ಟೆಸ್ಟ್ ವಿಶ್ವ ವಿಜೇತರ ನಿರ್ಧಾರಕ್ಕೆ ಒಂದೇ ಪಂದ್ಯ ಸಾಲದು: ವಿರಾಟ್ ಕೊಹ್ಲಿ
* ಭಾರತವನ್ನು ಮಣಿಸಿ ಟೆಸ್ಟ್ ಚಾಂಪಿಯನ್ ಆಗಿ ಹೊರಹೊಮ್ಮಿದ ನ್ಯೂಜಿಲೆಂಡ್
* ಒಂದೇ ಪಂದ್ಯದಿಂದ ಟೆಸ್ಟ್ ಚಾಂಪಿಯನ್ ಘೋಷಿಸುವುದು ಸಮಂಜಸವಲ್ಲ ಎಂದ ಕೊಹ್ಲಿ
* ಟೆಸ್ಟ್ ಚಾಂಪಿಯನ್ ಗುರುತಿಸಲು 3 ಪಂದ್ಯಗಳ ಸರಣಿ ಆಡಿಸುವುದು ಉತ್ತಮ ಎಂದ ಕೊಹ್ಲಿ
ಸೌಥಾಂಪ್ಟನ್(ಜೂ.25): ಸುಮಾರು 2 ವರ್ಷಗಳಷ್ಟು ಸುದೀರ್ಘ ಅವಧಿಯಲ್ಲಿ ನಡೆಯುವ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ವಿಜೇತರ ನಿರ್ಧಾರಕ್ಕೆ ಕೇವಲ ಒಂದು ಪಂದ್ಯ ಅಳತೆಗೋಲು ಆಗದು. 3 ಪಂದ್ಯಗಳ ಸರಣಿ ಆಡಿಸುವುದು ಉತ್ತಮ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ಆರಂಭಿಕ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದ ಬಳಿಕ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೊಹ್ಲಿ, ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡದ ನಿಜವಾದ ಸಾಮರ್ಥ್ಯ ಅನಾವರಣಗೊಳ್ಳಬೇಕು. ಆಟಗಾರರ ಕ್ಷಮತೆ, ಪ್ರತಿಭೆಯನ್ನು ಒರೆಗೆ ಹಚ್ಚಲು ಅವಕಾಶವಿರಬೇಕು. ಶಕ್ತಿ, ಶ್ರಮ, ಏರಿಳಿತಗಳು ಹೀಗೆ ಎಲ್ಲವನ್ನೂ ಕಾಣಬೇಕಿದ್ದರೆ 3 ಪಂದ್ಯಗಳ ಸರಣಿಯಿಂದಷ್ಟೇ ಸಾಧ್ಯ. ಮೊದಲ ಪಂದ್ಯದಲ್ಲಿ ಮಾಡುವ ತಪ್ಪನ್ನು ತಿದ್ದಿಕೊಳ್ಳಲು, ಹಿನ್ನಡೆ ಅನುಭವಿಸಿದರೆ ಪುಟಿದೆದ್ದು ತಿರುಗಿಬೀಳಲು ತಂಡವೊಂದಕ್ಕೆ ಅವಕಾಶವಿರಬೇಕು. 3 ಪಂದ್ಯಗಳನ್ನು ಆಡಿದರಷ್ಟೇ ತಂಡದ ಸಮಗ್ರ ಬಲ ಅಳೆಯಲು ಸಾಧ್ಯ ಎಂದು ವಿಶ್ಲೇಷಿಸಿದರು.
ಚೊಚ್ಚಲ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ರವಿಚಂದ್ರನ್ ಅಶ್ವಿನ್
‘ನಮ್ಮ ತಂಡ ಇಷ್ಟು ವರ್ಷಗಳ ಮಾಡಿದ ಸಾಧನೆಯನ್ನು ಖಂಡಿತವಾಗಿಯೂ ಕೇವಲ ಒಂದು ಪಂದ್ಯದಿಂದ ಅಳೆಯಲು, ನಿರ್ಧರಿಸಲಾಗದು. ನಾನಿದನ್ನು ನಮ್ಮ ತಂಡ ಫೈನಲ್ ಸೋತಿದೆ ಎಂಬ ಕಾರಣಕ್ಕಾಗಿ ಹೇಳುತ್ತಿಲ್ಲ. ಎರಡು ಅಗ್ರ ತಂಡಗಳ ಸಾಮರ್ಥ್ಯವನ್ನು ಒಂದೇ ಪಂದ್ಯದ ಫಲಿತಾಂಶದ ಆಧಾರದಲ್ಲಿ ನಿರ್ಣಯಿಸುವುದು ಸರಿಯಲ್ಲ ಎಂಬುದು ನನ್ನ ಅಭಿಮತ’ ಎಂದು ಕೊಹ್ಲಿ ಸಮರ್ಥಿಸಿಕೊಂಡರು.
ಟೆಸ್ಟ್ ವಿಶ್ವಚಾಂಪಿಯನ್‌ಶಿಪ್‌ಗಾಗಿ ಇಂಗ್ಲೆಂಡ್‌ಗೆ ತೆರಳುವ ಮುನ್ನ ಭಾರತ ತಂಡದ ಕೋಚ್ ರವಿಶಾಸ್ತ್ರಿ ಕೂಡ ಇದೇ ರೀತಿಯ ಅಭಿಪ್ರಾಯ ಹೊರಹಾಕಿದ್ದರು. ‘ಟೆಸ್ಟ್ ಕ್ರಿಕೆಟ್ ಅಂದರೆ ಕ್ರಿಕೆಟಿಗನ, ತಂಡದ ಸಾಮರ್ಥ್ಯದ ಪರೀಕ್ಷೆ. ಯಾವುದೋ ಒಂದು ತಂಡ ಎರಡು ದಿನ ಒತ್ತಡ ಹಾಕಿಬಿಟ್ಟರೆ ಅದೇ ಅಂತಿಮ ಎಂದರ್ಥವಲ್ಲ. ಹೀಗಾಗಿ, ಒಂದೇ ಪಂದ್ಯದ ಬದಲು 3 ಪಂದ್ಯಗಳ ಸರಣಿ ಆಡಿಸಿ ಟೆಸ್ಟ್ ಚಾಂಪಿಯನ್ನರ ಆಯ್ಕೆ ಸೂಕ್ತ’ ಎಂದು ಶಾಸ್ತ್ರಿ ಹೇಳಿದ್ದರು.