ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ದಾಖಲಾದ 5 ಅಪರೂಪದ ದಾಖಲೆಗಳಿವು..!
ಬೆಂಗಳೂರು: ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಟೀಂ ಇಂಡಿಯಾ, ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಕಾಂಗರೂ ಪಡೆಗೆ ತಿರುಗೇಟು ನೀಡುವಲ್ಲಿ ಅಜಿಂಕ್ಯ ರಹಾನೆ ಪಡೆ ಯಶಸ್ವಿಯಾಗಿದೆ.
ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಿಂದಲೂ ಮೇಲುಗೈ ಸಾಧಿಸುತ್ತಲೇ ಬಂದಿದ್ದ ಟೀಂ ಇಂಡಿಯಾ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಐತಿಹಾಸಿಕ ಗೆಲುವು ದಾಖಲಿಸುವ ಸರಣಿ ಸಮಬಲ ಸಾಧಿಸಿದೆ, ಮಾತ್ರವಲ್ಲ 5 ಅಪರೂಪದ ದಾಖಲೆಗಳು ಈ ಪಂದ್ಯದಲ್ಲಿ ನಿರ್ಮಾಣವಾಗಿದೆ. ಏನವು ದಾಖಲೆಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
1. ವಿದೇಶಿ ಪ್ರವಾಸಗಳ ಪೈಕಿ ಮೆಲ್ಬರ್ನ್‌ನಲ್ಲಿ ಅತಿ ಹೆಚ್ಚು ಗೆಲುವು ದಾಖಲಿಸಿದ ಟೀಂ ಇಂಡಿಯಾ
ಟೀಂ ಇಂಡಿಯಾ ಇದುವರೆಗೂ ವಿದೇಶಿ ಪ್ರವಾಸದಲ್ಲಿ ಒಟ್ಟು 52 ಗೆಲುವು ದಾಖಲಿಸಿದೆ, ಈ ಪೈಕಿ ಆಸ್ಟ್ರೇಲಿಯಾದಲ್ಲಿ 8 ಗೆಲುವುಗಳನ್ನು ದಾಖಲಿಸಿದೆ.
ಇನ್ನು ಮೆಲ್ಬರ್ನ್‌ನಲ್ಲಿ 4 ಗೆಲುವುಗಳನ್ನು ದಾಖಲಿಸುವ ಮೂಲಕ ವಿದೇಶಿ ಮೈದಾನವೊಂದರಲ್ಲಿ ಭಾರತ ಅತಿ ಹೆಚ್ಚು ಮೈದಾನ ಎನ್ನುವ ದಾಖಲೆ ನಿರ್ಮಿಸಿದೆ.
2. ಈ ಶತಮಾನದಲ್ಲಿ 100 ಓವರ್ ಬ್ಯಾಟಿಂಗ್ ನಡೆಸಿ 200+ ರನ್ ದಾಖಲಿಸಲು ವಿಫಲವಾದ ಆಸ್ಟ್ರೇಲಿಯಾ
ಟಿಮ್ ಪೈನ್ ನೇತೃತ್ವದ ಆಸ್ಟ್ರೇಲಿಯಾ ಇದೇ ಮೊದಲ ಬಾರಿಗೆ ಮಂದಗತಿಯಲ್ಲಿ ಬ್ಯಾಟಿಂಗ್ ನಡೆಸಿ ಅಪರೂಪದ ಬೇಡದ ದಾಖಲೆ ನಿರ್ಮಿಸಿದೆ. 100 ಓವರ್ ಬೌಲಿಂಗ್ ಎದುರಿಸಿದರೂ ಆಸ್ಟ್ರೇಲಿಯಾ ಖಾತೆಯಲ್ಲಿ ಇನ್ನೂರು ರನ್ ದಾಖಲಾಗದೇ ಇದ್ದಿದ್ದು, ಈ ಶತಮಾನದಲ್ಲಿ ಇದೇ ಮೊದಲು.
ಅಂತಿಮವಾಗಿ 103 ಓವರ್‌ಗಳನ್ನು ಎದುರಿಸಿ ಆಸ್ಟ್ರೇಲಿಯಾ ಭರ್ತಿ 200 ದಾಖಲಿಸಿತು.
3. ಬರೋಬ್ಬರಿ 3 ದಶಕಗಳ ಬಳಿಕ ತವರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಸೀಸ್‌ನ ಯಾವೊಬ್ಬ ಆಟಗಾರನೂ ಅರ್ಧಶತಕ ಬಾರಿಸಲಿಲ್ಲ
ಅಚ್ಚರಿಯಾದರೂ ಸತ್ಯ, ಈ ಮೊದಲು 1988ರಲ್ಲಿ ಆಸ್ಟ್ರೇಲಿಯಾದಲ್ಲೇ ನಡೆದ ಟೆಸ್ಟ್ ಪಂದ್ಯದಲ್ಲಿ ಯಾವೊಬ್ಬ ಬ್ಯಾಟ್ಸ್‌ಮನ್ ಸಹ ಅರ್ಧಶತಕ ಬಾರಿಸಿರಲಿಲ್ಲ. ಈ ಬಾರಿ ಕೂಡಾ ಭಾರತ ವಿರುದ್ದ ಮಾರ್ನಸ್ ಲಬುಶೇನ್ 48 ರನ್ ಬಾರಿಸಿದ್ದೇ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿತು.
4. ಮೆಲ್ಬರ್ನ್‌ನಲ್ಲಿ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ವಿಕೆಟ್ ದಾಖಲೆ ಸರಿಗಟ್ಟಿದ ಬುಮ್ರಾ
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್ ಕಬಳಿಸುವ ಮೂಲಕ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತ ಪರ ಗರಿಷ್ಠ ವಿಕೆಟ್ ಕಬಳಿಸಿದ ಅನಿಲ್ ಕುಂಬ್ಳೆ(15 ವಿಕೆಟ್) ದಾಖಲೆಯನ್ನು ವೇಗಿ ಜಸ್ಪ್ರೀತ್ ಬುಮ್ರಾ ಸರಿಗಟ್ಟಿದ್ದಾರೆ.
ಅನಿಲ್ ಕುಂಬ್ಳೆ 6 ಇನಿಂಗ್ಸ್‌ಗಳಲ್ಲಿ 15 ವಿಕೆಟ್ ಕಬಳಿಸಿದ್ದರೆ, ಬುಮ್ರಾ ಕೇವಲ 3 ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿರುವುದು ಮತ್ತೊಂದು ವಿಶೇಷ.
5. ಭಾರತ ವಿರುದ್ದ ಮೊದಲ ಬಾರಿಗೆ ಸೊನ್ನೆ ಸುತ್ತಿದ ಸ್ಟೀವ್ ಸ್ಮಿತ್
ಟೆಸ್ಟ್ ನಂ.1 ಶ್ರೇಯಾಂಕಿತ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಮೊದಲ ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿ ವಿಶೇಷ ದಾಖಲೆ ಬರೆದಿದ್ದಾರೆ. ಭಾರತ ವಿರುದ್ದ ಇದೇ ಮೊದಲ ಬಾರಿಗೆ ಸ್ಮಿತ್ ಶೂನ್ಯ ಸಂಪಾದನೆ ಮಾಡಿದ್ದಾರೆ.