Asianet Suvarna News Asianet Suvarna News

ICC Test Rankings: ಟಾಪ್ 10 ಪಟ್ಟಿಯಿಂದ ವಿರಾಟ್ ಕೊಹ್ಲಿ ಔಟ್..!

* ಬರ್ಮಿಂಗ್‌ಹ್ಯಾಮ್ ಟೆಸ್ಟ್ ಬೆನ್ನಲ್ಲೇ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ ಪ್ರಕಟ
* ಬ್ಯಾಟರ್‌ಗಳ ವಿಭಾಗದಲ್ಲಿ ಟಾಪ್ 10 ಪಟ್ಟಿಯಿಂದ ಹೊರಬಿದ್ದ ವಿರಾಟ್ ಕೊಹ್ಲಿ
* ಮೊದಲ ಬಾರಿಗೆ ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದ ರಿಷಭ್ ಪಂತ್

ICC Test Rankings Virat Kohli drops out of top 10 after Birmingham Test failure against England kvn
Author
Bengaluru, First Published Jul 6, 2022, 3:16 PM IST

ದುಬೈ(ಜು.06): ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್‌ (ICC Test Rankings) ಪ್ರಕಟವಾಗಿದ್ದು, ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಟಾಪ್ 10 ಪಟ್ಟಿಯಿಂದ ಹೊರಬಿದ್ದಿದ್ದಾರೆ. ಇನ್ನು ಇದೇ ವೇಳೆ ಇಂಗ್ಲೆಂಡ್ ಎದುರು ಭರ್ಜರಿ ಪ್ರದರ್ಶನ ತೋರಿದ ವಿಕೆಟ್‌ ಕೀಪರ್‌ ಬ್ಯಾಟರ್ ರಿಷಭ್ ಪಂತ್, ಬ್ಯಾಟರ್‌ಗಳ ವಿಭಾಗದಲ್ಲಿ 5ನೇ ಸ್ಥಾನಕ್ಕೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ.

ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ಮುಕ್ತಾಯವಾದ ಟೆಸ್ಟ್ ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಕೇವಲ 31 ರನ್(11&20)ಗಳನ್ನಷ್ಟೇ ಬಾರಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಇಂಗ್ಲೆಂಡ್ ಎದುರಿನ ಮೊದಲ ಇನಿಂಗ್ಸ್‌ನಲ್ಲಿ 98 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಭಾರತ ತಂಡಕ್ಕೆ ಸ್ಪೋಟಕ ಶತಕದ ಮೂಲಕ ಆಸರೆಯಾಗಿದ್ದ ಪಂತ್, ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಭರ್ಜರಿ ಜಂಪ್ ಮಾಡಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ರಿಷಭ್ ಪಂತ್ (Rishabh Pant) ಕೇವಲ 111 ಎಸೆತಗಳಲ್ಲಿ 146 ರನ್ ಚಚ್ಚಿದ್ದರು. ಇನ್ನು ಎರಡನೇ ಇನಿಂಗ್ಸ್‌ನಲ್ಲೂ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ್ದ ಪಂತ್ ಸಮಯೋಚಿತ ಅರ್ಧಶತಕ(57) ಚಚ್ಚಿದ್ದರು.

ರಿಷಭ್ ಪಂತ್ ಕಳೆದ ಆರು ಟೆಸ್ಟ್‌ ಇನಿಂಗ್ಸ್‌ಗಳ ಪೈಕಿ 2 ಶತಕ ಹಾಗೂ 4 ಅರ್ಧಶತಕ ಚಚ್ಚಿದ್ದಾರೆ. ಹೀಗಾಗಿ ಬರೋಬ್ಬರಿ 6 ಸ್ಥಾನಗಳನ್ನು ಜಿಗಿತ ಕಂಡು ಮೊದಲ ಬಾರಿಗೆ 5ನೇ ಸ್ಥಾನಕ್ಕೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದಂತೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ (Joe Root), ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಅಜೇಯ 142 ರನ್ ಬಾರಿಸುವ ಮೂಲಕ ಸುಲಭವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಇದೀಗ ಎಜ್‌ಬಾಸ್ಟನ್‌ನಲ್ಲಿ ತೋರಿದ ಅದ್ಭುತ ಪ್ರದರ್ಶನದ ನೆರವಿನಿಂದ ಜೋ ರೂಟ್ 923 ರೇಟಿಂಗ್ ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಭದ್ರವಾಗಿದ್ದಾರೆ.

ಇನ್ನು ಭಾರತ ಎದುರಿನ ಬರ್ಮಿಂಗ್‌ಹ್ಯಾಮ್ ಟೆಸ್ಟ್‌ (Birmingham Test) ಪಂದ್ಯದ ಮೊದಲೆರಡು ಇನಿಂಗ್ಸ್‌ಗಳಲ್ಲೂ ಭರ್ಜರಿ ಶತಕ ಬಾರಿಸಿದ್ದ ಇಂಗ್ಲೆಂಡ್ ಸ್ಟಾರ್ ಬ್ಯಾಟರ್ ಜಾನಿ ಬೇರ್‌ಸ್ಟೋವ್ ಬರೋಬ್ಬರಿ 11 ಸ್ಥಾನಗಳನ್ನು ಜಿಗಿದು 10ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಜಾನಿ ಬೇರ್‌ಸ್ಟೋವ್ (Jonny Bairstow) ಮೊದಲ ಇನಿಂಗ್ಸ್‌ನಲ್ಲಿ 106 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಅಜೇಯ 114 ರನ್ ಬಾರಿಸಿ ಇಂಗ್ಲೆಂಡ್ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದರು. 32 ವರ್ಷದ ಜಾನಿ ಬೇರ್‌ಸ್ಟೋವ್, ಟೆಸ್ಟ್ ವೃತ್ತಿಜೀವನದಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದು, ಕಳೆದ ಮೂರು ಟೆಸ್ಟ್ ಪಂದ್ಯಗಳಿಂದ 4 ಶತಕ ಬಾರಿಸಿದ್ದಾರೆ. ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡುವಲ್ಲಿ ಹಾಗೂ ಭಾರತ ಎದುರು ಇಂಗ್ಲೆಂಡ್ ಗೆಲುವು ದಾಖಲಿಸುವಲ್ಲಿ ಬೇರ್‌ಸ್ಟೋವ್ ತನ್ನದೇ ಆದ ಪಾತ್ರವಹಿಸಿದ್ದಾರೆ.

World Test Championship: ಭಾರತದ ಫೈನಲ್‌ ಹಾದಿ ಕಠಿಣ

ಎರಡನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಜಾನಿ ಬೇರ್‌ಸ್ಟೋವ್ 6 ಶತಕಗಳ ಸಹಿತ 55.36ರ ಬ್ಯಾಟಿಂಗ್‌ ಸರಾಸರಿಯಲ್ಲಿ 1,218 ರನ್‌ ಬಾರಿಸಿದ್ದಾರೆ. ಇದರೊಂದಿಗೆ 2018ರ ಬಳಿನ ಮೊದಲ ಬಾರಿಗೆ ಜಾನಿ ಬೇರ್‌ಸ್ಟೋವ್ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಬ್ಯಾಟರ್‌ಗಳ ವಿಭಾಗದಲ್ಲಿ ಜೋ ರೂಟ್‌, ಮಾರ್ನಸ್‌ ಲಬುಶೇನ್, ಸ್ಟೀವ್ ಸ್ಮಿತ್ ಹಾಗೂ ಬಾಬರ್ ಅಜಂ ಕ್ರಮವಾಗಿ ಮೊದಲ 4 ಸ್ಥಾನಗಳಲ್ಲೇ ಮುಂದುವರೆದಿದ್ದಾರೆ. ಇನ್ನು ಪಂತ್ 5ನೇ ಸ್ಥಾನ ಪಡೆದರೇ, ಕೇನ್ ವಿಲಿಯಮ್ಸನ್, ಉಸ್ಮಾನ್ ಖವಾಜ, ದೀಮುತ್ ಕರುಣರತ್ನ, ರೋಹಿತ್ ಶರ್ಮಾ ಹಾಗೂ ಜಾನಿ ಬೇರ್‌ಸ್ಟೋವ್ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಬೌಲರ್‌ಗಳ ವಿಭಾಗದಲ್ಲಿ ಪ್ಯಾಟ್ ಕಮಿನ್ಸ್, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಶಾಹಿನ್ ಅಫ್ರಿದಿ ಹಾಗೂ ಕಗಿಸೋ ರಬಾಡ ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ. ಇನ್ನು ಆಲ್ರೌಂಡರ್‌ಗಳ ವಿಭಾಗದಲ್ಲಿ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಮೊದಲೆರಡು ಸ್ಥಾನಗಳನ್ನು ಹಂಚಿಕೊಂಡಿದ್ದರೇ, ಶಕೀಬ್ ಅಲ್ ಹಸನ್, ಜೇಸನ್ ಹೋಲ್ಡರ್ ಹಾಗೂ ಬೆನ್ ಸ್ಟೋಕ್ಸ್‌ ಟಾಪ್ 5 ಆಲ್ರೌಂಡರ್‌ಗಳೆನಿಸಿಕೊಂಡಿದ್ದಾರೆ.

Follow Us:
Download App:
  • android
  • ios