ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್-ಪಾಕಿಸ್ತಾನ ಸೆಣಸಾಟಮೊದಲ ಸೆಮೀಸ್‌ಗೆ ಸಿಡ್ನಿ ಕ್ರಿಕೆಟ್ ಮೈದಾನ ಆತಿಥ್ಯಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ 

ಸಿಡ್ನಿ(ನ.09): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿಂದು ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಮೊದಲ ಹೈವೋಲ್ಟೇಜ್ ಸೆಮಿಫೈನಲ್ ಪಂದ್ಯಕ್ಕೆ ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ. ಇನ್ನು ನಿರೀಕ್ಷೆಯಂತೆಯೇ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಒಂದು ಕಡೆ ಸೂಪರ್‌-12ರ ಹಂತದಲ್ಲಿ ‘ಗ್ರೂಪ್‌ ಆಫ್‌ ಡೆತ್‌’ ಎಂದೇ ಕರೆಸಿಕೊಳ್ಳುತ್ತಿದ್ದ ಗುಂಪು 1ರಲ್ಲಿ ನ್ಯೂಜಿಲೆಂಡ್‌ ಅಗ್ರಸ್ಥಾನಿಯಾಗಿಯೇ ನಾಕೌಟ್‌ಗೇರಿತ್ತು. ಅತ್ತ ಪಾಕಿಸ್ತಾನ ತಂಡ ಭಾರತ, ಜಿಂಬಾಬ್ವೆ ವಿರುದ್ಧ ಸೋತರೂ ಅದೃಷ್ಟದ ಬಾಗಿಲ ಮೂಲಕ ‘ಬಿ’ಗುಂಪಿನಿಂದ ಅಂತಿಮ 4ರ ಘಟ್ಟಪ್ರವೇಶಿಸಿದೆ.

ಎರಡೂ ತಂಡದಲ್ಲೂ ಬೌಲಿಂಗ್ ಟ್ರಂಪ್‌ಕಾರ್ಡ್‌: ಹೌದು, ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಬ್ಯಾಟರ್‌ಗಳಿಗಿಂತ ಬೌಲರ್‌ಗಳು ದರ್ಬಾರು ನಡೆಸುವ ಸಾಧ್ಯತೆಯಿದೆ. ಒಂದು ಕಡೆ ಪಾಕಿಸ್ತಾನ ತಂಡದಲ್ಲಿ ಹ್ಯಾರಿಸ್ ರೌಫ್, ನಸೀಂ ಶಾ, ಶಾಹೀನ್ ಅಫ್ರಿದಿ ಅವರಂತಹ ಮಾರಕ ವೇಗಿಗಳ ದಂಡೇ ಇದೆ. ಇದರ ಜತೆಗೆ ಶಾದಾಬ್ ಖಾನ್ ಬೌಲಿಂಗ್‌ನಲ್ಲಿ ಕಮಾಲ್ ಮಾಡಲು ಎದುರು ನೋಡುತ್ತಿದ್ದಾರೆ.

T20 World Cup ಸಿಡ್ನಿಯಲ್ಲಿಂದು ಪಾಕ್ vs ಕಿವೀಸ್ ಹೈವೋಲ್ಟೇಜ್ ಕದನ..!

ಇನ್ನೊಂದೆಡೆ ನ್ಯೂಜಿಲೆಂಡ್ ತಂಡವು ಕೂಡಾ ಹೆಚ್ಚಾಗಿ ಬೌಲರ್‌ಗಳನ್ನೇ ನೆಚ್ಚಿಕೊಂಡಿದೆ. ಅನುಭವಿ ವೇಗಿಗಳಾದ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಲಾಕಿ ಫರ್ಗ್ಯೂಸನ್ ಜತೆಗೆ ಜೇಮ್ಸ್ ನೀಶಮ್ ಕೂಡಾ ಮಾರಕ ದಾಳಿ ಸಂಘಟಿಸುವ ಕ್ಷಮತೆ ಹೊಂದಿದ್ದಾರೆ. ಇನ್ನು ಸ್ಪಿನ್ನರ್‌ಗಳಾದ ಇಶ್ ಸೋಧಿ ಹಾಗೂ ಮಿಚೆಲ್ ಸ್ಯಾಂಟ್ನರ್ ಪಂದ್ಯದ ದಿಕ್ಕನ್ನೇ ಬದಲಿಸುವ ಕ್ಷಮತೆ ಹೊಂದಿದ್ದಾರೆ.

Scroll to load tweet…

ಈ ಬಾರಿ ಸಿಡ್ನಿಯಲ್ಲಿ ಸೋತಿಲ್ಲ ಉಭಯ ತಂಡಗಳು: ಹೌದು, ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಸಿಡ್ನಿ ಮೈದಾನದಲ್ಲಿ ಕಣಕ್ಕಿಳಿದಿದ್ದವಾದರೂ ಒಮ್ಮೆಯೂ ಸೋಲಿನ ಕಹಿಯುಂಡಿಲ್ಲ. ನ್ಯೂಜಿಲೆಂಡ್ ತಂಡವು ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ಎದುರು ಭರ್ಜರಿ ಗೆಲುವು ಸಾಧಿಸಿ ಬೀಗಿದೆ. ಇನ್ನೊಂದಡೆ ಪಾಕಿಸ್ತಾನ ತಂಡವು ಮಹತ್ವದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಗೆಲುವಿನ ಕೇಕೆ ಹಾಕಿತ್ತು.

ಪಿಚ್‌ ರಿಪೋರ್ಚ್‌

ಇದು ಬ್ಯಾಟಿಂಗ್‌ ಸ್ನೇಹಿ ಪಿಚ್‌ ಆಗಿದ್ದು, ದೊಡ್ಡ ಮೊತ್ತ ದಾಖಲಾಗುವ ನಿರೀಕ್ಷೆ ಇದೆ. ಸ್ಪಿನ್ನರ್‌ಗಳೂ ಪ್ರಮುಖ ಪಾತ್ರ ವಹಿಸಬಹುದು. ಇಲ್ಲಿ ನಡೆದ ಟೂರ್ನಿಯ 6 ಪಂದ್ಯಗಳಲ್ಲಿ 5ರಲ್ಲಿ ಮೊದಲು ಬ್ಯಾಟ್‌ ಮಾಡಿದ ಜಯಗಳಿಸಿದೆ. ಹೀಗಾಗಿ ಟಾಸ್‌ ನಿರ್ಣಾಯಕ ಪಾತ್ರ ವಹಿಸಬಹುದು.

3 ಸೆಮೀಸಲ್ಲೂ ಪಾಕ್‌ಗೆ ಜಯ

ಐಸಿಸಿ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಪಾಕ್‌-ಕಿವೀಸ್‌ 3 ಬಾರಿ ಮುಖಾಮುಖಿಯಾಗಿದ್ದು, ಮೂರು ಪಂದ್ಯಗಳಲ್ಲಿ ಪಾಕ್‌ ಜಯಗಳಿಸಿದೆ. 1992, 1999ರ ಏಕದಿನ ವಿಶ್ವಕಪ್‌ ಸೆಮೀಸ್‌, 2007ರ ಟಿ20 ವಿಶ್ವಕಪ್‌ ಸೆಮೀಸ್‌ನಲ್ಲಿ ಕಿವೀಸ್‌ ಪಾಕ್‌ಗೆ ಶರಣಾಗಿತ್ತು. ಈ ಬಾರಿ ಪಾಕಿಸ್ತಾನವನ್ನು ಮಣಿಸಿ ಸತತ ಎರಡನೇ ಬಾರಿಗೆ ಸೆಮೀಸ್‌ಗೇರುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ

ತಂಡಗಳು ಹೀಗಿವೆ ನೋಡಿ

ನ್ಯೂಜಿಲೆಂಡ್‌: ಫಿನ್‌ ಆ್ಯಲೆನ್‌, ಡೆವೊನ್‌ ಕಾನ್‌ವೇ, ಕೇನ್‌ ವಿಲಿಯಮ್ಸನ್‌(ನಾಯಕ), ಗ್ಲೆನ್‌ ಫಿಲಿಫ್ಸ್, ಡ್ಯಾರಿಲ್‌ ಮಿಚೆಲ್, ಜೇಮ್ಸ್ ನೀಶಮ್‌, ಮಿಚೆಲ್ ಸ್ಯಾಂಟ್ನರ್‌, ಟಿಮ್ ಸೌಥಿ, ಇಶ್ ಸೋಧಿ, ಲಾಕಿ ಫಗ್ರ್ಯೂಸನ್‌, ಟ್ರೆಂಟ್ ಬೌಲ್ಟ್‌

ಪಾಕಿಸ್ತಾನ: ಬಾಬರ್‌ ಆಜಂ(ನಾಯಕ), ಮೊಹಮ್ಮದ್ ರಿಜ್ವಾನ್‌, ಶಾನ್ ಮಸೂದ್‌, ಇಫ್ತಿಕಾರ್‌ ಅಹಮದ್, ಮೊಹಮ್ಮದ್ ಹಾರಿಸ್‌, ಮೊಹಮ್ಮದ್ ನವಾಜ್‌, ಶಾದಾಬ್‌ ಖಾನ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಂ ಶಾ, ಹ್ಯಾರಿಸ್ ರೌಫ್‌, ಶಾಹೀನ್‌ ಅಫ್ರಿದಿ