Asianet Suvarna News Asianet Suvarna News

ICC U-19 World Cup: ಐರ್ಲೆಂಡ್ ತಂಡವನ್ನು ಮಣಿಸಿ ಕ್ವಾರ್ಟರ್‌ ಫೈನಲ್ ಸ್ಥಾನ ಖಚಿತಪಡಿಸಿಕೊಂಡ ಭಾರತ

* ಐರ್ಲೆಂಡ್ ಎದುರು ಭರ್ಜರಿ ಗೆಲುವು ಸಾಧಿಸಿದ ಭಾರತ ಕಿರಿಯರ ಕ್ರಿಕೆಟ್ ತಂಡ

* ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದ ಭಾರತ

* ಐರ್ಲೆಂಡ್ ಎದುರು ಭಾರತಕ್ಕೆ 174 ರನ್‌ಗಳ ಜಯಭೇರಿ

ICC U 19 World Cup India Thrash Ireland by 174 runs and Qualify For Super League Stage kvn
Author
Bengaluru, First Published Jan 20, 2022, 10:17 AM IST

ಟ್ರಿನಿಡ್ಯಾಡ್(ಜ.20): 4 ಬಾರಿಯ ಅಂಡರ್ 19 ಏಕದಿನ ವಿಶ್ವಕಪ್ ಚಾಂಪಿಯನ್ ಹಾಗೂ ಹಾಲಿ ರನ್ನರ್‌ ಅಪ್‌ ಭಾರತ ಕಿರಿಯರ ಕ್ರಿಕೆಟ್ (India U-19 Cricket Team) ತಂಡವು ಎರಡನೇ ಪಂದ್ಯದಲ್ಲಿ ಐರ್ಲೆಂಡ್ (Ireland) ವಿರುದ್ದ 174 ರನ್‌ಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ 'ಬಿ' ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಇದರ ಜತೆಗೆ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ (ICC U-19 World Cup) ಸೂಪರ್‌ ಲೀಗ್ ಹಂತಕ್ಕೆ ಅರ್ಹತೆಗಿಟ್ಟಿಸಿಕೊಂಡಿದೆ.

ಇಲ್ಲಿನ ಬ್ರಿಯನ್ ಲಾರಾ ಕ್ರಿಕೆಟ್ ಅಕಾಡೆಮಿಯಲ್ಲಿ (Brian Lara Cricket Academy) ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 308 ರನ್‌ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಐರ್ಲೆಂಡ್ ತಂಡವು ಕೇವಲ 133 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಮುಖಭಂಗ ಅನುಭವಿಸಿತು. ಭಾರತ ಪರ ಅನಿಲ್ ಸಂಗ್ವಾನ್, ಅನೀಶ್ವರ್ ಗೌತಮ್‌ ಹಾಗೂ ಕೌಶಲ್ ತಾಂಬೆ ತಲಾ 2 ವಿಕೆಟ್ ಕಬಳಿಸುವ ಮೂಲಕ ಐರ್ಲೆಂಡ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. 

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡಕ್ಕೆ ರಘುವಂಶಿ ಹಾಗೂ ಹರ್ನೂರ್ ಸಿಂಗ್ () ಮೊದಲ ವಿಕೆಟ್‌ಗೆ ಶತಕದ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ರಘುವಂಶಿ (Angkrish Raghuvanshi) 79 ಎಸೆತಗಳಲ್ಲಿ 79 ರನ್ ಬಾರಿಸಿದರೆ, ಹರ್ನೂರ್ ಸಿಂಗ್ (Harnoor Singh) 88 ರನ್‌ ಗಳಿಸಿ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು.

ಐರ್ಲೆಂಡ್ ಎದುರಿನ ಪಂದ್ಯ ಆರಂಭಕ್ಕೂ ಮುನ್ನ ಭಾರತ ತಂಡದ ನಾಯಕ ಯಶ್‌ ಧುಳ್ (Yash Dhull) ಸೇರಿದಂತೆ ಒಟ್ಟು ಆರು ಆಟಗಾರರಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಹಂಗಾಮಿ ನಾಯಕ ನಿಶಾಂತ್ ಸಿಧು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರು.

ಭಾರತ ಅಂಡರ್‌-19 ಟೀಂನ 6 ಆಟಗಾರರಿಗೆ ಕೊರೋನಾ ಸೋಂಕು!

ತರೌಬ(ಜ.20): ಭಾರತ ಅಂಡರ್‌-19 ಏಕದಿನ ವಿಶ್ವಕಪ್‌ ತಂಡದ ನಾಯಕ ಯಶ್‌ ಧುಳ್‌, ಉಪನಾಯಕ ಶೇಖ್‌ ರಶೀದ್‌ (Shaik Rasheed) ಸೇರಿ 6 ಆಟಗಾರರಿಗೆ ಕೊರೋನಾ ಸೋಂಕು (Coronavirus) ತಗುಲಿದ್ದು, ಬುಧವಾರದ ಐರ್ಲೆಂಡ್‌ ವಿರುದ್ಧದ ಪಂದ್ಯಕ್ಕೆ ಅಲಭ್ಯರಾದರು. ಸೋಂಕಿತ ಆಟಗಾರರನ್ನು ಐಸೋಲೇಷನ್‌ನಲ್ಲಿ ಇರಿಸಲಾಗಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. 

ICC U-19 World Cup: ಭಾರತಕ್ಕಿಂದು ಐರ್ಲೆಂಡ್ ಸವಾಲು, ಕ್ವಾರ್ಟರ್ ಫೈನಲ್‌ ಮೇಲೆ ಕಣ್ಣಿಟ್ಟ ಯಂಗಿಸ್ತಾನ್‌

ತಂಡದಲ್ಲಿ ಒಟ್ಟು 17 ಆಟಗಾರರಿರುವ ಕಾರಣ ಪಂದ್ಯಕ್ಕೆ ಅಂತಿಮ 11 ಅನ್ನು ಅಂತಿಮಗೊಳಿಸಲು ತಂಡದ ಆಡಳಿತಕ್ಕೆ ಸಮಸ್ಯೆಯಾಗಲಿಲ್ಲ. ಕೋಚ್‌ಗಳೇ ಆಟಗಾರರಿಗೆ ನೀರಿನ ಬಾಟಲಿಗಳನ್ನು ಕೊಂಡೊಯ್ಯುವ ದೃಶ್ಯ ಐರ್ಲೆಂಡ್ ವಿರುದ್ದದ ಪಂದ್ಯದ ವೇಳೆ ಕಂಡುಬಂತು.

ಕಿರಿಯರ ವಿಶ್ವಕಪ್‌: ಇಂಗ್ಲೆಂಡ್‌ 2ನೇ ಜಯ

ಸೇಂಟ್‌ ಕಿಟ್ಸ್‌: ಐಸಿಸಿ ಅಂಡರ್‌-19 ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ (England U-19 Cricket Team) 2ನೇ ಜಯ ಸಾಧಿಸಿದೆ. ಮಂಗಳವಾರ ನಡೆದ ಕೆನಡಾ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿ 320 ರನ್‌ ಗಳಿಸಿದ ಇಂಗ್ಲೆಂಡ್‌, ಕೆನಡಾವನ್ನು 214ಕ್ಕೆ ಆಲೌಟ್‌ ಮಾಡಿ 106 ರನ್‌ ಜಯ ಪಡೆಯಿತು. ಉಗಾಂಡ ವಿರುದ್ಧ ದ.ಆಫ್ರಿಕಾ 121 ರನ್‌ ಜಯ ಕಂಡರೆ, ಪಪುವಾ ನ್ಯೂಗಿನಿ ವಿರುದ್ಧ ಅಷ್ಘಾನಿಸ್ತಾನ 135 ರನ್‌ ಗೆಲುವು ಪಡೆಯಿತು.
 

Follow Us:
Download App:
  • android
  • ios