Asianet Suvarna News Asianet Suvarna News

T20 World Cup: ವಿಂಡೀಸ್‌ಗೆ ಸವಾಲಿನ ಗುರಿ ನೀಡಿದ ಸ್ಕಾಟ್ಲೆಂಡ್..!

ವೆಸ್ಟ್ ಇಂಡೀಸ್ ಎದುರು ದಿಟ್ಟ ಬ್ಯಾಟಿಂಗ್ ನಡೆಸಿದ ಸ್ಕಾಟ್ಲೆಂಡ್
ವಿಂಡೀಸ್ ಗೆ ಗೆಲ್ಲಲು 161 ರನ್‌ಗಳ ಸವಾಲಿನ ಗುರಿ ನೀಡಿದ ಸ್ಕಾಟ್ಲೆಂಡ್
ಆಕರ್ಷಕ ಅರ್ಧಶತಕ ಸಿಡಿಸಿ ಆಸರೆಯಾದ ಜಾರ್ಜ್ ಮುನ್ಶಿ

ICC T20 World Cup 2022 Scotland Sets 161 runs target to West Indies kvn
Author
First Published Oct 17, 2022, 12:27 PM IST

ಹೋಬರ್ಟ್‌(ಅ.17): ಆರಂಭಿಕ ಬ್ಯಾಟರ್ ಜಾರ್ಜ್‌ ಮುನ್ಶಿ ಬಾರಿಸಿದ ಅಜೇಯ ಅರ್ಧಶತಕದ ನೆರವಿನಿಂದ ಸ್ಕಾಟ್ಲೆಂಡ್ ತಂಡವು 5 ವಿಕೆಟ್‌ ಕಳೆದುಕೊಂಡು 155 ರನ್‌ ರನ್ ಬಾರಿಸಿದ್ದು, ಎರಡು ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ ವೆಸ್ಟ್‌ ಇಂಡೀಸ್ ತಂಡಕ್ಕೆ ಸವಾಲಿನ ಗುರಿ ನೀಡಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಬಿ ಗುಂಪಿನ ಮೊದಲ ಪಂದ್ಯದಲ್ಲಿ ವಿಂಡೀಸ್ ಎದುರು ದಿಟ್ಟ ಪ್ರದರ್ಶನ ತೋರುವಲ್ಲಿ ಸ್ಕಾಟ್ಲೆಂಡ್ ಯಶಸ್ವಿಯಾಗಿದೆ.

ಇಲ್ಲಿನ ಬೆಲ್ಲೆರಿವ್ ಓವಲ್ ಸ್ಟೇಡಿಯಂನಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡವು ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಆದರೆ ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಸ್ಕಾಟ್ಲೆಂಡ್ ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ 5 ಓವರ್‌ಗಳಲ್ಲಿ 10ರ ಸರಾಸರಿಯಲ್ಲಿ 50 ರನ್‌ಗಳನ್ನು ಕಲೆಹಾಕಿತು. ಸ್ಕಾಟ್ಲೆಂಡ್ ಪರ ಆರಂಭಿಕ ಬ್ಯಾಟರ್‌ಗಳಾದ ಜಾರ್ಜ್‌ ಮುನ್ಶಿ ಹಾಗೂ ಮೈಕಲ್ ಜೋನ್ಸ್‌, 6.2 ಓವರ್‌ಗಳಲ್ಲಿ 55 ರನ್‌ಗಳ ಜತೆಯಾಟ ನಿಭಾಯಿಸಿತು. ಜೋನ್ಸ್‌ ಕೇವಲ 20 ರನ್ ಬಾರಿಸಿ ಜೇಸನ್ ಹೋಲ್ಡರ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂ ಕ್ರಾಸ್ 3 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.   

ಜಾರ್ಜ್‌ ಮುನ್ಶಿ ಅಜೇಯ ಅರ್ಧಶತಕ: ಆರಂಭದಿಂದಲೇ ಚುರುಕಿನ ಬ್ಯಾಟಿಂಗ್ ನಡೆಸಿದ ಜಾರ್ಜ್‌ ಮುನ್ಶಿ , ವೆಸ್ಟ್ ಇಂಡೀಸ್ ಬೌಲರ್‌ಗಳ ಎದುರು ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಜಾರ್ಜ್‌ ಮುನ್ಶಿ 53 ಎಸೆತಗಳನ್ನು ಎದುರಿಸಿ 9 ಬೌಂಡರಿ ಸಹಿತ ಅಜೇಯ 66 ರನ್‌ ಬಾರಿಸಿ ತಂಡವು ಸವಾಲಿನ ಮೊತ್ತ ಕಲೆಹಾಕಲು ನೆರವಾದರು. ಅಂದಹಾಗೆ ಇದು ಜಾರ್ಜ್‌ ಮುನ್ಶಿ , ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾರಿಸಿದ ಮೊದಲ ಅರ್ಧಶತಕವೆನಿಸಿತು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ರಿಚಿ ಬೆರ್ರಿಂಗ್‌ಟನ್(16), ಕಾಲಮ್‌ ಮೆಲೇಡ್(23) ಹಾಗೂ ಕ್ರಿಸ್ ಗ್ರೀವೀಸ್‌(16) ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು 160ರ ಗಡಿ ಮುಟ್ಟಿಸುವಲ್ಲಿ ಯಶಸ್ವಿಯಾದರು.

ವೆಸ್ಟ್ ಇಂಡೀಸ್ ತಂಡದ ಪರ ಜೇಸನ್ ಹೋಲ್ಡರ್ ಹಾಗೂ ಅಲ್ಜೆರಿ ಜೋಸೆಫ್ ತಲಾ ಎರಡು ವಿಕೆಟ್ ಪಡೆದರೆ, ಒಡೆನ್ ಸ್ಮಿತ್ ಒಂದು ವಿಕೆಟ್ ಪಡೆದರು. ಇನ್ನು ಅಲ್ಜೆರಿ ಜೋಸೆಫ್ ಮೊದಲ ಓವರ್‌ನಲ್ಲೇ 17 ರನ್ ನೀಡಿ ದುಬಾರಿಯಾಗಿದ್ದರು. ಆದರೆ ಆ ಬಳಿಕ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ ಜೋಸೆಫ್‌ ಉಳಿದ 3 ಓವರ್‌ಗಳಲ್ಲಿ ಕೇವಲ 11 ರನ್ ನೀಡಿ ಎರಡು ವಿಕೆಟ್ ಉರುಳಿಸಿದರು.

Follow Us:
Download App:
  • android
  • ios