Asianet Suvarna News Asianet Suvarna News

ಟೆಸ್ಟ್‌ ರ‍್ಯಾಂಕಿಂಗ್‌: ವರ್ಷಾಂತ್ಯದಲ್ಲಿ ಸ್ಮಿತ್, ಕೊಹ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ವಿಲಿಯಮ್ಸನ್‌

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳು ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟಿಸಿದ್ದು, ಸ್ಟೀವ್ ಸ್ಮಿತ್ ಹಾಗೂ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ನ್ಯೂಜಿಲೆಂಡ್ ನಾಯಕ ಕೇನ್‌ ವಿಲಿಯಮ್ಸನ್ ಅಗ್ರಸ್ಥಾನಕ್ಕೇರಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ICC Test Batsman Rankings Kane Williamson goes past Steven Smith Virat Kohli kvn
Author
Dubai - United Arab Emirates, First Published Dec 31, 2020, 2:50 PM IST

ದುಬೈ(ಡಿ.31): ಪಾಕಿಸ್ತಾನ ವಿರುದ್ದ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ವರ್ಷಾಂತ್ಯದಲ್ಲಿ ನೂತನವಾಗಿ ಬಿಡುಗಡೆಯಾದ ಐಸಿಸಿ ಬ್ಯಾಟ್ಸ್‌ಮನ್‌ಗಳ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಸ್ಟೀವ್‌ ಸ್ಮಿತ್ ಹಾಗೂ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೂ ಮೊದಲು ಕೇನ್‌ ವಿಲಿಯಮ್ಸನ್‌ ಮೂರನೇ ಸ್ಥಾನದಲ್ಲಿದ್ದರು. ಸ್ಟೀವ್ ಸ್ಮಿತ್ ಹಾಗೂ ವಿರಾಟ್ ಕೊಹ್ಲಿ ಮೊದಲೆರಡು ಸ್ಥಾನಗಳನ್ನು ಹಂಚಿಕೊಂಡಿದ್ದರು. ಪಿತೃತ್ವದ ರಜೆಯಲ್ಲಿರುವ ವಿರಾಟ್ ಕೊಹ್ಲಿ ತವರಿಗೆ ಮರಳಿದ್ದು, ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ (0 ಮತ್ತು 8) ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಸ್ಟೀವ್‌ ಸ್ಮಿತ್ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಕೇನ್‌ ವಿಲಿಯಮ್ಸನ್‌ ಈ ಮೊದಲು 2015ರಲ್ಲಿ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದ್ದರು. ಅದಾದ ಬಳಿಕ ಸ್ಟೀವ್ ಸ್ಮಿತ್ ಹಾಗೂ ವಿರಾಟ್ ಕೊಹ್ಲಿ ಉಳಿದ ಬ್ಯಾಟ್ಸ್‌ಮನ್‌ಗಳಿಗೆ ನಂ.1 ಸ್ಥಾನಕ್ಕೇರಲು ಅವಕಾಶ ಮಾಡಿಕೊಟ್ಟಿರಲಿಲ್ಲ. ಇನ್ನು ಮೆಲ್ಬರ್ನ್‌ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿದ ಸ್ಟೀವ್ ಸ್ಮಿತ್ 5 ಸ್ಥಾನ ಮೇಲೇರಿ 6ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಮಾರ್ನಸ್ ಲಬುಶೇನ್ ಹಾಗೂ ಬಾಬರ್ ಅಜಂ ಕ್ರಮವಾಗಿ 4 ಹಾಗೂ 5ನೇ ಸ್ಥಾನದಲ್ಲಿ ಭದ್ರವಾಗಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದಲ್ಲಿ ದಾಖಲಾದ 5 ಅಪರೂಪದ ದಾಖಲೆಗಳಿವು..!

ಇನ್ನು ಬೌಲರ್‌ಗಳ ವಿಭಾಗದಲ್ಲಿ ಆಸೀಸ್‌ ವೇಗಿ ಪ್ಯಾಟ್‌ ಕಮಿನ್ಸ್‌ ವರ್ಷಾಂತ್ಯದ ವರೆಗೂ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ. ಉಳಿದಂತೆ ಸ್ಟುವರ್ಟ್ ಬ್ರಾಡ್, ನೀಲ್ ವ್ಯಾಗ್ನರ್ ಹಾಗೂ ಟಿಮ್ ಸೌಥಿ ಮೊದಲ 4 ಸ್ಥಾನಗಳಲ್ಲಿ ಭದ್ರವಾಗಿದ್ದಾರೆ. ಮಿಚೆಲ್ ಸ್ಟಾರ್ಕ್ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟರೆ, ರವಿಚಂದ್ರನ್ ಅಶ್ವಿನ್ 2 ಸ್ಥಾನ ಮೇಲೇರಿ 7ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇದರೊಂದಿಗೆ ಟಾಪ್‌ 10 ಪಟ್ಟಿಯೊಳಗೆ ಸ್ಥಾನ ಪಡೆದ ಏಕೈಕ ಸ್ಪಿನ್ನರ್ ಎನಿಸಿದ್ದಾರೆ.

ಆಲ್ರೌಂಡರ್ ವಿಭಾಗದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, ಜೇಸನ್ ಹೋಲ್ಡರ್, ರವೀಂದ್ರ ಜಡೇಜಾ, ಶಕೀಬ್ ಅಲ್ ಹಸನ್ ಹಾಗೂ ಮಿಚೆಲ್ ಸ್ಟಾರ್ಕ್ ಮೊದಲ 5 ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Follow Us:
Download App:
  • android
  • ios