ದುಬೈ(ಫೆ.16): ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ಕೆ.ಎಲ್‌.ರಾಹುಲ್‌ ಒಂದು ಸ್ಥಾನ ಏರಿಕೆ ಕಂಡು 2ನೇ ಸ್ಥಾನಕೇರಿದ್ದಾರೆ. ನಾಯಕ ವಿರಾಟ್‌ ಕೊಹ್ಲಿ 7ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. 

ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ನೂತನ ಟಿ20 ಶ್ರೇಯಾಂಕವನ್ನು ಪ್ರಕಟಿಸಿದೆ. ಒಟ್ಟು 816 ರೇಟಿಂಗ್‌ ಅಂಕ ಹೊಂದಿರುವ ರಾಹುಲ್‌, ಅಗ್ರ ಸ್ಥಾನದಲ್ಲಿರುವ ಇಂಗ್ಲೆಂಡ್‌ನ ಡೇವಿಡ್‌ ಮಲಾನ್‌ (915)ಗಿಂತ 99 ಅಂಕಗಳಿಂದ ಹಿಂದಿದ್ದಾರೆ. 

ಆಫ್ರಿಕಾ ಎದುರು 2-1 ಅಂತರದಲ್ಲಿ ಟಿ20 ಸರಣಿ ಗೆಲ್ಲಲು ನೆರವಾದ ಪಾಕಿಸ್ತಾನದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಮೊಹಮ್ಮದ್ ರಿಜ್ವಾನ್‌ 116ನೇ ಸ್ಥಾನದಿಂದ 42ನೇ ಸ್ಥಾನಕ್ಕೆ ಲಾಂಗ್ ಜಂಪ್‌ ಮಾಡಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ಸ್ಪಿನ್ನರ್ ತಬ್ರೀಜ್ ಶಂಶಿ ಸಹಾ ಎರಡನೇ ಸ್ಥಾನಕ್ಕೆ ದಾಪುಗಾಲಿಟ್ಟಿದ್ದಾರೆ.

ಐಪಿಎಲ್‌ಗಿಲ್ಲ ಅವಕಾಶ: ವೇಗಿ ಶ್ರೀಶಾಂತ್‌ ಬೇಸರ

ಬೌಲರ್‌, ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಭಾರತದ ಯಾರೊಬ್ಬರೂ ಅಗ್ರ 10ರಲ್ಲಿ ಸ್ಥಾನ ಪಡೆದಿಲ್ಲ. ತಂಡಗಳ ರ‍್ಯಾಂಕಿಂಗ್‌ನಲ್ಲಿ ಇಂಗ್ಲೆಂಡ್‌ ಅಗ್ರಸ್ಥಾನದಲ್ಲಿದ್ದು, ಆಸ್ಪ್ರೇಲಿಯಾ 2, ಭಾರತ 3ನೇ ಸ್ಥಾನದಲ್ಲಿದೆ.