T20 World Cup ಡೇರಲ್ ಮಿಚೆಲ್ ಆಕರ್ಷಕ ಫಿಫ್ಟಿ; ಪಾಕ್‌ಗೆ ನ್ಯೂಜಿಲೆಂಡ್ ಸವಾಲಿನ ಗುರಿ
ಪಾಕಿಸ್ತಾನ ವಿರುದ್ದ ಆಕರ್ಷಕ ಅರ್ಧಶತಕ ಚಚ್ಚಿದ ಡೇರಲ್ ಮಿಚೆಲ್
ಪಾಕಿಸ್ತಾನ ಫೈನಲ್ ಪ್ರವೇಶಿಸಲು 153 ರನ್ ಗುರಿ
2 ವಿಕೆಟ್ ಕಬಳಿಸಿ ಮಿಂಚಿದ ಶಾಹೀನ್ ಅಫ್ರಿದಿ
ಸಿಡ್ನಿ(ನ.09): ಡೇರಲ್ ಮಿಚೆಲ್ ಆಕರ್ಷಕ ಅರ್ಧಶತಕ (53) ಹಾಗೂ ನಾಯಕ ಕೇನ್ ವಿಲಿಯಮ್ಸನ್ (46) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 152 ರನ್ ಬಾರಿಸಿದ್ದು, ಪಾಕಿಸ್ತಾನ ತಂಡವು ಐಸಿಸಿ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಲು ರನ್ ಬಾರಿಸಬೇಕಿದೆ. ಪಾಕಿಸ್ತಾನ ಪರ ವೇಗಿ ಶಾಹೀನ್ ಅಫ್ರಿದಿ 2, ಮೊಹಮ್ಮದ್ ನವಾಜ್ ಒಂದು ವಿಕೆಟ್ ಪಡೆದರು.
ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಸ್ಪೋಟಕ ಆರಂಭಿಕ ಬ್ಯಾಟರ್ ಫಿನ್ ಅಲೆನ್ ಕೇವಲ 4 ರನ್ ಬಾರಿಸಿ ಮೊದಲ ಓವರ್‌ನಲ್ಲೇ ಶಾಹೀನ್ ಅಫ್ರಿದಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಡೆವೊನ್ ಕಾನ್‌ವೇ 20 ಎಸೆತಗಳಲ್ಲಿ 21 ರನ್ ಬಾರಿಸಿ ರನೌಟ್ ಆಗುವ ಮೂಲಕ ಪೆವಿಲಿಯನ್ ಸೇರಿದರು. ಪವರ್‌ಪ್ಲೇ ಅಂತ್ಯದ ವೇಳೆಗೆ ನ್ಯೂಜಿಲೆಂಡ್ ತಂಡವು 38 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದರು. ಇನ್ನು ಇನ್‌ಫಾರ್ಮ್ ಬ್ಯಾಟರ್ ಗ್ಲೆನ್ ಫಿಲಿಫ್ಸ್ ಕೇವಲ 6 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದು, ಕಿವೀಸ್ ಪಾಳಯದಲ್ಲಿ ಆತಂಕ ಮನೆ ಮಾಡುವಂತೆ ಮಾಡಿತು.
T20 World Cup: ಮೊದಲ ಸೆಮೀಸ್‌ನಲ್ಲಿ ಪಾಕ್ ಎದುರು ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ
ಕೇನ್-ಮಿಚೆಲ್ ಜುಗಲ್ಬಂದಿ: 8 ಓವರ್ ಅಂತ್ಯದ ವೇಳೆಗೆ ಕೇವಲ 49 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ನ್ಯೂಜಿಲೆಂಡ್ ತಂಡಕ್ಕೆ 4ನೇ ವಿಕೆಟ್‌ಗೆ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಡೇರಲ್ ಮಿಚೆಲ್ 66 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಕೇನ್ ವಿಲಿಯಮ್ಸನ್ 42 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 46 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಡೇರಲ್ ಮಿಚೆಲ್ 35 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 53 ರನ್ ಬಾರಿಸಿ ಅಜೇಯರಾಗುಳಿದರು. ಇನ್ನು ಕೊನೆಯಲ್ಲಿ ಜೇಮ್ಸ್ ನೀಶಮ್ 16 ರನ್ ಬಾರಿಸುವ ಮೂಲಕ ತಂಡದ ಮೊತ್ತ 150ರ ಗಡಿ ದಾಟಿಸಲು ನೆರವಾದರು.