ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ ಇದೀಗ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಐಸಿಸಿ ನೂತನವಾಗಿ ಬಿಡುಗಡೆ ಮಾಡಿದ ಬ್ಯಾಟ್ಸ್‌ಮನ್‌ಗಳ ಟೆಸ್ಟ್ ಶ್ರೇಯಾಂಕದಲ್ಲಿ ಸ್ಮಿತ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ದುಬೈ[ಡಿ.05]: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಬುಧವಾರ ನೂತನವಾಗಿ ಬಿಡುಗಡೆಗೊಂಡಿರುವ ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಆಸ್ಪ್ರೇಲಿಯಾದ ಸ್ಟೀವ್ ಸ್ಮಿತ್ 2ನೇ ಸ್ಥಾನಕ್ಕೆ ಕುಸಿದಿದ್ದು, ಕೊಹ್ಲಿ ಮತ್ತೊಮ್ಮೆ ಅಗ್ರಸ್ಥಾನ ಅಲಂಕರಿಸಿದ್ದಾರೆ.
ICC ರ‍್ಯಾಂಕಿಂಗ್ ಪ್ರಕಟ; ಟಾಪ್ 10 ಪಟ್ಟಿಯಲ್ಲಿ ಮಯಾಂಕ್ ಅಗರ್ವಾಲ್!
ಕಳೆದ ವಾರ ಬಾಂಗ್ಲಾದೇಶ ವಿರುದ್ಧ ಕೋಲ್ಕತಾದಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್‌ನಲ್ಲಿ 136 ರನ್ ಸಿಡಿಸಿದ ವಿರಾಟ್, 928 ರೇಟಿಂಗ್ ಅಂಕಗಳನ್ನು ತಲುಪಿದ್ದಾರೆ. ಪಾಕಿಸ್ತಾನ ವಿರುದ್ಧ ಅಡಿಲೇಡ್ ಟೆಸ್ಟ್‌ಗೂ ಮುನ್ನ 931 ಅಂಕಗಳನ್ನು ಹೊಂದಿದ್ದ ಸ್ಮಿತ್, ಪಂದ್ಯದಲ್ಲಿ ಕೇವಲ 36 ರನ್ ಗಳಿಸಿದ ಕಾರಣ ಅವರ ರೇಟಿಂಗ್ ಅಂಕ 923ಕ್ಕೆ ಕುಸಿದಿದೆ.
ಸ್ಮಿತ್‌ಗಿದೆ ಅವಕಾಶ: ಭಾರತ ತಂಡ ಈ ವರ್ಷ ನಿಗದಿಯಾಗಿದ್ದ ಟೆಸ್ಟ್ ಪಂದ್ಯಗಳನ್ನು ಆಡಿ ಮುಗಿಸಿದೆ. ಇನ್ನೇನಿದ್ದರೂ 2020ರಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿರುವ ತಂಡ, 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ. ಹೀಗಾಗಿ ಕೊಹ್ಲಿ ಮುಂದಿನ ಟೆಸ್ಟ್‌ಗಾಗಿ ಫೆಬ್ರವರಿ ವರೆಗೂ ಕಾಯಬೇಕಿದೆ. ಆದರೆ ಆಸ್ಪ್ರೇಲಿಯಾ ತಂಡ ಈ ವರ್ಷ ಇನ್ನೂ 2 ಪಂದ್ಯಗಳನ್ನು ಆಡಲಿದೆ. ನ್ಯೂಜಿಲೆಂಡ್ ವಿರುದ್ಧ ಡಿ.12ರಿಂದ 2 ಪಂದ್ಯಗಳ ಸರಣಿ ಆರಂಭಗೊಳ್ಳಲಿದ್ದು, ಸ್ಮಿತ್‌ಗೆ ಮತ್ತೆ ಅಗ್ರಸ್ಥಾನಕ್ಕೇರಲು ಅವಕಾಶ ಸಿಗಲಿದೆ. ಕೊಹ್ಲಿಗಿಂತ ಕೇವಲ 5 ಅಂಕ ಹಿಂದಿರುವ ಸ್ಮಿತ್, ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದರೆ ಭಾರತೀಯ ನಾಯಕನನ್ನು ಹಿಂದಿಕ್ಕಲಿದ್ದಾರೆ.
ಉಳಿದಂತೆ, ಭಾರತದ ಚೇತೇಶ್ವರ್ ಪೂಜಾರ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಮುಂದುವರಿದರೆ, ಅಜಿಂಕ್ಯ ರಹಾನೆ ಒಂದು ಸ್ಥಾನ ಕುಸಿದ ಕಂಡು 6ನೇ ಸ್ಥಾನ ಪಡೆದಿದ್ದಾರೆ. ಮಯಾಂಕ್ ಅಗರ್‌ವಾಲ್ 12ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಟೆಸ್ಟ್ ರ‍್ಯಾಂಕಿಂಗ್: ಟಾಪ್ 10ಗೆ ಲಗ್ಗೆಯಿಟ್ಟ ಶಮಿ..!
ಬೌಲರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ 5ನೇ ಸ್ಥಾನದಲ್ಲಿ ಮುಂದುವರಿದರೆ, ಆರ್.ಅಶ್ವಿನ್ 9ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಮೊಹಮದ್ ಶಮಿ ಅಗ್ರ 10ರೊಳಗೆ ಪ್ರವೇಶಿಸಿದ್ದು, 10ನೇ ಸ್ಥಾನದಲ್ಲಿದ್ದಾರೆ. ಆಸ್ಪ್ರೇಲಿಯಾದ ಪ್ಯಾಟ್ ಕಮಿನ್ಸ್ ವಿಶ್ವದ ನಂ.1 ಬೌಲರ್ ಆಗಿ ಮುಂದುವರಿದಿದ್ದಾರೆ.
ಏಕದಿನದಲ್ಲೂ ಕೊಹ್ಲಿ ಅಧಿಪತ್ಯ
ವಿರಾಟ್ ಕೊಹ್ಲಿ ಏಕದಿನ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. 895 ರೇಟಿಂಗ್ ಅಂಕಗಳನ್ನು ಹೊಂದಿರುವ ಕೊಹ್ಲಿ, 2ನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾಗಿಂತ (863) 32 ಅಂಕ ಮುಂದಿದ್ದಾರೆ. ಮತ್ತೊಮ್ಮೆ ಏಕಕಾಲದಲ್ಲಿ ಏಕದಿನ ಹಾಗೂ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಹಿರಿಮೆಗೆ ವಿರಾಟ್ ಪಾತ್ರರಾಗಿದ್ದಾರೆ. 797 ರೇಟಿಂಗ್ ಅಂಕಗಳೊಂದಿಗೆ ಜಸ್ಪ್ರೀತ್ ಬುಮ್ರಾ ನಂ.1 ಏಕದಿನ ಬೌಲರ್ ಆಗಿ ಮುಂದುವರಿದಿದ್ದಾರೆ. 2ನೇ ಸ್ಥಾನದಲ್ಲಿರುವ ಟ್ರೆಂಟ್ ಬೌಲ್ಟ್‌ಗಿಂತ 57 ಅಂಕ ಮುಂದಿದ್ದಾರೆ.
ಕೊಹ್ಲಿಗೆ ಟಿ20 ಮೇಲೆ ಕಣ್ಣು
ಟೆಸ್ಟ್ ಹಾಗೂ ಏಕದಿನ ಮಾದರಿಯಲ್ಲಿ ಕಂಡ ಯಶಸ್ಸನ್ನು ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಸಾಧಿಸಿಲ್ಲ. ಹಲವು ಟಿ20 ಸರಣಿಗಳಿಗೆ ಅವರು ಗೈರಾಗಿರುವುದೂ ಇದಕ್ಕೆ ಕಾರಣ. ಆದರೆ 2020ರ ಟಿ20 ವಿಶ್ವಕಪ್ ದೃಷ್ಟಿಯಿಂದ ಮುಂದಿನ 7-8 ತಿಂಗಳಲ್ಲಿ ಭಾರತ ತಂಡ ಹಲವು ಟಿ20 ಸರಣಿಗಳನ್ನು ಆಡಲಿದ್ದು, ಕೊಹ್ಲಿ ಪ್ರತಿ ಸರಣಿಯಲ್ಲೂ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸದ್ಯ ಟಿ20 ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕೊಹ್ಲಿ 621 ಅಂಕಗಳೊಂದಿಗೆ 15ನೇ ಸ್ಥಾನದಲ್ಲಿದ್ದಾರೆ. ಅಗ್ರಸ್ಥಾನದಲ್ಲಿರುವ ಪಾಕಿಸ್ತಾನದ ಬಾಬರ್ ಆಜಂ 879 ಅಂಕ ಹೊಂದಿದ್ದಾರೆ. ಕೊಹ್ಲಿ ಮುಂಬರುವ ಸರಣಿಗಳಲ್ಲಿ ಉತ್ತಮ ಆಟವಾಡಿದರೆ, ಅಗ್ರಸ್ಥಾನಕ್ಕೇರುವ ಸಾಧ್ಯತೆ ಇದೆ.
