* ಐಸಿಸಿ ಏಕದಿನ ಬೌಲಿಂಗ್‌ ರ‍್ಯಾಂಕಿಂಗ್‌ ಪ್ರಕಟ* ಬೌಲಿಂಗ್‌ ವಿಭಾಗದಲ್ಲಿ ಬುಮ್ರಾ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಟ್ರೆಂಟ್ ಬೌಲ್ಟ್* ಆಲ್ರೌಂಡರ್‌ ವಿಭಾಗದಲ್ಲಿ 8ನೇ ಸ್ಥಾನ ತಲುಪಿದ ಹಾರ್ದಿಕ್‌ ಪಾಂಡ್ಯ

ದುಬೈ(ಜು.21): ಇತ್ತೀಚೆಗಷ್ಟೇ ಐಸಿಸಿ ಏಕದಿನ ಬೌಲಿಂಗ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದ ಭಾರತದ ಪ್ರಮುಖ ವೇಗಿ ಜಸ್‌ಪ್ರೀತ್‌ ಬುಮ್ರಾ ಆ ಸ್ಥಾನ ಕಳೆದುಕೊಂಡಿದ್ದು, 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ನೂತನ ರ‍್ಯಾಂಕಿಂಗ್‌ನಲ್ಲಿ ಅವರು 703 ಅಂಕ ಗಳಿಸಿದ್ದರೆ, 704 ಅಂಕ ಹೊಂದಿರುವ ನ್ಯೂಜಿಲೆಂಡ್‌ನ ಟ್ರೆಂಟ್‌ ಬೌಲ್ಟ್‌ ನಂ.1 ಸ್ಥಾನಕ್ಕೆ ಮರಳಿದ್ದಾರೆ. ಯಜವೇಂದ್ರ ಚಹಲ್‌ 4 ಸ್ಥಾನ ಮೇಲಕ್ಕೇರಿ 16ನೇ ಸ್ಥಾನ ಪಡೆದಿದ್ದಾರೆ. 

ಹಾರ್ದಿಕ್‌ ಪಾಂಡ್ಯ ಆಲ್ರೌಂಡರ್‌ ಪಟ್ಟಿಯಲ್ಲಿ 13 ಸ್ಥಾನ ಜಿಗಿತ ಕಂಡಿದ್ದು, 8ನೇ ಸ್ಥಾನ ತಲುಪಿದ್ದಾರೆ. ರಿಷಭ್‌ ಪಂತ್‌ ಬ್ಯಾಟರ್‌ಗಳ ಪಟ್ಟಿಯಲ್ಲಿ 25 ಸ್ಥಾನ ಮೇಲೇರಿ 52 ಸ್ಥಾನ ಪಡೆದುಕೊಂಡಿದ್ದಾರೆ. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಕ್ರಮವಾಗಿ 4, 5ನೇ ಸ್ಥಾನದಲ್ಲಿದ್ದಾರೆ.

ಆಗಸ್ಟ್‌ನಲ್ಲಿ ಜಿಂಬಾಬ್ವೆಯಲ್ಲಿ ಭಾರತಕ್ಕೆ ಏಕದಿನ ಸರಣಿ

ನವದೆಹಲಿ: 6 ವರ್ಷಗಳ ಬಳಿಕ ಭಾರತ ಕ್ರಿಕೆಟ್‌ ತಂಡ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲು ಸಜ್ಜಾಗಿದ್ದು, ಮುಂದಿನ ತಿಂಗಳು ಆತಿಥೇಯರ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಈ ಬಗ್ಗೆ ಬುಧವಾರ ಜಿಂಬಾಬ್ವೆ ಕ್ರಿಕೆಟ್‌ ಮಂಡಳಿ ಮಾಹಿತಿ ನೀಡಿದ್ದು, ಆಗಸ್ಟ್‌ 18ಕ್ಕೆ ಸರಣಿ ಆರಂಭವಾಗಲಿದೆ ಎಂದಿದೆ. ಇನ್ನೆರಡು ಪಂದ್ಯಗಳು ಆಗಸ್ಟ್ 20 ಮತ್ತು 22ಕ್ಕೆ ನಿಗದಿಯಾಗಿದ್ದು, ಎಲ್ಲಾ ಪಂದ್ಯಗಳಿಗೆ ಹರಾರೆ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಗಾಯಗೊಂಡು ಕೆಲ ತಿಂಗಳುಗಳಿಂದ ಕ್ರಿಕೆಟ್‌ನಿಂದ ದೂರ ಉಳಿದಿರುವ ಕರ್ನಾಟಕದ ಬ್ಯಾಟರ್‌ ಕೆ.ಎಲ್‌.ರಾಹುಲ್ ತಂಡದ ನಾಯಕತ್ವ ವಹಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ ಮೊದಲು 2016ರಲ್ಲಿ ಎಂ.ಎಸ್‌.ಧೋನಿ ಸಾರಥ್ಯದ ಭಾರತ ತಂಡ ಕೊನೆ ಬಾರಿ ಜಿಂಬಾಬ್ವೆಯಲ್ಲಿ ತಲಾ 3 ಪಂದ್ಯಗಳ ಏಕದಿನ, ಟಿ20ಕ್ರಿಕೆಟ್‌ ಸರಣಿ ಆಡಿತ್ತು.

ಮೊದಲ ಟೆಸ್ಟ್‌: ಲಂಕಾ ವಿರುದ್ಧ ಪಾಕ್‌ಗೆ ಗೆಲುವು

ಗಾಲೆ: ಅಬ್ದುಲ್ಲಾ ಶಫೀಕ್‌(ಔಟಾಗದೆ 160) ಹೋರಾಟದ ನೆರವಿನಿಂದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ 4 ವಿಕೆಟ್‌ ಗೆಲುವು ಸಾಧಿಸಿದೆ. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಗೆಲ್ಲಲು 342 ರನ್‌ ಗುರಿ ಬೆನ್ನತ್ತಿದ್ದ ಪಾಕ್‌ 4ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 223 ರನ್‌ ಗಳಿಸಿತ್ತು. ಕೊನೆ ದಿನವೂ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ ತಂಡ ಪಂದ್ಯ ಗೆಲ್ಲಲು ಯಶಸ್ವಿಯಾಯಿತು. ಈ ಮೂಲಕ ಗಾಲೆ ಕ್ರೀಡಾಂಗಣದಲ್ಲಿ ಅತೀ ಹೆಚ್ಚು ರನ್‌ ಗುರಿ ಬೆನ್ನತ್ತಿದ ಖ್ಯಾತಿಗೆ ಪಾತ್ರವಾಯಿತು. ಮೊದಲ ಇನ್ನಿಂಗ್‌್ಸನಲ್ಲಿ 222 ರನ್‌ ಗಳಿಸಿದ್ದ ಲಂಕಾ, 2ನೇ ಇನ್ನಿಂಗ್ಸಲ್ಲಿ 337 ರನ್‌ ಕಲೆಹಾಕಿತ್ತು. ಪಾಕಿಸ್ತಾನ ಮೊದಲ ಇನ್ನಿಂಗ್ಸಲ್ಲಿ 218 ರನ್‌ಗೆ ಆಲೌಟ್‌ ಆಗಿತ್ತು.

ಬಿಸಿಸಿಐ ವಿರಾಟ್ ಕೊಹ್ಲಿಯನ್ನು ಜಿಂಬಾಬ್ವೆ ವಿರುದ್ಧ ಕಣಕ್ಕಿಳಿಸಲು ಮುಂದಾಗುತ್ತಿರುವುದೇಕೆ..?

ಡುಸೆನ್‌ ಅಬ್ಬರ: ಇಂಗ್ಲೆಂಡ್‌ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಜಯ

ಡರ್ಹಾಮ್‌: ರಸ್ಸೀ ವ್ಯಾನ್‌ ಡೆರ್‌ ಡುಸೆನ್‌(117 ಎಸೆತಗಳಲ್ಲಿ 134) ಅಬ್ಬರದ ಬ್ಯಾಟಿಂಗ್‌, ಏನ್ರಿಚ್‌ ನೋಕಿಯಾ(54ಕ್ಕೆ 4) ಮಾರಕ ಬೌಲಿಂಗ್‌ ದಾಳಿಯ ನೆರವಿನಿಂದ ಇಂಗ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ದ.ಆಫ್ರಿಕಾ 62 ರನ್‌ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದೆ. ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾ 5 ವಿಕೆಟ್‌ಗೆ 333 ರನ್‌ ಕಲೆ ಹಾಕಿತು. ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 46.5 ಓವರ್‌ಲ್ಲಿ 271ಕ್ಕೆ ಆಲೌಟಾಯಿತು. ರೂಟ್‌ 86, ಬೇರ್‌ಸ್ಟೋವ್‌ 63 ರನ್‌ ಬಾರಿಸಿದರೂ ತಂಡವನ್ನು ಗೆಲ್ಲಿಸಲು ಆಗಲಿಲ್ಲ.