Asianet Suvarna News Asianet Suvarna News

World Cup 2023: ಪಾಕಿಸ್ತಾನ ವಿರುದ್ಧ 1 ವಿಕೆಟ್‌ ರೋಚಕ ಗೆಲವು ಕಂಡ ದಕ್ಷಿಣ ಆಫ್ರಿಕಾ!

ವಿಶ್ವಕಪ್‌ ಟೂರ್ನಿ ಆರಂಭವಾದ 23 ದಿನಗಳ ಬಳಿಕ ದಾಖಲಾದ ಅತ್ಯಂತ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನ ತಂಡವನ್ನು 1 ವಿಕೆಟ್‌ಗಳಿಂದ ಮಣಿಸಿದೆ. ಆ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
 

ICC Cricket World Cup 2023 South Africa won by 1 Wickets VS Pakistan san
Author
First Published Oct 27, 2023, 11:04 PM IST

ಚೆನ್ನೈ (ಅ.27): ವಿಶ್ವಕಪ್‌ ಟೂರ್ನಿ ಆರಂಭವಾದ 23 ದಿನಗಳ ಬಳಿಕ ಥ್ರಿಲ್ಲರ್ ಪಂದ್ಯಕ್ಕೆ ಸಾಕ್ಷಿಯಾಗಿದೆ. ಇನ್ನೇನು ಗೆಲುವಿನ ಹಂತದಲ್ಲಿದ್ದ ಪಾಕಿಸ್ತಾನ ತಂಡವನ್ನು ದಕ್ಷಿಣ ಆಫ್ರಿಕಾ 1 ವಿಕೆಟ್‌ಗಳಿಂದ ರೋಚಕವಾಗಿ ಮಣಿಸಿದೆ. ಕೊನೆಯ ವಿಕೆಟ್‌ಗೆ ಗೆಲುವಿಗೆ ಬೇಕಿದ್ದ ಅಮೂಲ್ಯ 11 ರನ್‌ಗಳನ್ನು ಎಚ್ಚರಿಕೆಯಿಂದ ಪೇರಿಸಿದ ಕೇಶವ್‌ ಮಹಾರಾಜ್‌ ಹಾಗೂ ತಬರೇಜ್‌ ಶಮ್ಸಿ ತಂಡದ ರೋಚಕ ಗೆಲುವಿಗೆ ಕಾರಣರಾದರು. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದು ವಿಶ್ವಕಪ್‌ ಟೂರ್ನಿಯಲ್ಲಿ ದಾಖಲಾದ ಕೇವಲ 7ನೇ 1 ವಿಕೆಟ್‌ ಅಂತರದ ಗೆಲುವು ಎನಿಸಿದೆ.ಎಂಎ ಚಿದಬರಂ ಸ್ಟೇಡಿಯಂನಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ತಂಡ 46.4 ಓವರ್‌ಗಳಲ್ಲಿ270 ರನ್‌ಗೆ ಆಲೌಟ್‌ ಆಯಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ ತಂಡ 47.2 ಓವರ್‌ಗಳಲ್ಲಿ9 ವಿಕೆಟ್‌ಗೆ 271 ರನ್ ಬಾರಿಸಿ ಗೆಲುವು ಕಂಡಿತು. ಇದು 1999ರ ಬಳಿಕ ದಕ್ಷಿಣ ಆಫ್ರಿಕಾ ತಂಡಕ್ಕೆ ಪಾಕಿಸ್ತಾನ ವಿರುದ್ಧ ವಿಶ್ವಕಪ್‌ ಪಂದ್ಯದಲ್ಲಿ ಮೊದಲ (ಏಕದಿನ/ಟಿ20) ಗೆಲುವು ಎನಿಸಿದೆ. ಈ ಅವಧಿಯಲ್ಲಿ ಆಡಿ ಏಳೂ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ಸೋಲು ಕಂಡಿತ್ತು. ಇನ್ನು 2015ರ ವಿಶ್ವಕಪ್‌ನಲ್ಲಿ ಎರಡು ಬಾರಿ ಒಂದು ವಿಕೆಟ್‌ ಗೆಲುವು ದಾಖಲಾದ ಬಳಿಕ ವಿಶ್ವಕಪ್‌ ಟೂರ್ನಿಯ ಮೊದಲ ಒಂದು ವಿಕೆಟ್‌ ಗೆಲುವು ಇದಾಗಿದೆ.

ಚೇಸಿಂಗ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಉತ್ತಮ ಆರಂಭ ಪಡೆದುಕೊಂಡಿತ್ತು. ಇಡೀ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಬಲವಾಗಿದ್ದ ಕ್ವಿಂಟನ್‌ ಡಿ ಕಾಕ್‌ (24 ರನ್‌, 14 ಎಸೆತ, 5 ಬೌಂಡರಿ) ವಿಕೆಟ್‌ಅನ್ನು 34 ರನ್‌ ಗಳಿಸುವ ಕಳೆದುಕೊಂಡರೂ ತಂಡದ ಇನ್ನಿಂಗ್ಸ್‌ ಕುಸಿಯಲಿಲ್ಲ. ಅದಲ್ಲದೆ, ತಂಡದ ಮೊತ್ತ ಅರ್ಧಶತಕದ ಗಡಿ ದಾಟಿದ ಬಳಿಕ ನಾಯಕ ಟೆಂಬಾ ಬವುಮಾ (28) ನಿರ್ಗಮಿಸಿದ್ದರು.ಈ ಹಂತದಲ್ಲಿ ರಸ್ಸಿ ವಾನ್‌ ಡರ್‌ ಡುಸೆನ್‌ (21) ಜೊತೆಯಾದ ಏಡೆನ್‌ ಮಾರ್ಕ್ರಮ್‌ (91ರನ್‌, 93 ಎಸೆತ, 7 ಬೌಂಡರಿ, 3 ಸಿಕ್ಸರ್) ಅದ್ಭುತ ಜೊತೆಯಾಟದಲ್ಲಿ ಭಾಗಿಯಾಗಿ ಮೊತ್ತವನ್ನು 120ರ ಗಡಿ ದಾಟಿಸಿದರು.

ಆದರೆ, 15 ರನ್‌ಗಳ ಅಂತರದಲ್ಲಿ ಡುಸೆನ್‌ ಹಾಗೂ ಹೆನ್ರಿಚ್‌ ಕ್ಲಾಸೆನ್‌ (12) ವಿಕೆಟ್‌ ಕಳೆದುಕೊಂಡು ದಕ್ಷಿಣ ಆಫ್ರಿಕಾ ಆಘಾತ ಕಂಡಿತ್ತು. ಬಳಿಕ ಡೇವಿಡ್‌ ಮಿಲ್ಲರ್‌ (29) ಜೊತೆಯಾಗಿದ್ದರಿಂದ ಮಾರ್ಕ್ರಮ್‌ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. 206 ರನ್‌ಗೆ 4 ವಿಕೆಟ್‌ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ 250 ರನ್‌ ಪೇರಿಸುವ ವೇಳೆಗೆ ಮತ್ತೆ 4 ವಿಕೆಟ್‌ ಕಳೆದುಕೊಂಡು ಸೋಲಿನ ಅಪಾಯಕ್ಕೆ ಸಿಲುಕಿತ್ತು.

ಕ್ರಿಕೆಟ್ ಫ್ಯಾನ್ಸ್‌ಗೆ ಗುಡ್ ನ್ಯೂಸ್, ಐಪಿಎಲ್ ನಿವೃತ್ತಿ ಮಾತು ತಳ್ಳಿಹಾಕಿದ ಧೋನಿ !

14 ಎಸೆತಗಳಲ್ಲಿ 4 ರನ್‌ ಬಾರಿಸಿ ಗೆಲುವಿನಿಂದ 11 ರನ್‌ ದೂರವಿದ್ದಾಗ ಎನ್‌ಗಿಡಿ ಕೂಡ ಔಟಾದರು. ಈ ವೇಳೆ ತಂಡವನ್ನು ಗೆಲುವಿನ ದಡ ಸೇರಿಸುವ ಜವಾಬ್ದಾರಿ ಕೊನೆಯ ವಿಕೆಟ್‌ ಮೇಲಿತ್ತು. ಕೇಶವ್‌ ಮಹಾರಾಜ್‌ ಹಾಗೂ ತಬರೇಜ್‌ ಶಮ್ಸಿಈ ಅಮೂಲ್ಯ ರನ್‌ ಗಳಿಸುವ ಮೂಲಕ ತಂಡದ ಜಯಕ್ಕೆ ಕಾರಣರಾದರು. ಇನ್ನೊಂದೆಡೆ ಪಾಕಿಸ್ತಾನ ತಂಡ ತನ್ನ ಈವರೆಗಿನ ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಸತತ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. ಅದಲ್ಲದೆ, ದಕ್ಷಿಣ ಆಫ್ರಿಕಾ ತಂಡಕ್ಕೆ ವಿಶ್ವಕಪ್‌ ಟೂರ್ನಿಯಲ್ಲಿ ಇದು 2ನೇ ಅತ್ಯುತ್ತಮ ಚೇಸಿಂಗ್‌ ಆಗಿದೆ. ಇದಕ್ಕೂ ಮುನ್ನ ಭಾರತದ ವಿರುದ್ಧ 2011ರ ವಿಶ್ವಕಪ್‌ನಲ್ಲಿ 297 ರನ್‌ ಚೇಸ್‌ ಮಾಡಿದ್ದು ದಾಖಲೆಯಾಗಿದೆ.

Cricket World Cup 2023: ರನ್‌ ಮೆಷಿನ್‌, ಕ್ರಿಕೆಟಿಗ ವಿರಾಟ್ ಕೊಹ್ಲಿ ಫಿಟ್‌ ಆಗಿರೋಕೆ ಏನ್ ತಿನ್ತಾರೆ?

Follow Us:
Download App:
  • android
  • ios