ದುಬೈ(ನ.13): 2021ನೇ ಸಾಲಿನ ಐಸಿಸಿ ಟಿ20 ವಿಶ್ವಕಪ್‌ 7ನೇ ಆವೃತ್ತಿಯ ಆತಿಥ್ಯದ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಬಿಸಿಸಿಐ, ಕೊರೋನಾ ನಡುವೆಯೂ ಯಾವುದೇ ಗೊಂದಲಕ್ಕೆ ಅವಕಾಶ ನೀಡದೇ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ತಿಳಿಸಿದ್ದಾರೆ. ಇದೇ ವೇಳೆ ಐಸಿಸಿ ಕೂಡ ವಿಶ್ವಾಸ ವ್ಯಕ್ತಪಡಿಸಿದ್ದು, ಟಿ20 ವಿಶ್ವಕಪ್‌ ಯಶಸ್ವಿಗೊಳಿಸಲು ಬಿಸಿಸಿಐ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಈಗಾಗಲೇ ಆಯೋಜನೆಯ ಕುರಿತು ಬಿಸಿಸಿಐ ಜೊತೆ ಮಾತುಕತೆ ನಡೆದಿದೆ ಎಂದು ತಿಳಿಸಿದೆ.

ಈ ಕುರಿತು ಗಂಗೂಲಿ ಪ್ರತಿಕ್ರಿಯಿಸಿದ್ದು, ‘ವೇಳಾಪಟ್ಟಿಯ ಪ್ರಕಾರ 2021ನೇ ಟಿ20 ವಿಶ್ವಕಪ್‌ ಟೂರ್ನಿಯನ್ನು ಅಕ್ಟೋಬರ್‌-ನವೆಂಬರ್‌ನಲ್ಲಿ ಯಶಸ್ವಿಯಾಗಿ ಆಯೋಜಿಸಲು ಎಲ್ಲಾ ರೀತಿಯ ಸಿದ್ಧತೆಯನ್ನು ಬಿಸಿಸಿಐ ಮಾಡಿಕೊಳ್ಳುತ್ತಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳುವ 15 ತಂಡಗಳಿಗೂ ಯಾವುದೇ ತೊಂದರೆ ಆಗದಂತೆ ಎಲ್ಲಾ ಸೌಕರ್ಯ ಒದಗಿಸಲಾಗುತ್ತದೆ. ಈ ಬಗ್ಗೆ ಐಸಿಸಿಗಾಗಲಿ ಅಥವಾ ಕ್ರಿಕೆಟ್‌ ತಂಡಗಳಿಗಾಗಲಿ ಯಾವುದೇ ಅನುಮಾನ ಬೇಡ. ಕೊರೋನಾ ಸಮಸ್ಯೆಯೂ ಎದುರಾಗದಂತೆ ಎಲ್ಲಾ ರೀತಿಯ ನಿಯಮಗಳನ್ನೂ ಪಾಲನೆ ಮಾಡಲಾಗುತ್ತದೆ. ಐಪಿಎಲ್‌ ಟೂರ್ನಿಯಲ್ಲಿ ಮಾಡಿಕೊಳ್ಳಲಾದ ಸುರಕ್ಷತಾ ಕ್ರಮಗಳನ್ನೂ ಅಳವಡಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

2021ರ ಟಿ20 ವಿಶ್ವಕಪ್ ಖಚಿತಪಡಿಸಿದ ICC,ಭಾರತೀಯರಿಗೆ ಡಬಲ್ ಧಮಾಕ!

ಇದೇ ಸಂದರ್ಭದಲ್ಲಿ ಭಾರತೀಯರಿಗೆ ದೀಪಾವಳಿಯ ಶುಭಕೋರಿರುವ ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನು ಸ್ವಾನ್ನಿ, ‘ಭಾರತದ ಕ್ರಿಕೆಟ್‌ ಅಭಿಮಾನಿಗಳಿಗೆ ಇದೊಂದು ಸಿಹಿ ಸುದ್ದಿಯಾಗಿದ್ದು, 2021ರ ಟಿ20 ವಿಶ್ವಕಪ್‌ ಟೂರ್ನಿ ಯಶಸ್ವಿಯಾಗಿ ಆಯೋಜನೆಗೊಳ್ಳಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪ್ರೇಕ್ಷಕರ ಮತ್ತು ಆಟಗಾರರ ಸುರಕ್ಷತೆಯನ್ನು ಗಮನದಲ್ಲಿ ಇರಿಸಿಕೊಂಡು ಪಂದ್ಯಾವಳಿ ಆಯೋಜನೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.