T20 World Cup: ಎರಡು ಬಾರಿ ಚಾಂಪಿಯನ್ ವಿಂಡೀಸ್‌ಗೆ ಸೋಲಿನ ಶಾಕ್ ಕೊಟ್ಟ ಸ್ಕಾಟ್ಲೆಂಡ್..!
* ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಂದು ಅಚ್ಚರಿ ಫಲಿತಾಂಶ
* ವಿಂಡೀಸ್ ಎದುರು 42 ರನ್‌ಗಳ ಜಯ ಸಾಧಿಸಿದ ಸ್ಕಾಟ್ಲೆಂಡ್
* ಅಜೇಯ ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಜಾರ್ಜ್ ಮುನ್ಶಿ
ಹೋಬರ್ಡ್(ಅ.17): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ದಿನವೂ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಮೊದಲ ದಿನ ಶ್ರೀಲಂಕಾ ತಂಡವನ್ನು ನಮೀಬಿಯಾ ಮಣಿಸಿತ್ತು. ಇದೀಗ ಎರಡನೇ ದಿನ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡಕ್ಕೆ ಸೋಲಿನ ಶಾಕ್ ನೀಡುವಲ್ಲಿ ಸ್ಕಾಟ್ಲೆಂಡ್ ಯಶಸ್ವಿಯಾಗಿದೆ. ಜಾರ್ಜ್ ಮುನ್ಶಿ ಅಜೇಯ ಅರ್ಧಶತಕ, ಮಾರ್ಕ್ ವ್ಯಾಟ್ ಮಿಂಚಿನ ಬೌಲಿಂಗ್ ಪ್ರದರ್ಶನದ ನೆರವಿನಿಂದ ವಿಂಡೀಸ್ ಎದುರು ಸ್ಕಾಟ್ಲೆಂಡ್ ತಂಡವು 42 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಇಲ್ಲಿನ ಬೆಲ್ಲೆರಿವ್ ಓವಲ್ ಸ್ಟೇಡಿಯಂನಲ್ಲಿ, ಸ್ಕಾಟ್ಲೆಂಡ್ ನೀಡಿದ್ದ 161 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಸ್ಪೋಟಕ ಬ್ಯಾಟಿಂಗ್ ಮೂಲಕ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಕೈಲ್ ಮೇಯರ್ಸ್(20) ಅವರನ್ನು ಪೆವಿಲಿಯನ್‌ಗೆ ಅಟ್ಟುವಲ್ಲಿ ಜೋಶ್ ಡೆವಿ ಯಶಸ್ವಿಯಾದರು. ಇದಾದ ಬಳಿಕ ಎವಿನ್ ಲೆವಿಸ್ ಹಾಗೂ ಬ್ರೆಂಡನ್ ಕಿಂಗ್ ಎರಡನೇ ವಿಕೆಟ್‌ಗೆ 33 ರನ್‌ಗಳ ಜತೆಯಾಟ ನಿಭಾಯಿಸಿದರು. ಲೆವಿಸ್ 13 ಎಸೆತಗಳಲ್ಲಿ 14 ರನ್ ಬಾರಿಸಿದರೆ, ಬ್ರೆಂಡನ್ ಕಿಂಗ್ 17 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಕೈಕೊಟ್ಟ ವಿಂಡೀಸ್ ಮಧ್ಯಮ ಕ್ರಮಾಂಕ: ಒಂದು ಹಂತದಲ್ಲಿ ವೆಸ್ಟ್ ಇಂಡೀಸ್ ತಂಡವು 58 ರನ್‌ಗಳವರೆಗೂ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನತ್ತ ದಿಟ್ಟ ಹೆಜ್ಜೆಹಾಕುತ್ತಿತ್ತು. ಆದರೆ ಬ್ರೆಂಡನ್ ಕಿಂಗ್ ವಿಕೆಟ್ ಪತನದ ಬಳಿಕ ಕೆರಿಬಿಯನ್ ಪಡೆ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ನಾಯಕ ನಿಕೋಲಸ್ ಪೂರನ್(4), ಸಮರ್ಥ್ ಬ್ರೂಕ್ಸ್(4) ಹಾಗೂ ರೋಮನ್ ಪೋವೆಲ್(5) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು.
ಇನ್ನು ಕೊನೆಯಲ್ಲಿ ಆಲ್ರೌಂಡರ್ ಜೇಸನ್ ಹೋಲ್ಡರ್, ವಿಂಡೀಸ್ ತಂಡವನ್ನು ಸೋಲಿನಿಂದ ಪಾರು ಮಾಡಲು ಯತ್ನಿಸಿದರಾದರೂ, ಮತ್ತೊಂದು ತುದಿಯಲ್ಲಿ ಅವರಿಗೆ ಉತ್ತಮ ಸಾಥ್ ಸಿಗಲಿಲ್ಲ. ಹೋಲ್ಡರ್ 33 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 38 ರನ್ ಬಾರಿಸಿ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು.
T20 World Cup: ವಿಂಡೀಸ್‌ಗೆ ಸವಾಲಿನ ಗುರಿ ನೀಡಿದ ಸ್ಕಾಟ್ಲೆಂಡ್..!
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಸ್ಕಾಟ್ಲೆಂಡ್ ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ 5 ಓವರ್‌ಗಳಲ್ಲಿ 10ರ ಸರಾಸರಿಯಲ್ಲಿ 50 ರನ್‌ಗಳನ್ನು ಕಲೆಹಾಕಿತು. ಸ್ಕಾಟ್ಲೆಂಡ್ ಪರ ಆರಂಭಿಕ ಬ್ಯಾಟರ್‌ಗಳಾದ ಜಾರ್ಜ್ ಮುನ್ಶಿ ಹಾಗೂ ಮೈಕಲ್ ಜೋನ್ಸ್, 6.2 ಓವರ್‌ಗಳಲ್ಲಿ 55 ರನ್‌ಗಳ ಜತೆಯಾಟ ನಿಭಾಯಿಸಿತು. ಜೋನ್ಸ್ ಕೇವಲ 20 ರನ್ ಬಾರಿಸಿ ಜೇಸನ್ ಹೋಲ್ಡರ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂ ಕ್ರಾಸ್ 3 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಜಾರ್ಜ್ ಮುನ್ಶಿ ಅಜೇಯ ಅರ್ಧಶತಕ: ಆರಂಭದಿಂದಲೇ ಚುರುಕಿನ ಬ್ಯಾಟಿಂಗ್ ನಡೆಸಿದ ಜಾರ್ಜ್ ಮುನ್ಶಿ , ವೆಸ್ಟ್ ಇಂಡೀಸ್ ಬೌಲರ್‌ಗಳ ಎದುರು ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಜಾರ್ಜ್ ಮುನ್ಶಿ 53 ಎಸೆತಗಳನ್ನು ಎದುರಿಸಿ 9 ಬೌಂಡರಿ ಸಹಿತ ಅಜೇಯ 66 ರನ್ ಬಾರಿಸಿ ತಂಡವು ಸವಾಲಿನ ಮೊತ್ತ ಕಲೆಹಾಕಲು ನೆರವಾದರು. ಅಂದಹಾಗೆ ಇದು ಜಾರ್ಜ್ ಮುನ್ಶಿ , ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾರಿಸಿದ ಮೊದಲ ಅರ್ಧಶತಕವೆನಿಸಿತು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ರಿಚಿ ಬೆರ್ರಿಂಗ್‌ಟನ್(16), ಕಾಲಮ್ ಮೆಲೇಡ್(23) ಹಾಗೂ ಕ್ರಿಸ್ ಗ್ರೀವೀಸ್(16) ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು 160ರ ಗಡಿ ಮುಟ್ಟಿಸುವಲ್ಲಿ ಯಶಸ್ವಿಯಾದರು.