ಐಸಿಸಿ ಪ್ರಕಟಿಸಿದ ನೂತನ ಏಕದಿನ ರ್‍ಯಾಂಕಿಂಗ್‌ನಲ್ಲಿ, ವಿರಾಟ್ ಕೊಹ್ಲಿ ನಾಲ್ಕು ವರ್ಷಗಳ ಬಳಿಕ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. ತಮ್ಮ ಅದ್ಭುತ ಫಾರ್ಮ್‌ನಿಂದಾಗಿ ರೋಹಿತ್ ಶರ್ಮಾರನ್ನು ಹಿಂದಿಕ್ಕಿ, 785 ರೇಟಿಂಗ್ ಅಂಕಗಳೊಂದಿಗೆ ಕೊಹ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ರಾಜ್‌ಕೋಟ್‌: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ನೂತನ ಏಕದಿನ ರ್‍ಯಾಂಕಿಂಗ್‌ ಪ್ರಕಟಗೊಂಡಿದ್ದು, ಈ ಮಾದರಿಯ ಕ್ರಿಕೆಟ್‌ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ವಿರಾಟ್ ಕೊಹ್ಲಿ ಬರೋಬ್ಬರಿ 4 ವರ್ಷಗಳ ಬಳಿಕ ಮತ್ತೊಮ್ಮೆ ನಂ.1 ಸ್ಥಾನಕ್ಕೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದೊಂದು ವರ್ಷದಿಂದ ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ, ಏಕದಿನ ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದ್ದರು. ಇದೀಗ ರೋಹಿತ್‌ ಶರ್ಮಾರನ್ನು ಹಿಂದೆ ತಳ್ಳಿ, ಕೊಹ್ಲಿ ನಂ.1 ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ.

ಕಿಂಗ್ ಕೊಹ್ಲಿ ಸದ್ಯ ರೆಡ್‌ ಹಾಟ್‌ ಫಾರ್ಮ್‌ನಲ್ಲಿದ್ದು, ಕಳೆದ ಐದು ಏಕದಿನ ಇನ್ನಿಂಗ್ಸ್‌ಗಳಲ್ಲಿ ಎರಡು ಶತಕ ಹಾಗೂ ಮೂರು ಅರ್ಧಶತಕ ಸಹಿತ ಸತತ 5 ಇನ್ನಿಂಗ್ಸ್‌ಗಳಲ್ಲಿ 50+ ರನ್ ಬಾರಿಸಿದ ಸಾಧನೆ ಮಾಡಿದ್ದಾರೆ. ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ 93 ರನ್ ಸಿಡಿಸುವ ಮೂಲಕ ಕೇವಲ 7 ರನ್ ಅಂತರದಲ್ಲಿ ಶತಕ ವಂಚಿತರಾಗಿದ್ದರು. ಇನ್ನು ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಇದೀಗ ಎರಡು ಸ್ಥಾನ ಕುಸಿತ ಕಂಡು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಕಿಂಗ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ನಂ.1

37 ವರ್ಷದ ಅನುಭವಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ರೆಡ್‌ ಹಾಟ್ ಫಾರ್ಮ್‌ನಲ್ಲಿದ್ದಾರೆ. ಇದೀಗ ಮತ್ತೊಮ್ಮೆ ಏಕದಿನ ಕ್ರಿಕೆಟ್‌ ಐಸಿಸಿ ರ್‍ಯಾಂಕಿಂಗ್‌ನಲ್ಲಿ ವಿರಾಟ್ ನಂ.1 ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಒಟ್ಟು 785 ರೇಟಿಂಗ್ ಅಂ‌ಕಗಳನ್ನು ಹೊಂದುವ ಮೂಲಕ ಅಗ್ರಸ್ಥಾನಕ್ಕೇರಿದ್ದಾರೆ. ಕಿವೀಸ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ 91 ಎಸೆತಗಳನ್ನು ಎದುರಿಸಿ 93 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇನ್ನು ನ್ಯೂಜಿಲೆಂಡ್‌ನ ಡೇರಲ್ ಮಿಚೆಲ್ ಎರಡನೇ ಸ್ಥಾನಕ್ಕೇರಿದ್ದಾರೆ. ಡೇರಲ್ ಮಿಚೆಲ್ ಭಾರತ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ 71 ಎಸೆತಗಳಲ್ಲಿ 84 ರನ್ ಸಿಡಿಸಿದ್ದರು. ಸದ್ಯ ಡೇರಲ್ ಮಿಚೆಲ್ ಸದ್ಯ 784 ರೇಟಿಂಗ್ ಅಂಕ ಹೊಂದಿದ್ದಾರೆ.

Scroll to load tweet…

ನಾಲ್ಕು ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಅಗ್ರಸ್ಥಾನಕ್ಕೆ ಲಗ್ಗೆ:

ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ 2021ರ ಜುಲೈನಲ್ಲಿ ಕೊನೆಯ ಬಾರಿಗೆ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದರು. ಇದಾಗಿ ನಾಲ್ಕು ವರ್ಷಗಳ ಬಳಿಕ ಮತ್ತೊಮ್ಮೆ ವಿರಾಟ್ ಕೊಹ್ಲಿ ನಂ.1 ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ವಿರಾಟ್ ಕೊಹ್ಲಿ 2013ರಲ್ಲಿ ಮೊದಲ ಬಾರಿಗೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಮೊದಲ ಬಾರಿಗೆ ನಂ.1 ಸ್ಥಾನಕ್ಕೇರಿದ್ದರು. ಇದಾದ ಬಳಿಕ ಬರೋಬ್ಬರಿ 11 ಬಾರಿ ಅಗ್ರಸ್ಥಾನಕ್ಕೇರಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಶೂನ್ಯ ಸುತ್ತಿದ್ದ ಕೊಹ್ಲಿ, ಆ ಬಳಿಕ ಆಸೀಸ್‌ ಎದುರಿನ ಸಿಡ್ನಿ ಏಕದಿನ ಪಂದ್ಯದಲ್ಲಿ ಅಜೇಯ 74 ರನ್ ಸಿಡಿಸಿದ್ದರು. ಇದಾದ ಬಳಿಕ ದಕ್ಷಿಣ ಆಫ್ರಿಕಾ ಎದುರಿನ ಮೊದಲೆರಡು ಏಕದಿನ ಪಂದ್ಯಗಳಲ್ಲಿ 135, 102 ಶತಕ ಸಿಡಿಸಿದ್ದ ಅವರು, ಕೊನೆಯ ಏಕದಿನ ಪಂದ್ಯದಲ್ಲಿ ಅಜೇಯ 65 ರನ್ ಬಾರಿಸಿದ್ದರು. ಇನ್ನು ಅದೇ ಲಯವನ್ನು ಕಿವೀಸ್ ಎದುರಿನ ಸರಣಿಯಲ್ಲಿ ಮುಂದುವರೆಸಿದ್ದಾರೆ.