ICC ODI World Cup: ಭದ್ರತೆ ತಪಾಸಣೆಗೆ ಭಾರತಕ್ಕೆ ಬರಲಿದೆ ಪಾಕ್ ನಿಯೋಗ..!
2023ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ
ಭಾರತದಲ್ಲಿ ಭದ್ರತಾ ವ್ಯವಸ್ಥೆ ಪರಿಶೀಲನೆಗೆ ಪಾಕ್ ನಿಯೋಗ ಆಗಮನ
ಪಾಕ್ ಪಂದ್ಯಗಳಿಗೆ ಚೆನ್ನೈ, ಚೆಂಗಳೂರು, ಹೈದರಾಬಾದ್, ಕೋಲ್ಕತಾ & ಅಹಮದಾಬಾದ್ ಆತಿಥ್ಯ
ಕರಾಚಿ(ಜು.02): ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಆಡಲು ಪಾಕಿಸ್ತಾನ ತಂಡಕ್ಕೆ ಅಲ್ಲಿನ ಸರ್ಕಾರದಿಂದ ಇನ್ನಷ್ಟೇ ಅನುಮತಿ ಸಿಗಬೇಕಿದ್ದು, ಅದಕ್ಕೂ ಮುನ್ನ ಪಾಕ್ ನಿಯೋಗ ಭಾರತದಲ್ಲಿ ಭದ್ರತಾ ವ್ಯವಸ್ಥೆ ಪರಿಶೀಲನೆಗೆ ಆಗಮಿಸಲಿದೆ. ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ)ಗೆ ಶೀಘ್ರವೇ ನೂತನ ಮುಖ್ಯಸ್ಥರ ನೇಮಕವಾಗಲಿದ್ದು, ಬಳಿಕ ಪಿಸಿಬಿ ಪ್ರತಿನಿಧಿಯನ್ನೊಳಗೊಂಡ ಭದ್ರತಾ ಅಧಿಕಾರಿಗಳ ನಿಯೋಗ ಭಾರತಕ್ಕೆ ಆಗಮಿಸಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಲಿದೆ.
ಪಾಕ್‌ನ ಪಂದ್ಯ ನಡೆಯಲಿರುವ ಬೆಂಗಳೂರು, ಚೆನ್ನೈ, ಅಹಮದಾಬಾದ್, ಕೋಲ್ಕತಾ, ಹೈದರಾಬಾದ್ ಕ್ರೀಡಾಂಗಣಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಅವಲೋಕಿಸಿ, ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಬಳಿಕ ಸರ್ಕಾರ ವಿಶ್ವಕಪ್‌ಗೆ ಅನುಮತಿ ಬಗ್ಗೆ ನಿರ್ಧರಿಸಲಿದೆ.
ಪಾಕ್ ಮನವಿ ತಿರಸ್ಕೃತ
ಟೂರ್ನಿಯ ತನ್ನ ಕೆಲ ಪಂದ್ಯಗಳ ಸ್ಥಳ ಬದಲಾವಣೆ ಮಾಡುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಡಿದ್ದ ಮನವಿಯನ್ನು ಐಸಿಸಿ, ಬಿಸಿಸಿಐ ತಿರಸ್ಕರಿಸಿದೆ. ಅಹಮದಾಬಾದ್ ಜೊತೆಗೆ ಇತರ 4 ಕ್ರೀಡಾಂಗಣಗಳಲ್ಲೂ ಪಾಕ್ ತನ್ನ ಪಂದ್ಯಗಳನ್ನಾಡಲಿದೆ. ಈ ಪೈಕಿ ಆಸ್ಟ್ರೇಲಿಯಾ(ಅ.20) ಹಾಗೂ ನ್ಯೂಜಿಲೆಂಡ್(ನ.04) ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಣಸಾಡಲಿದ್ದು, ಕೋಲ್ಕತಾ, ಹೈದರಾಬಾದ್, ಚೆನ್ನೈನಲ್ಲೂ ತಲಾ 2 ಪಂದ್ಯಗಳನ್ನಾಡಲಿದೆ.
ಟೂರ್ನಿ ಮಾದರಿ ಹೇಗೆ?: ಟೂರ್ನಿ ಕಳೆದ ಬಾರಿಯಂತೆ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಪ್ರತಿ ತಂಡ ಇತರ 9 ತಂಡಗಳ ವಿರುದ್ಧ ತಲಾ 1 ಬಾರಿ ಸೆಣಸಾಡಲಿದೆ. ಲೀಗ್ ಹಂತದ ಮುಕ್ತಾಯಕ್ಕೆ ಅಗ್ರ 4 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಟೂರ್ನಿಯ 42 ಪಂದ್ಯಗಳು ಹಗಲು-ರಾತ್ರಿ ಹಾಗೂ ಇನ್ನುಳಿದ 6 ಪಂದ್ಯಗಳು ಹಗಲಿನಲ್ಲಿ ನಡೆಯಲಿವೆ. 2 ಪಂದ್ಯಗಳು ನಡೆಯಲಿರುವ ದಿನ ಮೊದಲ ಪಂದ್ಯ ಬೆಳಗ್ಗೆ 10.30ಕ್ಕೆ, 2ನೇ ಪಂದ್ಯ ಮಧ್ಯಾಹ್ನ 2ಕ್ಕೆ ಆರಂಭಗೊಳ್ಳಲಿದೆ. ಒಂದೇ ಪಂದ್ಯವಿರುವ ದಿನ ಪಂದ್ಯ ಮಧ್ಯಾಹ್ನ 2ಕ್ಕೆ ಶುರುವಾಗಲಿದೆ.
ಧೋನಿಯನ್ನು ಟೀಂ ಇಂಡಿಯಾ ಮಿಸ್ ಮಾಡಿಕೊಳ್ಳಲಿದೆ ಎಂದೆನಿಸುತ್ತಿಲ್ಲ ಎಂದಿದ್ದ: ಅಜಿತ್ ಅಗರ್‌ಕರ್
ಮುಂಬೈ, ಕೋಲ್ಕತಾದಲ್ಲಿ ಸೆಮೀಸ್ಸೆಮಿಫೈನಲ್ ಪಂದ್ಯಗಳು ನ.15 ಹಾಗೂ 16ರಂದು ಕ್ರಮವಾಗಿ ಮುಂಬೈನ ವಾಂಖೇಡೆ ಹಾಗೂ ಕೋಲ್ಕತಾ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿವೆ. ಒಂದು ವೇಳೆ ಪಾಕಿಸ್ತಾನ ಸೆಮೀಸ್ ಪ್ರವೇಶಿಸಿದರೆ ಆ ತಂಡದ ಪಂದ್ಯ ಕೋಲ್ಕತಾದಲ್ಲಿ ನಡೆಯಲಿದೆ. ಭಾರತ ಸೆಮೀಸ್‌ಗೇರಿದರೆ ಪಂದ್ಯಕ್ಕೆ ಮುಂಬೈ ಆತಿಥ್ಯ ವಹಿಸಲಿದೆ. ಒಂದು ವೇಳೆ ಭಾರತ-ಪಾಕಿಸ್ತಾನ ಸೆಮೀಸ್‌ನಲ್ಲಿ ಎದುರಾಗುವ ಸಂದರ್ಭ ಬಂದರೆ ಪಂದ್ಯ ಕೋಲ್ಕತಾದಲ್ಲಿ ನಡೆಯಲಿದೆ ಎಂದು ಐಸಿಸಿ ತಿಳಿಸಿದೆ. ನ.19ರಂದು ಫೈನಲ್ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ.
ಮೊದಲ ಬಾರಿಗೆ ಏಕದಿನ ವಿಶ್ವಕಪ್‌ಗಿಲ್ಲ ವಿಂಡೀಸ್!
ಹರಾರೆ: 2023ರ ಐಸಿಸಿ ಏಕದಿನ ವಿಶ್ವಕಪ್‌ಗೆ ವೆಸ್ಟ್‌ಇಂಡೀಸ್ ಅರ್ಹತೆ ಪಡೆಯಲು ವಿಫಲವಾಗಿದೆ. ಅರ್ಹತಾ ಟೂರ್ನಿಯ ಸೂಪರ್-6 ಹಂತದಲ್ಲಿ ಶನಿವಾರ ಸ್ಕಾಟ್ಲೆಂಡ್ ವಿರುದ್ಧ 7 ವಿಕೆಟ್ ಸೋಲು ಅನುಭವಿಸಿದ ವಿಂಡೀಸ್ ವಿಶ್ವಕಪ್ ರೇಸ್‌ನಿಂದ ಹೊರಬಿತ್ತು. ಮೊದಲು ಬ್ಯಾಟ್ ಮಾಡಿದ ವಿಂಡೀಸ್ 43.5 ಓವರಲ್ಲಿ 181 ರನ್‌ಗೆ ಆಲೌಟ್ ಆದರೆ, ಸುಲಭ ಗುರಿ ಬೆನ್ನತ್ತಿದ ಸ್ಕಾಟ್ಲೆಂಡ್ 43.3 ಓವರಲ್ಲಿ 3 ವಿಕೆಟ್ ಕಳೆದುಕೊಂಡು 185 ರನ್ ಗಳಿಸಿತು. ಮ್ಯಾಥ್ಯೂ ಕ್ರಾಸ್ ಔಟಾಗದೆ 74, ಬ್ರೆಂಡನ್ ಮೆಕ್‌ಮ್ಯುಲನ್ 69 ರನ್ ಗಳಿಸಿದರು.
ಭಾನುವಾರ ಶ್ರೀಲಂಕಾ ಹಾಗೂ ಜಿಂಬಾಬ್ವೆ ಮುಖಾಮುಖಿಯಾಗಿದ್ದು, ಗೆಲ್ಲುವ ತಂಡ ವಿಶ್ವಕಪ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಳ್ಳಲಿದೆ.
ವಿಂಡೀಸ್ ಹೊರಬಿದ್ದಿದ್ದೇಕೆ?
ಅರ್ಹತಾ ಸುತ್ತಿನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ವಿಶ್ವಕಪ್‌ಗೆ ಪ್ರವೇಶಿಸಲಿದ್ದು, ವಿಂಡೀಸ್ ಆ ಅವಕಾಶ ಕಳೆದುಕೊಂಡಿದೆ. 1975, 1979ರ ವಿಶ್ವ ಚಾಂಪಿಯನ್ ವಿಂಡೀಸ್, ಈ ವರೆಗೂ ನಡೆದಿರುವ ಎಲ್ಲಾ 12 ಆವೃತ್ತಿಗಳಲ್ಲೂ ಪಾಲ್ಗೊಂಡಿತ್ತು. ಇದೇ ಮೊದಲ ಬಾರಿಗೆ ಕೆರಿಬಿಯನ್ ಪಡೆ ವಿಶ್ವಕಪ್‌ನಲ್ಲಿ ಕಾಣ ಸಿಗುವುದಿಲ್ಲ.
ಏಕದಿನ ಸೂಪರ್ ಲೀಗ್‌ನಲ್ಲಿ 9ನೇ ಸ್ಥಾನ ಪಡೆದ ಕಾರಣ ವಿಂಡೀಸ್ ಅರ್ಹತಾ ಟೂರ್ನಿಯಲ್ಲಿ ಆಡಬೇಕಾಯಿತು. ಅಗ್ರ 8 ತಂಡಗಳು ಮಾತ್ರ ನೇರವಾಗಿ ವಿಶ್ವಕಪ್ ಪ್ರಧಾನ ಸುತ್ತಿಗೇರಿದವು. ಅರ್ಹತಾ ಸುತ್ತಿನ ಗುಂಪು ಹಂತದಲ್ಲಿ ವಿಂಡೀಸ್ 2 ಸೋಲು ಕಂಡಿತು. ತಾನು ಸೋತ ತಂಡಗಳು ಸೂಪರ್-6 ಪ್ರವೇಶಿಸಿದ ಕಾರಣ ಶೂನ್ಯ ಅಂಕದೊಂದಿಗೆ ಸೂಪರ್-6 ಅಭಿಯಾನ ಆರಂಭಿಸಬೇಕಾಯಿತು. ಈ ಹಂತದಲ್ಲಿ ಮೂರೂ ಪಂದ್ಯ ಗೆದ್ದು ಉಳಿದ ಫಲಿತಾಂಶಗಳು ತನ್ನ ಪರವಾಗಿ ಬಂದಿದರಷ್ಟೇ ವಿಂಡೀಸ್‌ಗೆ ವಿಶ್ವಕಪ್‌ಗೆ ಅರ್ಹತೆ ಸಿಗುತ್ತಿತ್ತು. ಇದೀಗ ಮೊದಲ ಪಂದ್ಯದಲ್ಲೇ ಸೋತಿರುವ ಕಾರಣ ವಿಂಡೀಸ್ ಹೊರಬಿದ್ದಿದೆ.