World Cup 2023: ವೇಗಿಗಳ ಬೆಂಕಿಚೆಂಡು, ಕೊನೆಗೂ ಭಾರತದಲ್ಲಿ ವಿಶ್ವಕಪ್ ಪಂದ್ಯ ಗೆದ್ದ ಪಾಕಿಸ್ತಾನ
ವೇಗದ ಬೌಲರ್‌ಗಳ ಮಿಂಚಿನ ದಾಳಿಯ ನೆರವಿನಿಂದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಶುಭಾರಂಭ ಮಾಡಿದೆ. ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡ 81 ರನ್ ಗೆಲುವು ಕಂಡಿದೆ.
ಹೈದರಾಬಾದ್ (ಅ.6): ಕೊನೆಗೂ ಪಾಕಿಸ್ತಾನ ತಂಡ ಭಾರತದಲ್ಲಿ ವಿಶ್ವಕಪ್ ಪಂದ್ಯದಲ್ಲಿ ಗೆಲುವು ಕಾಣುವಲ್ಲಿ ಯಶಸ್ವಿಯಾಗಿದೆ. ನೆದರ್ಲೆಂಡ್ಸ್ ವಿರುದ್ಧದ ನಡೆದ ಪಂದ್ಯದಲ್ಲಿ ಪಾಕಿಸ್ತಾನ 81 ರನ್ ಗೆಲುವು ಕಂಡಿದೆ. ಅದರೊಂದಿಗೆ ಬಾಬರ್ ಅಜಮ್, ಭಾರತದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಗೆಲುವು ತಂದುಕೊಟ್ಟ ಮೊಟ್ಟಮೊದಲ ನಾಯಕ ಎನಿಸಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 49 ಓವರ್‌ಗಳಲ್ಲಿ 286 ರನ್‌ಗೆ ಆಲೌಟ್ ಆದರೆ, ಪ್ರತಿಯಾಗಿ ನೆದರ್ಲೆಂಡ್ಸ್ ತಂಡ 41 ಓವರ್‌ಗಳಲ್ಲಿ 205 ರನ್‌ಗೆ ಆಲೌಟ್ ಆಯಿತು. ಅದರೊಂದಿಗೆ ಪಾಕಿಸ್ತಾನ ತಂಡ ವಿಶ್ವಕಪ್ ಟೂರ್ನಿಯಲ್ಲಿ 275 ಹಾಗೂ ಅದಕ್ಕಿಂತ ಹೆಚ್ಚಿನ ರನ್ ಗಳಿಸಿದ್ದಾಗ ಪಂದ್ಯವನ್ನು ಎಂದೂ ಸೋತಿಲ್ಲ ಎನ್ನುವ ದಾಖಲೆಯನ್ನೂ ಉಳಿಸಿಕೊಂಡಿತು. ಪಾಕಿಸ್ತಾನ ತಂಡ ವಿಶ್ವಕಪ್‌ನಲ್ಲಿ 275 ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಈವರೆಗೂ ಆಡಿದ ಎಲ್ಲಾ 14 ಪಂದ್ಯಗಳನ್ನೂ ರಕ್ಷಿಸಿಕೊಂಡಿದೆ. ಕೆಳ ಕ್ರಮಾಂಕದಲ್ಲಿ ಪಾಕಿಸ್ತಾನ ಬ್ಯಾಟಿಂಗ್ ಬೆನ್ನುಲುಬಾಗಿ ನಿಂತು 52 ಎಸೆತಗಳಲ್ಲಿ 68 ರನ್ ಬಾರಿಸಿದ ಸೌದ್ ಶಕೀಲ್ ಪಂದ್ಯದ ಶ್ರೇಷ್ಠ ಎನಿಸಿಕೊಂಡರು.
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲೆಂಡ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿತು. ಪಾಕಿಸ್ತಾನದ ಬ್ಯಾಟಿಂಗ್‌ಗೆ ಆರಂಭದಲ್ಲಿಯೇ ನೆದರ್ಲೆಂಡ್ಸ್ ಆಘಾತ ನೀಡಿತು. ಆರಂಭಿಕ ಆಟಗಾರ ಫಖರ್ ಜಮಾನ್ (12), ಇಮಾಮ್ ಉಲ್ ಹಕ್ (15) ಹಾಗೂ ಅನುಭವಿ ಆಟಗಾರ ಬಾಬರ್ ಅಜಮ್ (5) ತಂಡದ ಮೊತ್ತ 34 ರನ್ ಆಗುವಾಗಲೇ ಪೆವಿಲಿಯನ್ ಸೇರಿದ್ದರು.
ಈ ಹಂತದಲ್ಲಿ ಜೊತೆಯಾದ ವಿಕೆಟ್ ಕೀಪರ್ ಮೊಹಮದ್ ರಿಜ್ವಾನ್ ಹಾಗೂ ಸೌದ್ ಶಕೀಲ್ 4ನೇ ವಿಕೆಟ್‌ಗೆ 120 ರನ್ ಜೊತೆಯಾಟವಾಡಿ ಪಾಕಿಸ್ತಾನದ ಇನ್ನಿಂಗ್ಸ್‌ಅನ್ನು ಆಧರಿಸಿದರು. ಇಬ್ಬರೂ ತಲಾ 68 ರನ್ ಬಾರಿಸಿದರೆ, ಮೊಹಮದ್ ರಿಜ್ವಾಲ್ ತಮ್ಮ ಇನಿಂಗ್ಸ್‌ಗೆ 75 ಎಸೆತ ತೆಗೆದುಕೊಂಡರು. 29ನೇ ಓವರ್‌ನಲ್ಲಿ ಆರ್ಯನ್ ದತ್ ಈ ಜೋಡಿಯನ್ನು ಬೇರ್ಪಡಿಸಾದ ಪಾಕಿಸ್ತಾನ ಇನ್ನಿಂಗ್ಸ್ ಮೇಲೆ ಹಿಡಿತ ಸಾಧಿಸುವ ಅವಕಾಶ ನೆದರ್ಲೆಂಡ್ಸ್‌ಗೆ ಇತ್ತಾದರೂ, ಕೆಳ ಕ್ರಮಾಂಕದಲ್ಲಿ ಮೊಹಮದ್ ನವಾಜ್ 39 ರನ್ ಹಾಗೂ ಶಾದಾಬ್ ಖಾನ್ 32 ರನ್ ಬಾರಿಸಿ ಪಾಕಿಸ್ತಾನದ ಇನ್ನಿಂಗ್ಸ್‌ಗೆ ಚೇತರಿಕೆ ನೀಡಿದ್ದರು.
ಪ್ರತಿಯಾಗಿ ಚೇಸಿಂಗ್ ಆರಂಭಿಸಿದ ನೆದರ್ಲೆಂಡ್ಸ್ ತಂಡ 50 ರನ್ ಬಾರಿಸುವ ವೇಳೆಗೆ 2 ಪ್ರಮುಖ ವಿಕೆಟ್ ಕಳೆದುಕೊಂಡಿತ್ತು. ಆದರೆ, ಆರಂಭಿಕ ಆಟಗಾರ ವಿಕ್ರಮ್‌ಜೀತ್ ಸಿಂಗ್ (52 ರನ್, 67 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಆಲ್ರೌಂಡರ್ ಬಾಸ್ ಡೆ ಲೀಡೆ (67 ರನ್, 68 ಎಸೆತ, 6 ಬೌಂಡರಿ, 2 ಸಿಕ್ಸರ್) ಮೂರನೇ ವಿಕೆಟ್‌ಗೆ ಅಮೂಲ್ಯ 70 ರನ್ ಬಾರಿಸಿ ಪಾಕಿಸ್ತಾನಕ್ಕೆ ಆಘಾತ ನೀಡುವ ಸೂಚನೆ ನೀಡಿದ್ದರು. ಆದರೆ, ಪಂದ್ಯದ 24ನೇ ಓವರ್‌ನಲ್ಲಿ ಶಾಬಾದ್ ಖಾನ್, ವಿಕ್ರಮ್‌ಜೀತ್ ಅವರ ವಿಕೆಟ್ ಉರುಳಿಸಿದ ಬಳಿಕ ಪಾಕಿಸ್ತಾನಕ್ಕೆ ಗೆಲುವಿನ ಬಾಗಿಲು ತೆರೆದಂತಾಯಿತು. ನಂತರ ಬಂದ ಬ್ಯಾಟ್ಸ್‌ಮನ್‌ಗಳನ್ನು ಪಾಕಿಸ್ತಾನದ ವೇಗಿಗಳು ಕ್ರೀಸ್‌ನಲ್ಲಿ ನಿಲ್ಲಲು ಬಿಡುತ್ತಿರಲಿಲ್ಲ. ಒಂದು ಹಂತದಲ್ಲಿ 2 ವಿಕೆಟ್‌ಗೆ 120 ರನ್ ಬಾರಿಸಿದ್ದ ನೆದರ್ಲೆಂಡ್ಸ್ ಮುಂದಿನ 85 ರನ್ ಬಾರಿಸುವ ವೇಳೆಗೆ ಉಳಿದ 8 ವಿಕೆಟ್‌ಗಳನ್ನು ಕಳೆದುಕೊಂಡು ಸೋಲು ಕಂಡಿತು.
ಸ್ವಿಗ್ಗಿ ಡೆಲಿವರಿ ಬಾಯ್ಸ್ ಅಲ್ಲಾರೀ, ಇವರು ಟೀಮ್ ಇಂಡಿಯಾ ಪ್ಲೇಯರ್ಸು..!
ಪಾಕಿಸ್ತಾನದ ಪರವಾಗಿ ಹ್ಯಾರಿಸ್ ರೌಫ್ 43 ರನ್‌ಗೆ 3 ವಿಕೆಟ್ ಉರುಳಿಸಿದರೆ, ಹಸನ್ ಅಲಿ 33 ರನ್‌ಗೆ 2 ವಿಕೆಟ್ ಸಂಪಾದಿಸಿದರು. ಉಳಿದಂತೆ ಶಹೀನ್ ಷಾ ಅಫ್ರಿದಿ, ಇಫ್ತಿಕಾರ್ ಅಹ್ಮದ್, ಮೊಹಮದ್ ನವಾಜ್ ಹಾಗೂ ಶಾದಾಬ್ ಖಾನ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.
World Cup 2023: ಆಸೀಸ್ ಎದುರಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಕಠಿಣ ಅಭ್ಯಾಸ