T20 World Cup: ನೆದರ್‌ಲೆಂಡ್ಸ್ ಎದುರು ರೋಚಕ ಜಯ ಸಾಧಿಸಿದ ಬಾಂಗ್ಲಾದೇಶ..!
ಬಾಂಗ್ಲಾದೇಶ ಎದುರು ರೋಚಕ ಸೋಲು ಅನುಭವಿಸಿದ ನೆದರ್‌ಲೆಂಡ್ಸ್
9 ರನ್‌ಗಳ ವಿರೋಚಿತ ಗೆಲುವು ದಾಖಲಿಸಿದ ಬಾಂಗ್ಲಾದೇಶ
4 ವಿಕೆಟ್ ಕಬಳಿಸಿ ಮಿಂಚಿದ ಬಾಂಗ್ಲಾ ವೇಗಿ ಟಸ್ಕಿನ್ ಅಹಮದ್
ಹೋಬರ್ಟ್(ಅ.24) ಕಾಲಿನ್ ಅಕೆರ್‌ಮನ್ ಆಕರ್ಷಕ ಅರ್ಧಶತಕದ ಹೊರತಾಗಿಯೂ, ಟಸ್ಕಿನ್ ಅಹಮದ್ ಮಾರಕ ದಾಳಿಗೆ ತತ್ತರಿಸಿದ ನೆದರ್‌ಲೆಂಡ್ಸ್ ತಂಡವು 135 ರನ್‌ಗಳಿಗೆ ಸರ್ವಪತನ ಕಂಡಿದೆ. ಇದರೊಂದಿಗೆ ಬಾಂಗ್ಲಾದೇಶ ತಂಡವು ಸೂಪರ್ 12 ಹಂತದಲ್ಲಿ 9 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಅಂದಹಾಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಸೂಪರ್ 6, ಸೂಪರ್ 10 ಅಥವಾ ಸೂಪರ್ 12 ವಿಭಾಗದಲ್ಲಿ ಬಾಂಗ್ಲಾದೇಶ ದಾಖಲಿಸಿದ ಮೊದಲ ಗೆಲುವು ಇದಾಗಿದೆ.
ಇಲ್ಲಿನ ಬೆಲೆರಿವ್ ಓವಲ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬಾಂಗ್ಲಾದೇಶ ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಸೌಮ್ಯ ಸರ್ಕಾರ್ ಹಾಗೂ ನಜ್ಮುಲ್ ಹೊಸೈನ್ ಶಾಂಟೊ 5.1 ಓವರ್‌ಗಳಲ್ಲಿ 43 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟಿತು. ಆದರೆ ಇದಾದ ಬಳಿಕ ದಿಢೀರ್ ವಿಕೆಟ್ ಕಳೆದುಕೊಂಡಿತು. ಕೇವಲ 20 ರನ್‌ಗಳ ಅಂತರದಲ್ಲಿ ಬಾಂಗ್ಲಾದೇಶ ತಂಡವು 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಸೌಮ್ಯ ಸರ್ಕಾರ್(14), ನಜ್ಮುಲ್ ಹೊಸೈನ್ ಶಾಂಟೊ(25), ಲಿಟನ್ ದಾಸ್(9) ಹಾಗೂ ನಾಯಕ ಶಕೀಬ್ ಅಲ್ ಹಸನ್ ಕೇವಲ 7 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಯಾಸಿರ್ ಅಲಿ ಕೂಡಾ 3 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಆಸರೆಯಾದ ಅಫಿಫ್ ಹೊಸೈನ್: ಒಂದು ಹಂತದಲ್ಲಿ ಬಾಂಗ್ಲಾದೇಶ ತಂಡವು 11 ಓವರ್ ಅಂತ್ಯದ ವೇಳೆಗೆ 5 ವಿಕೆಟ್ ಕಳೆದುಕೊಂಡು ಕೇವಲ 76 ರನ್ ಗಳಿಸಲಷ್ಟೇ ಶಕ್ತವಾಯಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಆಫಿಫ್ ಹೊಸೈನ್ ಕೇವಲ 27 ಎಸೆತಗಳಲ್ಲಿ ತಲಾ 2 ಸಿಕ್ಸರ್ ಹಾಗೂ ಬೌಂಡರಿ ಸಹಾಯದಿಂದ 38 ರನ್ ಬಾರಿಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ಇನ್ನು ಕೊನೆಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ನೂರುಲ್ ಹಸನ್(13) ಹಾಗೂ ಮೊಸದೆಕ್ ಹೊಸೈನ್(20) ಚುರುಕಾಗಿ ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 140ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಬಾಂಗ್ಲಾದೇಶ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 144 ರನ್‌ಗಳನ್ನು ಕಲೆಹಾಕಿತು.
ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ನೆದರ್‌ಲೆಂಡ್ಸ್ ತಂಡವು ಮೊದಲ ಎಸೆತದಲ್ಲೇ ಆರಂಭಿಕ ಬ್ಯಾಟರ್ ವಿಕ್ರಂಜಿತ್ ಸಿಂಗ್ ವಿಕೆಟ್ ಕಳೆದುಕೊಂಡಿತು. ಮರು ಎಸೆತದಲ್ಲಿ ಬಾಸ್ ಡೆ ಲೀಡೆ ಟಸ್ಕಿನ್ ಅಹಮದ್‌ಗೆ ಎರಡನೇ ಬಲಿಯಾದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಮ್ಯಾ ಒ ಡೌಡ್ ಕೇವಲ 8 ರನ್ ಬಾರಿಸಿ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಹೀಗಾಗಿ ನೆದರ್‌ಲೆಂಡ್ಸ್ ತಂಡವು 13 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳನ್ನು ಕಳೆದುಕೊಂಡಿತು. ಇನ್ನು ಟಾಮ್ ಕೂಪರ್ ಕೂಡಾ ಒಂದೂ ಎಸೆತ ಎದುರಿಸದೇ ರನೌಟ್ ಆದರು.
T20 World Cup ಬಾಂಗ್ಲಾದೇಶ ಎದುರು ಟಾಸ್ ಗೆದ್ದ ನೆದರ್‌ಲೆಂಡ್ಸ್ ಬೌಲಿಂಗ್ ಆಯ್ಕೆ..!
ಕಾಲಿನ್ ಅಕೆರ್‌ಮನ್ ಆಕರ್ಷಕ ಅರ್ಧಶತಕ ವ್ಯರ್ಥ: ಕೇವಲ 15 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ನೆದರ್‌ಲೆಂಡ್ಸ್ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಕಾಲಿನ್ ಅಕೆರ್‌ಮನ್ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಲು ಯತ್ನ ನಡೆಸಿದರು. ಆದರೆ ಸ್ಕಾಟ್ ಎಡ್ವರ್ಡ್ಸ್ ಹೊರತುಪಡಿಸಿ ಉಳಿದ ಬ್ಯಾಟರ್‌ಗಳಿಂದ ಕಾಲಿನ್ ಅಕೆರ್‌ಮನ್ ಅವರಿಗೆ ಉತ್ತಮ ಸಾಥ್ ದೊರೆಯಲಿಲ್ಲ. ಕಾಲಿನ್ ಅಕೆರ್‌ಮನ್ 48 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 62 ರನ್ ಬಾರಿಸಿ ಟಸ್ಕಿನ್ ಅಹಮದ್‌ಗೆ 4ನೇ ಬಲಿಯಾದರು. ಇನ್ನು ಕೊನೆಯಲ್ಲಿ ಪೌಲ್ ವ್ಯಾನ್ ಮೀಕ್ರೆನ್ ಕೇವಲ 14 ಎಸೆತಗಳಲ್ಲಿ 24 ರನ್ ಸಿಡಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಯಶಸ್ವಿಯಾಗಲಿಲ್ಲ.