ಇಂದು ಭಾರತ vs ಆಸೀಸ್ ಹೈವೋಲ್ಟೇಜ್ ಕದನ; ಹರ್ಮನ್‌ಪ್ರೀತ್ ಕೌರ್ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ!
ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುತ್ತಿದ್ದು, ಭಾರತದ ಪಾಲಿಗೆ ಸಾಕಷ್ಟು ಮಹತ್ವದ ಪಂದ್ಯ ಎನಿಸಿಕೊಂಡಿದೆ.
ಶಾರ್ಜಾ: 9ನೇ ಆವೃತ್ತಿ ಮಹಿಳಾ ಟಿ20 ವಿಶ್ವಕಪ್ ನಲ್ಲಿ ನಿರ್ಣಾಯಕ ಘಟ್ಟ ತಲುಪಿರುವ ಭಾರತ, ಭಾನುವಾರ 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾದ ಸವಾಲು ಎದುರಿಸಲಿದೆ. ಸೆಮಿಫೈನಲ್ ಪ್ರವೇಶಿಸಲು ಕಾಯುತ್ತಿರುವ ಹರ್ಮನ್‌ಪ್ರೀತ್ ನಾಯಕತ್ವದ ಭಾರತ ಬೃಹತ್ ಗೆಲುವಿನ ನಿರೀಕ್ಷೆಯಲ್ಲಿದ್ದು, ಸೋತರೆ ಬಹುತೇಕ ಹೊರಬೀಳಲಿದೆ.
ಭಾರತ ಟೂರ್ನಿಯ 'ಎ' ಗುಂಪಿನಲ್ಲಿ 3 ಪಂದ್ಯಗಳನ್ನಾಡಿದ್ದು, 4 ಅಂಕಗಳನ್ನು ಸಂಪಾದಿಸಿ 2ನೇ ಸ್ಥಾನದಲ್ಲಿದೆ. ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ತಂಡ ಬಳಿಕ ಪಾಕಿಸ್ತಾನ, ಶ್ರೀಲಂಕಾ ವಿರುದ್ಧ ಜಯಗಳಿಸಿದೆ. ಲಂಕಾ ವಿರುದ್ಧ 82 ರನ್ ಗೆಲುವು ಭಾರತದ ನೆಟ್ ರನ್‌ರೇಟ್ (+0.576) ಹೆಚ್ಚಿಸಿದರೂ ತಂಡದ ಸೆಮೀಸ್ ಹಾದಿ ಸುಗಮಗೊಂಡಿಲ್ಲ. ಸೆಮೀಸ್‌ಗೇರಬೇಕಿದ್ದರೆ ಭಾರತ ಈ ಪಂದ್ಯದಲ್ಲಿ ದೊಡ್ಡ ಅಂತರದಲ್ಲಿ ಜಯಗಳಿಸಿ ಮೊದಲೆರಡು ಸ್ಥಾನಗಳಲ್ಲೇ ಉಳಿಯಬೇಕು.
ನ್ಯೂಜಿಲೆಂಡ್ 3 ಪಂದ್ಯಗಳಲ್ಲಿ 4 ಅಂಕ ಗಳಿಸಿದ್ದು, ಪಾಕ್ ವಿರುದ್ಧ ಆಡಲು ಬಾಕಿಯಿದೆ. ಭಾರತ ಆಸೀಸ್ ವಿರುದ್ಧ ಗೆದ್ದು, ಅತ್ತ ಪಾಕ್ ವಿರುದ್ಧ ಕಿವೀಸ್ ಗೆದ್ದರೆ ಎರಡೂ ತಂಡಗಳ ಅಂಕಗಳು ಸಮಗೊಳ್ಳಲಿದೆ. ಆಗ ನೆಟ್ ರನ್‌ರೇಟ್‌ನಲ್ಲಿ ಮುಂದಿರುವ ತಂಡ ಸೆಮಿಫೈನಲ್ ಪ್ರವೇಶಿಸಲಿದೆ. ಇತ್ತ ಭಾರತ ಗೆದ್ದು, ನ್ಯೂಜಿಲೆಂಡ್ ಕೊನೆ ಪಂದ್ಯದಲ್ಲಿ ಸೋತರೆ ಭಾರತ ಸೆಮೀಸ್ ತಲುಪಲಿದೆ. ಒಂದು ವೇಳೆ ಭಾರತ ಸೋತರೆ ಆಗ ಒಂದು ಸೆಮೀಸ್ ಸ್ಥಾನಕ್ಕಾಗಿ ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ನಡುವೆ ಪೈಪೋಟಿ ಏರ್ಪಡಲಿದೆ. ಸದ್ಯ ಪಾಕ್ 2 ಅಂಕ ಹೊಂದಿದೆ.
ಭಾರತ 297, ಬಾಂಗ್ಲಾದೇಶ ಎದುರು ಟಿ20 ಸರಣಿ ಕ್ಲೀನ್‌ಸ್ವೀಪ್!
ಭಾರತ ಟೂರ್ನಿಯಲ್ಲಿ ಮೊದಲ ಬಾರಿ ಶಾರ್ಜಾ ದಲ್ಲಿ ಆಡುತ್ತಿದ್ದು, ಬ್ಯಾಟರ್‌ಗಳಿಗೆ ಕಠಿಣ ಸವಾಲು ಎದುರಾಗುವ ಸಾಧ್ಯತೆಯಿದೆ. ಮತ್ತೊಂದೆಡೆ ಆಸೀಸ್‌ನ ಕೆಲ ಆಟಗಾರ್ತಿಯರು ಗಾಯದಿಂದ ಬಳಲುತಿದ್ದು, ಭಾರತ ವಿರುದ್ಧ ಗೆಲ್ಲುವ ಮೂಲಕ ಸತತ 4ನೇ ಜಯ ದಾಖಲಿಸುವ ಕಾತರದಲ್ಲಿದೆ.
ಪಂದ್ಯ: ಸಂಜೆ 7.30
ನೇರ ಪ್ರಸಾರ: ಸ್ಟಾರ್‌ಸ್ಟೋರ್ಟ್ಸ್, ಹಾಟ್‌ಸ್ಟಾರ್
ದ.ಆಫ್ರಿಕಾ, ಕಿವೀಸ್ ತಂಡಗಳಿಗೆ ಗೆಲುವು
ಶನಿವಾರ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ 8 ವಿಕೆಟ್ ಜಯಗಳಿಸಿತು. ಲಂಕಾ 5 ವಿಕೆಟ್ ಗೆ 115 ರನ್ ಗಳಿಸಿದರೆ, ಕಿವೀಸ್ 17.3 ಓವರಲ್ಲಿ ಜಯಗಳಿಸಿತು. ಬಾಂಗ್ಲಾ ವಿರುದ್ಧ ದ.ಆಫ್ರಿಕಾ 7 ವಿಕೆಟ್ ಗೆಲುವು ಸಾಧಿಸಿತು. ಬಾಂಗ್ಲಾ 3 ವಿಕೆಟ್‌ಗೆ 105 ರನ್ ಬಾರಿಸಿದರೆ, ದ.ಆಫ್ರಿಕಾ 17.2 ಓವರ್‌ಗಳಲ್ಲಿ ಗೆದ್ದಿತು.