೆಟ್‌ಗೆ 118 ರನ್ ಗಳಿಸಿತು. ಕೊನೆಯಲ್ಲಿ ಭಾರತೀಯರ ಕಳಪೆ ಫೀಲ್ಡಿಂಗ್ ವಿಂಡೀಸ್‌ಗೆ ನೆರವಾಯಿತು. ವಿಂಡೀಸ್ ಪರ ಸ್ಟೆಫಾನಿ ಟೇಲರ್(42) ಹಾಗೂ ಶೆಮೈನ್ ಕ್ಯಾಂಬೆಲ್(30) ಹೊರತುಪಡಿಸಿ ಉಳಿದ ಆಟಗಾರ್ತಿಯರಿಂದ ಉಪಯುಕ್ತ ಕೊಡುಗೆ ಮೂಡಿಬರಲಿಲ್ಲ.
Women's T20 World cup ಹರ್ಮನ್‌ಪ್ರೀತ್ - ರಿಚಾ ಜೊತೆಯಾಟ, ಗೆಲುವಿನ ಸಿಹಿ ಕಂಡ ಭಾರತ
ಪಿಚ್ ನಿಧಾನಗತಿಯ ಬೌಲಿಂಗ್‌ಗೆ ಸಹಕಾರ ನೀಡುತ್ತಿದ್ದ ಕಾರಣ ಭಾರತಕ್ಕೆ ಗುರಿ ಬೆನ್ನತ್ತುವುದು ನಿರೀಕ್ಷಿಸಿದಷ್ಟುಸುಲಭ ಎನಿಸಲಿಲ್ಲ. ಆದರೆ ಮೊದಲೆರಡು ಓವರಲ್ಲಿ 28 ರನ್ ಚಚ್ಚಿದು ಒತ್ತಡ ಬೀಳದಿರಲು ಕಾರಣವಾಯಿತು. ಸ್ಮೃತಿ 10 ರನ್ ಗಳಿಸಿ ಔಟಾದ ಬಳಿಕ ಜೆಮಿಮಾ ಕೇವಲ 1 ರನ್‌ಗೆ ವಿಕೆಟ್ ಕಳೆದುಕೊಂಡರು. ಶಫಾಲಿ ವರ್ಮಾ 28 ರನ್ ಸಿಡಿಸಿ ಔಟಾದಾಗ ತಂಡದ ಮೊತ್ತ 43 ರನ್. 4ನೇ ವಿಕೆಟ್‌ಗೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ರಿಚಾ ಘೋಷ್ 72 ರನ್ ಸೇರಿಸಿದರು. 33 ರನ್ ಗಳಿಸಿ ಹರ್ಮನ್‌ಪ್ರೀತ್ ಔಟಾದಾಗ ತಂಡದ ಗೆಲುವಿಗೆ ಕೇವಲ 4 ರನ್ ಬೇಕಿತ್ತು. ಬೌಂಡರಿಯೊಂದಿಗೆ ತಂಡವನ್ನು ಇನ್ನೂ 11 ಎಸೆತ ಬಾಕಿ ಇರುವಂತೆಯೇ ಜಯದ ದಡ ಸೇರಿಸಿದ ರಿಚಾ, 32 ಎಸೆತದಲ್ಲಿ 5 ಬೌಂಡರಿಯೊಂದಿಗೆ 44 ರನ್ ಸಿಡಿಸಿದರು.
ಸ್ಕೋರ್:
ವಿಂಡೀಸ್ 20 ಓವರಲ್ಲಿ 118/6(ಸ್ಟೆಫಾನಿ 42, ಕ್ಯಾಂಬೆಲ್ 30, ದೀಪ್ತಿ 3-15)
ಭಾರತ 18.1 ಓವರಲ್ಲಿ 119/4(ರಿಚಾ 44*, ಹರ್ಮನ್‌ಪ್ರೀತ್ 33, ಕರಿಶ್ಮಾ 2-14)
ಆಸೀಸ್‌ಗೆ ಜಯ:
ಗ್ಕೆಬರ್ಹಾ: ಹಾಲಿ ಚಾಂಪಿಯನ್ ಆಸ್ಪ್ರೇಲಿಯಾ ಸತತ 2ನೇ ಜಯ ಸಾಧಿಸಿದೆ. ಮಂಗಳವಾರ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 8 ವಿಕೆಟ್ ಜಯ ಸಾಧಿಸಿತು. ಬಾಂಗ್ಲಾ 7 ವಿಕೆಟ್‌ಗೆ 107 ರನ್ ಗಳಿಸಿದರೆ, ಆಸೀಸ್ 18.2 ಓವರಲ್ಲಿ 2 ವಿಕೆಟ್‌ಗೆ 111 ರನ್ ಗಳಿಸಿತು.
ಟಿ20 ವಿಶ್ವಕಪ್: ಬಾಂಗ್ಲಾ ಆಟಗಾರ್ತಿಗೆ ಫಿಕ್ಸಿಂಗ್ ಆಫರ್!
ಕೇಪ್‌ಟೌನ್: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವ ಬಾಂಗ್ಲಾದೇಶ ತಂಡದ ಆಟಗಾರ್ತಿಯೊಬ್ಬರಿಂದ ಸ್ಪಾಟ್ ಫಿಕ್ಸಿಂಗ್ ನಡೆಸುವ ಪ್ರಯತ್ನ ನಡೆದಿರುವುದಾಗಿ ವರದಿಯಾಗಿದೆ. ಆಲ್ರೌಂಡರ್ ಲತಾ ಮೊಂಡಲ್‌ರನ್ನು ಸ್ಪಾಟ್ ಫಿಕ್ಸಿಂಗ್ ನಡೆಸುವಂತೆ ಫೋನ್ ಕರೆ ಮೂಲಕ ಮಾಜಿ ಆಟಗಾರ್ತಿ ಸೊಹೇಲಿ ಅಖ್ತರ್ ಕೇಳಿದ್ದಾರೆ ಎಂದು ಬಾಂಗ್ಲಾ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ.
ಸೊಹೇಲಿ ಅವರ ಆಫರ್ ನಿಕಾರಿಸಿದ ಲತಾ, ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಾಂಗ್ಲಾ ಮಂಡಳಿಯಿಂದ ಐಸಿಸಿಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ. ಮೊದಲ ಪಂದ್ಯದಲ್ಲಿ ಆಡಿದ್ದ ಲತಾರನ್ನು ಮಂಗಳವಾರ ಆಸೀಸ್ ವಿರುದ್ಧದ ಪಂದ್ಯಕ್ಕೆ ಕೈಬಿಡಲಾಗಿತ್ತು.
