ICC New T20I Rules: ನಿಧಾನಗತಿ ಬೌಲಿಂಗ್ ತಡೆಗೆ ಐಸಿಸಿ ಹೊಸ ಮಾಸ್ಟರ್‌ ಪ್ಲಾನ್‌..!

* ಟಿ20 ಕ್ರಿಕೆಟ್‌ನಲ್ಲಿ ನಿಧಾನಗತಿ ಬೌಲಿಂಗ್ ಮಾಡುವ ತಂಡಕ್ಕೆ ಶಾಕ್ ನೀಡಲು ರೆಡಿಯಾದ ಐಸಿಸಿ

* ತಂಡಗಳು ನಿಗದಿತ ಸಮಯದೊಳಗೆ 20 ಓವರ್‌ಗಳನ್ನು ಮುಗಿಸಬೇಕಿದೆ.

* ಟಿ20 ಪಂದ್ಯದ ಒಂದು ಇನ್ನಿಂಗ್ಸ್‌ ಗರಿಷ್ಠ 90 ನಿಮಿಷಗಳಲ್ಲಿ ಮುಗಿಯಬೇಕು.

ICC introduces New Rules in game penalty for slow overrate in T20I Cricket kvn

ದುಬೈ: ಟಿ20 ಪಂದ್ಯಗಳು ನಿಗದಿತ ಸಮಯದೊಳಗೆ ಮುಗಿಯುವುದು ತೀರಾ ಅಪರೂಪ. ನಿಧಾನಗತಿಯ ಬೌಲಿಂಗ್‌ ತಡೆಯಲು ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) (ICC) ಹೊಸ ನಿಯಮವೊಂದನ್ನು ಪರಿಚಯಿಸಿದೆ. ಇನ್ಮುಂದೆ ತಂಡಗಳು ಸಮಯ ಕಾಯ್ದುಕೊಳ್ಳದಿದ್ದರೆ ಭಾರೀ ದಂಡ ತೆತ್ತಬೇಕಾಗುತ್ತದೆ. ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ನಿಗದಿತ ಸಮಯದೊಳಗೆ 20 ಓವರ್‌ಗಳನ್ನು ಮುಗಿಸಬೇಕಿದೆ. ಒಂದು ವೇಳೆ ತಂಡಗಳು ಇನ್ನಿಂಗ್ಸ್‌ನ ಯಾವುದೇ ಹಂತದಲ್ಲಿ ಓವರ್‌-ರೇಟ್‌ನಲ್ಲಿ (Slow Over Rate) ಹಿಂದೆ ಬಿದ್ದರೆ ಆ ತಕ್ಷಣ ಮೈದಾನದಲ್ಲಿರುವ ಅಂಪೈರ್‌ ಹೊಸ ನಿಯಮವನ್ನು ಅಳವಡಿಸಬಹುದು. ನಿಯಮದ ಪ್ರಕಾರ, ನಿಧಾನಗತಿ ಬೌಲಿಂಗ್‌ ಕಂಡುಬಂದರೆ 30 ಯಾರ್ಡ್‌ ವೃತ್ತದಿಂದ ಹೊರಗೆ ಒಬ್ಬ ಕ್ಷೇತ್ರರಕ್ಷಕ(ಫೀಲ್ಡರ್‌)ನನ್ನು ಕಡಿತಗೊಳಿಸಲಾಗುತ್ತದೆ.

ಟಿ20 ಪಂದ್ಯದಲ್ಲಿ ಮೊದಲ 6 ಓವರ್‌ಗಳ ಪವರ್‌-ಪ್ಲೇ ಮುಗಿದ ಬಳಿಕ ವೃತ್ತದಿಂದ ಹೊರಗೆ ಗರಿಷ್ಠ 5 ಫೀಲ್ಡರ್‌ಗಳು ಇರಬಹುದು. ನಿಧಾನಗತಿ ಬೌಲಿಂಗ್‌ ನಿಯಮ ಅಳವಡಿಕೆಯಾದರೆ ವೃತ್ತದಿಂದ ಹೊರಗೆ ಕೇವಲ 4 ಫೀಲ್ಡರ್‌ಗಳು ಇರಲು ಅವಕಾಶವಿರಲಿದೆ. ಇದು ಬೌಲ್‌ ಮಾಡುತ್ತಿರುವ ತಂಡಕ್ಕೆ ಭಾರೀ ಹಿನ್ನಡೆ ಉಂಟು ಮಾಡಲಿದೆ. ಈ ನಿಯಮವನ್ನು ಮೊದಲು ಜಾರಿ ಮಾಡಿದ್ದು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ(ಇಸಿಬಿ). ತನ್ನ ದಿ ಹಂಡ್ರೆಡ್‌ ಟೂರ್ನಿಯಲ್ಲಿ (The Hundred Tournament) ಈ ನಿಯಮ ಬಳಸಿ ಯಶಸ್ಸು ಕಂಡಿತ್ತು. ಇಸಿಬಿಯಿಂದ (ECB) ಸ್ಫೂರ್ತಿ ಪಡೆದು ಐಸಿಸಿ, ಅಂತಾರಾಷ್ಟ್ರೀಯ ಟಿ20ಯಲ್ಲಿ ಹೊಸ ನಿಯಮ ಜಾರಿಗೆ ತಂದಿದೆ. ಜನವರಿ 16ರ ವೆಸ್ಟ್‌ಇಂಡಿಸ್‌ ಹಾಗೂ ಐರ್ಲೆಂಡ್‌ ನಡುವಿನ ಟಿ20 ಪಂದ್ಯದಲ್ಲಿ ಮೊದಲ ಬಾರಿಗೆ ಈ ನಿಮಯ ಜಾರಿಗೆ ಬರಲಿದೆ ಎಂದು ಐಸಿಸಿ ಮಾಹಿತಿ ನೀಡಿದೆ.

ನಿಧಾನಗತಿ ಬೌಲಿಂಗ್‌ ಕಂಡುಬಂದಾಗ ಐಸಿಸಿ ಪಂದ್ಯದ ಸಂಭಾವನೆಯ ಇಂತಿಷ್ಟು ಹಣವನ್ನು ದಂಡವಾಗಿ ವಿಧಿಸುವುದರ ಜೊತೆಗೆ ಅಂಕಗಳನ್ನು ಕಡಿತಗೊಳಿಸುವ ನಿಯಮವು ಮುಂದುವರಿಯಲಿದೆ.

ಹೊಸ ನಿಯಮದಿಂದ ಏನು ಪರಿಣಾಮ?

ಐಸಿಸಿಯ ನಿಯಮದನ್ವಯ ಟಿ20 ಪಂದ್ಯದ ಒಂದು ಇನ್ನಿಂಗ್ಸ್‌ ಗರಿಷ್ಠ 90 ನಿಮಿಷಗಳಲ್ಲಿ ಮುಗಿಯಬೇಕು. ಅಂದರೆ ಒಂದು ಓವರ್‌ ಪೂರ್ಣಗೊಳಿಸಲು ಸರಾಸರಿ ನಾಲ್ಕೂವರೆ ನಿಮಿಷಗಳು ಸಿಗಲಿದೆ. ಇನ್ನಿಂಗ್ಸ್‌ನ ಯಾವುದೇ ಹಂತದಲ್ಲಿ ಬೌಲ್‌ ಮಾಡುತ್ತಿರುವ ತಂಡ ನಿಗದಿತ ಸಮಯದೊಳಿಗೆ 20ನೇ ಓವರ್‌ ಬೌಲ್‌ ಮಾಡಲು ಆರಂಭಿಸಲು ಸಾಧ್ಯವಿಲ್ಲ ಎಂದು ಮೈದಾನದಲ್ಲಿರುವ ಅಂಪೈರ್‌ಗೆ ಖಚಿತವಾದಾಗ ಅಂಪೈರ್‌ ನಿರ್ಧಾರ ಕೈಗೊಳ್ಳಲಿದ್ದಾರೆ. ಆ ವೇಳೆ ಬೌಲಿಂಗ್‌ ತಂಡದ ನಾಯಕನಿಗೆ ನಿಯಮ ಜಾರಿಯ ಬಗ್ಗೆ ಮಾಹಿತಿ ನೀಡಿ, ಸರ್ಕಲ್‌ನಿಂದ ಹೊರಗಿರುವ ಒಬ್ಬ ಕ್ಷೇತ್ರರಕ್ಷಕನನ್ನು ಸರ್ಕಲ್‌ ಒಳಗೆ ಫೀಲ್ಡ್‌ ಮಾಡಲು ಸೂಚಿಸಲಾಗುತ್ತದೆ.

Ashes Test: ಚೆಂಡು ವಿಕೆಟ್‌ಗೆ ಅಪ್ಪಳಿಸದರೂ ಬೀಳಲಿಲ್ಲ ಬೇಲ್ಸ್, ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಸಿಡ್ನಿ ಟೆಸ್ಟ್..!

ಉದಾಹರಣೆಗೆ ಪಂದ್ಯದ 11ನೇ ಓವರ್‌ ಚಾಲ್ತಿಯಾಗುವ ಮೊದಲು ಅಂಪೈರ್‌ಗೆ ನಿಗದಿತ ಸಮಯದಲ್ಲಿ 20ನೇ ಓವರ್‌ ಆರಂಭವಾಗುವುದಿಲ್ಲ ಎನ್ನುವುದು ದೃಢಪಟ್ಟರೆ, ನಿಧಾನಗತಿ ಬೌಲಿಂಗ್‌ ನಿಯಮದನ್ವಯ ಒಬ್ಬ ಕ್ಷೇತ್ರರಕ್ಷಕನನ್ನು ವೃತ್ತದ ಒಳಕ್ಕೆ ಕರೆಯಬಹುದು. ಆಗ 11ನೇ ಓವರ್‌ನಿಂದ 20ನೇ ಓವರ್‌ ವರೆಗೂ ಬೌಲ್‌ ಮಾಡುವ ತಂಡ ವೃತ್ತದ ಹೊರಗೆ ಕೇವಲ 4 ಫೀಲ್ಡರ್‌ಗಳನ್ನಿಟ್ಟುಕೊಂಡು ಕಾರ‍್ಯನಿರ್ವಹಿಸಬೇಕಿದೆ.

ದ್ವಿಪಕ್ಷೀಯ ಸರಣಿಗಳಲ್ಲೂ ಟೈಂ ಔಟ್‌ಗೆ ಅವಕಾಶ

ಟಿ20 ದ್ವಿಪಕ್ಷೀಯ ಸರಣಿಗಳಲ್ಲಿ ಇನ್ನಿಂಗ್ಸ್‌ ನಡುವೆ ಐಪಿಎಲ್‌ (IPL) ಮಾದರಿಯಲ್ಲಿ ಎರಡೂವರೆ ನಿಮಿಷದ ಟೈಂ ಔಟ್‌ ಬಳಸಲು ಐಸಿಸಿ ಅನುಮತಿ ನೀಡಿದೆ. ಈ ಸಮಯವನ್ನು ತಂಡಗಳು ರಣತಂತ್ರ ಬದಲಿಸಲು ಉಪಯೋಗಿಸಬಹುದು. ಜೊತೆಗೆ ಪ್ರಸಾರಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜಾಹೀರಾತು ಪ್ರಸಾರ ಮಾಡಲು ಸಹ ಅನುಕೂಲವಾಗಲಿದೆ. ಟೈಂ ಔಟ್‌ ಅಳವಡಿಕೆ ಬಗ್ಗೆ ಸರಣಿಯಲ್ಲಿ ಪಾಲ್ಗೊಳ್ಳುವ ಕ್ರಿಕೆಟ್‌ ಮಂಡಳಿಗಳು ಪರಸ್ಪರ ಚರ್ಚಿಸಿ ಒಪ್ಪಂದ ಮಾಡಿಕೊಳ್ಳಬೇಕಿದೆ.

Latest Videos
Follow Us:
Download App:
  • android
  • ios