Ashes Test: ಚೆಂಡು ವಿಕೆಟ್‌ಗೆ ಅಪ್ಪಳಿಸದರೂ ಬೀಳಲಿಲ್ಲ ಬೇಲ್ಸ್, ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಸಿಡ್ನಿ ಟೆಸ್ಟ್..!

* ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ಘಟನೆ

* ಕ್ಯಾಮರೋನ್ ಗ್ರೀನ್‌ ಬೌಲಿಂಗ್‌ನಲ್ಲಿ ಚೆಂಡು ವಿಕೆಟ್‌ಗೆ ಬಡಿದರು ಬೀಳಲಿಲ್ಲ ಬೇಲ್ಸ್

* ಔಟ್‌ ಆಗುವುದರಿಂದ ಬಚಾವ್ ಆಗಿ ಅರ್ಧಶತಕ ಬಾರಿಸಿ ಮಿಂಚಿದ ಬೆನ್ ಸ್ಟೋಕ್ಸ್

Ashes Test Australia players shocked as Ben Stokes survives despite ball hitting stumps in Sydney Test kvn

ಸಿಡ್ನಿ(ಜ.07): 2021-22ನೇ ಸಾಲಿನ  ಆ್ಯಷಸ್‌ ಟೆಸ್ಟ್‌ ಸರಣಿಯ (Ashes Test Series) ಸಿಡ್ನಿ ಟೆಸ್ಟ್ ಪಂದ್ಯವು (Sydney Test) ಅಪರೂಪದಲ್ಲೇ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಇಂಗ್ಲೆಂಡ್ ಆಲ್ರೌಂಡರ್ ಬೆನ್‌ ಸ್ಟೋಕ್ಸ್ (Ben Stokes) ಬ್ಯಾಟಿಂಗ್ ಮಾಡುವ ವೇಳೆ ವೇಗದ ಬೌಲರ್ ಕ್ಯಾಮರೋನ್ ಗ್ರೀನ್ (Cameron Green) ಎಸೆದ ಚೆಂಡು ನೇರವಾಗಿ ವಿಕೆಟ್‌ಗೆ ಅಪ್ಪಳಿಸಿದರೂ ಬೇಲ್ಸ್ ಬೀಳದೇ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಜೋ ರೂಟ್ (Joe Root) ನೇತೃತ್ವದ ಇಂಗ್ಲೆಂಡ್ ತಂಡವು ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ನಿರಾಶಾದಾಯಕ ಪ್ರದರ್ಶನ ತೋರುವ ಮೂಲಕ ಇನ್ನೂ ಎರಡು ಪಂದ್ಯಗಳ ಬಾಕಿ ಇರುವಾಗಲೇ ಪ್ರತಿಷ್ಠಿತ ಟೆಸ್ಟ್ ಸರಣಿಯನ್ನು 3-0 ಅಂತರದಲ್ಲಿ ಕೈಚೆಲ್ಲಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಸದ್ಯ ನಾಲ್ಕನೇ ಟೆಸ್ಟ್ ಆರಂಭವಾಗಿದ್ದು, ಆಸ್ಟ್ರೇಲಿಯಾ ತಂಡವು ಮತ್ತೊಮ್ಮೆ ಪ್ರಾಬಲ್ಯ ಮೆರೆಯುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್‌ನಲ್ಲಿ ಉಸ್ಮಾನ್ ಖವಾಜ (Usman Khawaja) ಬಾರಿಸಿದ ಆಕರ್ಷಕ ಶತಕದ ನೆರವಿನಿಂದ 418/8 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. 

ಇನ್ನು ಮೊದಲ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ತಂಡವು ಮತ್ತೊಮ್ಮೆ ಆರಂಭಿಕ ಆಘಾತ ಅನುಭವಿಸಿತು. ಕೇವಲ 36 ರನ್‌ಗಳಿಸುವಷ್ಟರಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡವು ನಾಯಕ ಜೋ ರೂಟ್ ಸೇರಿದಂತೆ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಅಲ್ಪ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್ ಸೇರಿದರು. ಈ ವೇಳೆ ಜತೆಯಾದ ಬೆನ್ ಸ್ಟೋಕ್ಸ್ ಹಾಗೂ ಜಾನಿ ಬೇರ್‌ಸ್ಟೋವ್‌ ತಂಡಕ್ಕೆ ಬಲ ತುಂಬುವ ಕೆಲಸ ಮಾಡಿದರು.

ಪಂದ್ಯದ 31ನೇ ಓವರ್‌ ಬೌಲಿಂಗ್ ಮಾಡಿದ ಕ್ಯಾಮರೋನ್ ಗ್ರೀನ್‌ಗೆ ಅಚ್ಚರಿ ಕಾದಿತ್ತು. ಫುಲ್ ಪಿಚ್‌ನಲ್ಲಿ ಎಸೆದ ಚೆಂಡನ್ನು ಬೆನ್ ಸ್ಟೋಕ್ಸ್ ಸ್ಟ್ರೋಕ್‌ ಮಾಡದಿರಲು ತೀರ್ಮಾನಿಸಿ ಸುಮ್ಮನಾದರು. ಆದರೆ ಚೆಂಡು ದಿಕ್ಕು ಬದಲಿಸಿ ಆಫ್‌ಸ್ಟಂಪ್ಸ್‌ಗೆ ಅಪ್ಪಳಿಸಿ ವಿಕೆಟ್ ಕೀಪರ್‌ ಕೈ ಸೇರಿತು. ಆಸ್ಟ್ರೇಲಿಯಾದ ಕ್ರಿಕೆಟಿಗರು ಜೋರಾಗಿ ಔಟ್‌ಗೆ ಮನವಿ ಸಲ್ಲಿಸಿದ್ದರಿಂದ ಮೈದಾನದಲ್ಲಿದ್ದ ಅಂಪೈರ್ ಔಟ್ ಎಂದು ತೀರ್ಮಾನವಿತ್ತರು. ಇದರ ಬೆನ್ನಲ್ಲೇ ಬೆನ್ ಸ್ಟೋಕ್ಸ್ ಡಿಆರ್‌ಎಸ್‌ ಮೊರೆ ಹೋದರು.

Ashes Test: ಶತಕ ಚಚ್ಚಿ ಇಂಗ್ಲೆಂಡ್ ತಂಡವನ್ನು ಬಚಾಚ್ ಮಾಡಿದ ಬೇರ್‌ಸ್ಟೋವ್‌..!

ರಿಪ್ಲೇ ವೇಳೆ ಚೆಂಡು ಸ್ಟೋಕ್ಸ್‌ ಪ್ಯಾಡ್‌ಗೆ ತಗುಲದೇ ನೇರವಾಗಿ ವಿಕೆಟ್‌ಗೆ ಅಪ್ಪಳಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಹೀಗಿದ್ದೂ ವಿಕೆಟ್ ಮೇಲಿದ್ದ ಬೇಲ್ಸ್‌ ಜಾರಲಿಲ್ಲ. ಡಿಆರ್‌ಎಸ್‌ನಲ್ಲಿ ನಾಟೌಟ್ ಎಂದು ತೀರ್ಮಾನ ಹೊರಬೀಳುತ್ತಿದ್ದಂತೆಯೇ ಬೆನ್ ಸ್ಟೋಕ್ಸ್ ಜೋರಾಗಿ ನಗೆ ಬೀರಿದ್ದಾರೆ. 

ಈ ಘಟನೆ ನಡೆಯುವಾಗ ಬೆನ್‌ ಸ್ಟೋಕ್ಸ್‌ 37 ಎಸೆತಗಳನ್ನು ಎದುರಿಸಿ 16 ರನ್‌ ಗಳಿಸಿದ್ದರು. ಅಪರೂಪದ ಜೀವದಾನದ ಲಾಭ ಪಡೆದ ಬೆನ್ ಸ್ಟೋಕ್ಸ್ ಟೆಸ್ಟ್ ವೃತ್ತಿ ಜೀವನದ 25ನೇ ಅರ್ಧಶತಕ ಬಾರಿಸಿ ಮಿಂಚಿದರು. ಅಂತಿಮವಾಗಿ ಸ್ಟೋಕ್ಸ್ 91 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 66 ರನ್ ಬಾರಿಸಿ ನೇಥನ್ ಲಯನ್‌ಗೆ ವಿಕೆಟ್ ಒಪ್ಪಿಸಿದರು. ಬೆನ್ ಸ್ಟೋಕ್ಸ್‌ ವಿಕೆಟ್ ಒಪ್ಪಿಸುವ ಮುನ್ನ 5ನೇ ವಿಕೆಟ್‌ಗೆ ಜಾನಿ ಬೇರ್‌ಸ್ಟೋವ್ ಜತೆಗೂಡಿ 128 ರನ್‌ಗಳ ಜತೆಯಾಟವಾಡಿ ತಂಡವನ್ನು ಅಪಾಯದಿಂದ ಪಾರು ಮಾಡಿತು. 

ಜಾನಿ ಬೇರ್‌ಸ್ಟೋವ್ ಬಾರಿಸಿದ ಸಮಯೋಚಿತ ಶತಕ ನೆರವಿನಿಂದ ಸಿಡ್ನಿ ಟೆಸ್ಟ್ ಪಂದ್ಯದ ಮೂರನೇ ದಿನದಾಟದಂತ್ಯದ ವೇಳೆಗೆ ಇಂಗ್ಲೆಂಡ್ ತಂಡವು 7 ವಿಕೆಟ್ ಕಳೆದುಕೊಂಡು 258 ರನ್ ಬಾರಿಸಿದ್ದು, ಇನ್ನೂ 158 ರನ್‌ಗಳ ಹಿನ್ನೆಡೆಯಲ್ಲಿದೆ.

Latest Videos
Follow Us:
Download App:
  • android
  • ios