ಭಾರತ-ದಕ್ಷಿಣ ಆಫ್ರಿಕಾ ನಡುವಿನ ಪಂದ್ಯಕ್ಕೆ ಕ್ಷಣಗಣನೆಪದೇ ಪದೇ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಕೆ ಎಲ್ ರಾಹುಲ್ಕೆ ಎಲ್ ರಾಹುಲ್ ಬದಲಿಗೆ ಪಂತ್‌ಗೆ ಸಿಗುತ್ತಾ ಸ್ಥಾನ?

ಸಿಡ್ನಿ(ಅ.29): ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕರ್ನಾಟಕದ ಕ್ರಿಕೆಟಿಗ ಕೆ ಎಲ್ ರಾಹುಲ್ ದಯನೀಯ ಬ್ಯಾಟಿಂಗ್ ವೈಫಲ್ಯ ಮುಂದುವರೆದಿದ್ದು, ಮೊದಲೆರಡು ಪಂದ್ಯಗಳಲ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಟೀಂ ಇಂಡಿಯಾ ಉಪನಾಯಕರೂ ಆಗಿರುವ ರಾಹುಲ್, ಪಾಕಿಸ್ತಾನ ವಿರುದ್ದದ ಮೊದಲ ಪಂದ್ಯದಲ್ಲಿ 4 ರನ್ ಗಳಿಸಿದರೆ, ನೆದರ್‌ಲೆಂಡ್ಸ್ ಎದುರು ಕೇವಲ 9 ರನ್‌ ಬಾರಿಸಿ ವಿಕೆಟ್ ಒಪ್ಪಿಸಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ದ ಭಾನುವಾರ(ಅ.30)ದಂದು ನಡೆಯಲಿರುವ ಪಂದ್ಯದಲ್ಲಿ ಕೆ ಎಲ್ ರಾಹುಲ್‌ಗೆ ವಿಶ್ರಾಂತಿ ನೀಡಿ ರಿಷಭ್ ಪಂತ್‌ಗೆ ಆರಂಭಿಕನಾಗಿ ಕಣಕ್ಕಿಳಿಸಲಿ ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿವೆ. ಈ ಎಲ್ಲ ಪ್ರಶ್ನೆಗಳಿಗೆ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಖಡಕ್ ಉತ್ತರ ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ಎದುರಿನ ಪಂದ್ಯಕ್ಕೂ ಮುನ್ನ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್, ರಾಹುಲ್ ಬದಲಿಗೆ ರಿಷಭ್ ಪಂತ್‌ಗೆ ಆರಂಭಿಕನಾಗಿ ಕಣಕ್ಕಿಳಿಯಲು ಅವಕಾಶ ಮಾಡಿಕೊಡುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ. 'ನಾವು ನಿಜಕ್ಕೂ ಆ ಕುರಿತಂತೆ ಆಲೋಚನೆಯನ್ನು ಮಾಡಿಲ್ಲ. ಇನ್ನು ಕೇವಲ ಎರಡು ಪಂದ್ಯಗಳನ್ನಷ್ಟೇ ಆಡಿದ್ದೇವೆ. ಎರಡು ಪಂದ್ಯಗಳನ್ನು ಗಮನದಲ್ಲಿಟ್ಟುಕೊಂಡು ಒಂದು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಅವರು ಈ ಹಿಂದೆ ತುಂಬಾ ಚೆನ್ನಾಗಿಯೇ ಆಡಿದ್ದಾರೆ. ಇನ್ನು ಅಭ್ಯಾಸ ಪಂದ್ಯದಲ್ಲೂ ರಾಹುಲ್ ಅತ್ಯುತ್ತಮವಾಗಿ ಆಡಿದ್ದಾರೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ರಾಹುಲ್ ಬದಲಿಗೆ ಪಂತ್ ಆಡಿಸುವ ಯಾವುದೇ ಆಲೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

T20 World Cup ಆತನನ್ನು ಕಿತ್ತೊಗೆಯಿರಿ: ಮತ್ತೆ ಫೇಲ್ ಆದ ಕೆ ಎಲ್ ರಾಹುಲ್ ವಿರುದ್ದ ಮುಗಿಬಿದ್ದ ಕ್ರಿಕೆಟ್ ಫ್ಯಾನ್ಸ್‌..!

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದಲ್ಲಿ ಗ್ರೂಪ್ 2ನಲ್ಲಿ ಸ್ಥಾನ ಪಡೆದಿದ್ದು, ಈಗಾಗಲೇ ಪಾಕಿಸ್ತಾನ ಹಾಗೂ ನೆದರ್‌ಲೆಂಡ್ಸ್ ವಿರುದ್ದ ಭರ್ಜರಿ ಜಯ ಸಾಧಿಸುವ ಮೂಲಕ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಭದ್ರವಾಗಿದೆ. ಇನ್ನು ಟೀಂ ಇಂಡಿಯಾ, ಸೂಪರ್ 12 ಹಂತದಲ್ಲಿ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ವಿರುದ್ದ ಸೆಣಸಾಡಲಿದ್ದು, ಅನಾಯಾಸವಾಗಿ ಸೆಮೀಸ್‌ಗೇರುವ ಲೆಕ್ಕಾಚಾರದಲ್ಲಿದೆ.

ಟೀಂ ಇಂಡಿಯಾ ಪರ ಮಾಜಿ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಪಾಕಿಸ್ತಾನ ವಿರುದ್ದ ಅಜೇಯ 82 ರನ್ ಬಾರಿಸುವ ಮೂಲಕ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದ್ದ ವಿರಾಟ್ ಕೊಹ್ಲಿ, ನೆದರ್‌ಲೆಂಡ್ಸ್‌ ವಿರುದ್ದವೂ ಅಜೇಯ ಅರ್ಧಶತಕ ಸಿಡಿಸಿದ್ದರು. ಇನ್ನು ನೆದರ್‌ಲೆಂಡ್ಸ್ ವಿರುದ್ದ ನಾಯಕ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಕೂಡಾ ಅರ್ಧಶತಕ ಸಿಡಿಸಿ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಶಮಿ, ಭುವಿ ಹಾಗೂ ಆರ್ಶದೀಪ್ ಸಿಂಗ್ ಕೂಡಾ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.