Asianet Suvarna News Asianet Suvarna News

T20 World Cup ಆತನನ್ನು ಕಿತ್ತೊಗೆಯಿರಿ: ಮತ್ತೆ ಫೇಲ್ ಆದ ಕೆ ಎಲ್ ರಾಹುಲ್ ವಿರುದ್ದ ಮುಗಿಬಿದ್ದ ಕ್ರಿಕೆಟ್ ಫ್ಯಾನ್ಸ್‌..!

* ನೆದರ್‌ಲೆಂಡ್ಸ್ ಎದುರು ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ
* ನೆದರ್‌ಲೆಂಡ್ಸ್‌ ಎದುರು 56 ರನ್‌ಗಳ ಗೆಲುವು ಸಾಧಿಸಿದ ರೋಹಿತ್ ಶರ್ಮಾ ಪಡೆ
* ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಭಾರತ ಕ್ರಿಕೆಟ್ ತಂಡ

T20 World Cup KL Rahul Roasted With Memes After Indian Batter Fails Against Netherlands in Sydney kvn
Author
First Published Oct 27, 2022, 5:09 PM IST

ಸಿಡ್ನಿ(ಅ.27): ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್, ದಯನೀಯ ಬ್ಯಾಟಿಂಗ್ ವೈಫಲ್ಯ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಪಂದ್ಯದಲ್ಲೂ ಮುಂದುವರೆದಿದೆ. ಪಾಕಿಸ್ತಾನ ಎದುರು ಕೇವಲ 4 ರನ್‌ಗೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದ ಕೆ ಎಲ್ ರಾಹುಲ್, ಇದೀಗ ಕ್ರಿಕೆಟ್ ಶಿಶು ನೆದರ್‌ಲೆಂಡ್ಸ್‌ ವಿರುದ್ದ 9 ರನ್‌ಗೆ ವಿಕೆಟ್‌ ಒಪ್ಪಿಸಿ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಈ ಮೂಲಕ ನೆದರ್‌ಲೆಂಡ್ಸ್ ವಿರುದ್ದವಾದರೂ ಕೆ ಎಲ್ ರಾಹುಲ್‌ ಫಾರ್ಮ್‌ಗೆ ಮರಳಬಹುದು ಎನ್ನುವ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ.        

ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಕೆ ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸುವ ನಿರೀಕ್ಷೆಯಲ್ಲಿದ್ದರು. ಮೀಕ್ರನ್‌ ಬೌಲಿಂಗ್‌ನಲ್ಲಿ ಕೆ ಎಲ್ ರಾಹುಲ್‌ ಎಲ್‌ಬಿ ಬಲೆಗೆ ಬಿದ್ದರು. ಡಿಆರ್‌ಎಸ್‌ ತೆಗೆದುಕೊಂಡಿದ್ದರೆ, ಜೀವದಾನ ಪಡೆಯಬಹುದಿತ್ತು, ಆದರೆ ಕೆ ಎಲ್ ರಾಹುಲ್, ಡಿಆರ್‌ಎಸ್ ಪಡೆದುಕೊಳ್ಳಲಿಲ್ಲ.

ಕೆ ಎಲ್ ರಾಹುಲ್ ಅಲ್ಪಮೊತ್ತಕ್ಕೆ ವಿಕೆಟ್‌ ಒಪ್ಪಿಸುತ್ತಿದ್ದಂತೆ ನೆಟ್ಟಿಗರು ಕೆ ಎಲ್ ರಾಹುಲ್‌ ಮೇಲೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದು, ಆತನನ್ನು ತಂಡದಿಂದ ಕಿತ್ತೊಗೆಯಿರಿ ಎಂದು ಕಿಡಿಕಾರಿದ್ದಾರೆ. 

ನೆದರ್‌ಲೆಂಡ್ಸ್‌ ವಿರುದ್ದ ಗೆಲುವಿನ ಕೇಕೆ ಹಾಕಿದ ಟೀಂ ಇಂಡಿಯಾ

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಆಕರ್ಷಕ ಬ್ಯಾಟಿಂಗ್, ಅಶ್ವಿನ್, ಅಕ್ಷರ್ ಹಾಗೂ ಭುವನೇಶ್ವರ್ ಕುಮಾರ್ ಸಂಘಟಿತ ಪ್ರದರ್ಶನದ ನೆರವಿನಿಂದ ನೆದರ್‌ಲೆಂಡ್ಸ್‌ ವಿರುದ್ದ ಟೀಂ ಇಂಡಿಯಾ 56 ರನ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ನೆದರ್‌ಲೆಂಡ್ಸ್‌ ವಿರುದ್ದ ಟಾಸ್ ಗೆದ್ದ ಟೀಂ ಇಂಡಿಯಾ, ಕೆ ಎಲ್ ರಾಹುಲ್ ರೂಪದಲ್ಲಿ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡಿತಾದರೂ ಆ ಬಳಿಕ ಎರಡನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಜತೆಗೂಡಿ 73 ರನ್‌ಗಳ ಜತೆಯಾಟವಾಡಿದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ ಕೇವಲ 39 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಆಕರ್ಷಕ 53 ರನ್ ಬಾರಿಸಿ ಫ್ರಿಡ್ ಕ್ಲಾಸೆನ್‌ಗೆ ವಿಕೆಟ್‌ ಒಪ್ಪಿಸಿದರು.

T20 World Cup: ಟೀಂ ಇಂಡಿಯಾಗೆ ಸುಲಭ ತುತ್ತಾದ ನೆದರ್‌ಲೆಂಡ್ಸ್‌, ಅಂಕಪಟ್ಟಿಯಲ್ಲಿ ರೋಹಿತ್ ಪಡೆಗೆ ಅಗ್ರಸ್ಥಾನ

ರೋಹಿತ್ ವಿಕೆಟ್ ಪತನದ ಬಳಿಕ ಸೂರ್ಯಕುಮಾರ್ ಯಾದವ್ ಜತೆಗೂಡಿ ಟೀಂ ಇಂಡಿಯಾ ರನ್ ವೇಗಕ್ಕೆ ಚುರುಕು ಮುಟ್ಟಿಸಿದ್ದರು. ಮೂರನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಕೊನೆಯ 8 ಓವರ್‌ಗಳಲ್ಲಿ ಮುರಿಯದ 95 ರನ್‌ಗಳ ಜತೆಯಾಟ ನಿಭಾಯಿಸಿದರು. ನೆದರ್‌ಲೆಂಡ್ಸ್ ಎದುರು ಕೇವಲ 44 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 62 ರನ್ ಸಿಡಿಸಿದರು. ಇನ್ನು ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್ ಯಾದವ್ ಕೇವಲ 25 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 51 ರನ್ ಬಾರಿಸಿ ಮಿಂಚಿದರು. ಸೂರ್ಯಕುಮಾರ್ ಯಾದವ್ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಟಿ20 ವಿಶ್ವಕಪ್‌ನಲ್ಲಿ ಮೊದಲ ಅರ್ಧಶತಕ ಬಾರಿಸಿ ಸಂಭ್ರಮಿಸಿದರು.

Follow Us:
Download App:
  • android
  • ios