ಭಾರತದ ವಿರುದ್ಧ ಪಾಕಿಸ್ತಾನ ಆರು ವಿಕೆಟ್‌ಗಳಿಂದ ಸೋತಿದೆ ಮತ್ತು 2025ರ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಿದೆ. ಅಬ್ರಾರ್ ಅಹ್ಮದ್ ಅವರ ವಿಚಿತ್ರ ಸಂಭ್ರಮಾಚರಣೆಗೆ ವಾಸಿಂ ಅಕ್ರಂ ಟೀಕಿಸಿದ್ದಾರೆ. ವಿರಾಟ್ ಕೊಹ್ಲಿ ಶತಕದ ನೆರವಿನಿಂದ ಭಾರತ ಗೆದ್ದಿದೆ. ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶ ಸೋತ ಕಾರಣ, ಭಾರತ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್ ತಲುಪಿವೆ. ಪಾಕಿಸ್ತಾನದ ಆಟದ ಬಗ್ಗೆ ಪಾಕ್‌ನ ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಹುನಿರೀಕ್ಷಿತ ಪಂದ್ಯದಲ್ಲಿ ಭಾರತ ಎದುರು ಪಾಕಿಸ್ತಾನ ತಂಡವು ಆರು ವಿಕೆಟ್ ಅಂತರದ ಸೋಲು ಕಂಡಿದೆ. ಇದರ ಜತೆಗೆ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಿಂದಲೂ ಅಧಿಕೃತವಾಗಿ ಹೊರಬಿದ್ದಿದೆ. ಇನ್ನು ಇವೆಲ್ಲದರ ನಡುವೆ ಪಾಕಿಸ್ತಾನ ತಂಡದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರ ವಿಚಿತ್ರ ಸೆಲಿಬ್ರೇಷನ್‌ಗೆ ಪಾಕ್ ದಿಗ್ಗಜ ವೇಗಿ ವಾಸೀಂ ಅಕ್ರಂ ತಪರಾಕಿ ನೀಡಿದ್ದಾರೆ. 

ಪಾಕಿಸ್ತಾನ ನೀಡಿದ್ದ 241 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಸ್ಪೋಟಕ ಆರಂಭವನ್ನೇ ಪಡೆಯಿತು. ಆದರೆ 17ನೇ ಓವರ್‌ನಲ್ಲಿ ಅಬ್ರಾರ್ ಅಹ್ಮದ್ ಎಸೆದ ಅದ್ಭುತ ಚೆಂಡು ಶುಭ್‌ಮನ್ ಗಿಲ್ ಬ್ಯಾಟ್ ವಂಚಿಸಿ ವಿಕೆಟ್ ಚೆಲ್ಲಾಪಿಲ್ಲಿ ಮಾಡಿತು. ಆಗ ತಮ್ಮದೇ ಟ್ರೇಡ್‌ಮಾರ್ಕ್ ಶೈಲಿಯಲ್ಲಿ ಕತ್ತು ತಿರುಗಿಸಿ ಅಬ್ರಾರ್ ವಿಚಿತ್ರ ಸೆಲಿಬ್ರೇಷನ್ ಮಾಡಿದರು. ಇದು ವಾಸೀಂ ಅಕ್ರಂ ಅವರ ಕೆಂಗಣ್ಣಿಗೆ ಗುರಿಯಾಗಿದೆ.

View post on Instagram

'ಅಬ್ರಾರ್ ಎಸೆದ ಆ ಚೆಂಡು ನನ್ನನ್ನು ನಿಜಕ್ಕೂ ಪ್ರಭಾವಿಸಿತು, ಆದರೆ ಆತನ ಸೆಲಿಬ್ರೇಷನ್ ನನಗಂತೂ ಇಷ್ಟವಾಗಲಿಲ್ಲ. ತಂಡ ಮುಳುಗುವ ಹಂತದಲ್ಲಿ ಈ ರೀತಿಯ ಸಂಭ್ರಮಾಚರಣೆಯ ಅಗತ್ಯವಿತ್ತಾ? ಎಲ್ಲದಕ್ಕೂ ಸಮಯ ಸಂದರ್ಭ ಅಂತ ಇರುತ್ತೆ. ತಂಡ ಸೋಲುವ ಒತ್ತಡದಲ್ಲಿತ್ತು, ಆಗ ನೀವು 5 ವಿಕೆಟ್ ಪಡೆದಾಗ ಮಾಡುವ ಸಂಭ್ರಮಾಚರಣೆ ಇದ್ದಂತೆ ಇತ್ತು. ಇಂತಹ ಸಂಭ್ರಮಾಚರಣೆ ಟಿವಿಯಲ್ಲಿ ಚೆನ್ನಾಗಿ ಕಾಣೊಲ್ಲ ಎಂದು ವಾಸೀಂ ಅಕ್ರಂ ಯುವ ಸ್ಪಿನ್ನರ್ ಅಬ್ರಾರ್ ಅಹ್ಮದ್ ಕಿವಿ ಹಿಂಡಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ ಎದುರು ಭಾರತ ಹೀನಾಯವಾಗಿ ಸೋಲುತ್ತೆ ಎಂದು ಭವಿಷ್ಯ ನುಡಿದಿದ್ದ IIT ಬಾಬಾ ಈಗ ಫುಲ್ ಟ್ರೋಲ್!

ಶುಭ್‌ಮನ್ ಗಿಲ್ 52 ಎಸೆತಗಳಲ್ಲಿ 46 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆಗ ತಂಡ 2 ವಿಕೆಟ್ ಕಳೆದುಕೊಂಡು 100 ರನ್ ಗಳಿಸಿತ್ತು. ಇದಾದ ಬಳಿಕ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಶ್ರೇಯಸ್ ಅಯ್ಯರ್ 56 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ವಿರಾಟ್ ಕೊಹ್ಲಿ ಅಜೇಯ ಶತಕ ಸಿಡಿಸುವ ಮೂಲಕ ಇನ್ನೂ 45 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದೀಗ ಬಾಂಗ್ಲಾದೇಶ ಎದುರು ನ್ಯೂಜಿಲೆಂಡ್ ತಂಡವು ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 'ಎ' ಗುಂಪಿನಿಂದ ತಲಾ 2 ಗೆಲುವು ಸಾಧಿಸಿರುವ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಅಧಿಕೃತವಾಗಿ ಸೆಮೀಸ್ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಇನ್ನು ಬಾಂಗ್ಲಾದೇಶ ಹಾಗೂ ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡಗಳು ಗ್ರೂಪ್‌ ಹಂತದಲ್ಲೇ ಹೊರಬೀಳುವ ಮೂಲಕ ಮುಖಭಂಗ ಅನುಭವಿಸಿವೆ.

ಇದನ್ನೂ ಓದಿ: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಸೆಮಿಗೆ: ಪಾಕ್‌, ಬಾಂಗ್ಲಾ ಒಟ್ಟಿಗೇ ಮನೆಗೆ!

ಬುದ್ದಿ, ವಿವೇಚನೆ ರಹಿತ ತಂಡ: ಪಾಕ್ ದಿಗ್ಗಜ ಕ್ರಿಕೆಟಿಗರು ಕೆಂಡ 

ಕರಾಚಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ವಿರುದ್ಧ ಹೀನಾಯವಾಗಿ ಸೋತ ಪಾಕಿಸ್ತಾನ ತಂಡದ ವಿರುದ್ಧ ಪಾಕ್ ಮಾಜಿ ಆಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಬುದ್ಧಿಯಿಲ್ಲದ ಹಾಗೂ ವಿವೇಚನೆ ರಹಿತ ತಂಡ' ಎಂದು ಮಾಜಿ ವೇಗಿ ಶೋಯೆಬ್ ಅಖ್ತರ್ ಕಿಡಿಕಾರಿದ್ದಾರೆ. 

ಈ ಕುರಿತು ಅಸಮಧಾನ ವ್ಯಕ್ತಪಡಿಸಿರುವ ಅಖ್ತರ್, 'ಸೋಲಿನಿಂದ ನನಗೆ ಸ್ವಲ್ಪವೂ ನಿರಾಸೆಯಾಗಿಲ್ಲ. ಯಾಕೆಂದರೆ ಏನಾಗುತ್ತದೆ ಎನ್ನುವುದು ನನಗೆ ತಿಳಿದಿತ್ತು' ಎಂದಿದ್ದಾರೆ. ಮಾಜಿ ಕೋಚ್ ಹಫೀಜ್, ಜಾವೆದ್, ಮೊಯಿನ್ ಖಾನ್ ಕೂಡಾ ತಂಡದ ಆಟದ ಶೈಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು ಕೊಹ್ಲಿ ಬಗ್ಗೆ ಮಾತನಾಡೋಣ

ಮೊದಲು ನಾವು ಕೊಹ್ಲಿ ಬಗ್ಗೆ ಮಾತನಾಡೋಣ. ಅವರ ಕಠಿಣ ಪರಿಶ್ರಮ ನನಗೆ ಆಶ್ಚರ್ಯ ತಂದಿದೆ. ಅವರು ಫಾರ್ಮ್‌ನಲ್ಲಿಲ್ಲ ಎಂದು ಜಗತ್ತು ಹೇಳುತ್ತದೆ. ಆದರೆ, ಅವರು ದೊಡ್ಡ ಪಂದ್ಯಗಳಲ್ಲಿ ಆಡುತ್ತಾರೆ ಮತ್ತು ಸುಲಭವಾಗಿ ರನ್ ಗಳಿಸುತ್ತಾರೆ. ಅವರ ಫಿಟ್‌ನೆಸ್ ಮಟ್ಟ ಮತ್ತು ಕಠಿಣ ಪರಿಶ್ರಮವನ್ನು ನಾನು ಖಂಡಿತಾ ಪ್ರಶಂಸಿಸುತ್ತೇನೆ ಎಂದು ಪಾಕ್ ತಂಡದ ನಾಯಕ ಮೊಹಮ್ಮದ್ ರಿಜ್ವಾನ್ ಹೇಳಿದ್ದಾರೆ.