ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಚಾಲನೆ ದೊರೆತಿದೆ. ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾದವು. ಪಂದ್ಯದ ವೇಳೆ ವಾಯುಪಡೆಯ ವಿಮಾನಗಳ ಹಾರಾಟದಿಂದ ಆಟಗಾರರು ಬೆಚ್ಚಿಬಿದ್ದರು. ಮೂರು ದಶಕಗಳ ಬಳಿಕ ಪಾಕಿಸ್ತಾನ ಐಸಿಸಿ ಟೂರ್ನಿಯನ್ನು ಆಯೋಜಿಸುತ್ತಿದೆ. ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ವಿವಾದದ ನಂತರ ಕರಾಚಿ ಕ್ರೀಡಾಂಗಣದಲ್ಲಿ ಭಾರತದ ಧ್ವಜವನ್ನು ಹಾರಿಸಲಾಗಿದೆ.

ಕರಾಚಿ: ಬಹುನಿರೀಕ್ಷಿತ 9ನೇ ಆವೃತ್ತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಬುಧವಾರ(ಫೆ.21) ಪಾಕಿಸ್ತಾನದಲ್ಲಿ ಅಧಿಕೃತ ಚಾಲನೆ ಸಿಕ್ಕಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದ ಚಾಲನೆ ಸಂದರ್ಭದಲ್ಲಿ ಕಿವೀಸ್ ಆರಂಭಿಕ ಬ್ಯಾಟರ್ ಡೆವೊನ್ ಕಾನ್‌ವೇ, ವಿಮಾನದ ಶಬ್ದಕ್ಕೆ ಬೆಚ್ಚಿಬಿದ್ದ ಘಟನೆ ನಡೆದಿದೆ. 

ಹೌದು, ಪಂದ್ಯ ಆರಂಭಕ್ಕೂ ಮುನ್ನ ಕ್ರೀಡಾಂಗಣದ ಮೇಲೆ ಪಾಕಿಸ್ತಾನ ವಾಯುಪಡೆಯ ವಿಮಾನಗಳು ಹಾರಾಟ ನಡೆಸಿದವು. ಈ ವೇಳೆ ಕ್ರೀಸ್‌ಗೆ ಆಗಮಿಸಲು ತಯಾರಾಗುತ್ತಿದ್ದ ನ್ಯೂಜಿಲೆಂಡ್‌ನ ಡೆವೊನ್‌ ಕಾನ್‌ವೇ ವಿಮಾನಗಳ ಶಬ್ದ ಕೇಳಿ ಬೆಚ್ಚಿಬಿದ್ದರು. ಇದಕ್ಕೆ ಸಾಮಾಜಿಕ ತಾಣಗಳಲ್ಲಿ ಹಲವರು ಟ್ರೋಲ್‌ ಮಾಡಿದ್ದು, ‘ಈಗಲೂ ಪಾಕ್‌ನಲ್ಲಿ ಕ್ರಿಕೆಟಿಗರು ಭಯದಿಂದಲೇ ಆಡುತ್ತಾರೆ’ ಎಂದು ಕುಟುಕಿದ್ದಾರೆ.

ಇಂದಿನಿಂದ ಚಾಂಪಿಯನ್ಸ್‌ ಟ್ರೋಫಿ ಹಣಾಹಣಿ: ಪಾಕಿಸ್ತಾನ vs ನ್ಯೂಜಿಲೆಂಡ್‌ ಮೊದಲ ಫೈಟ್‌!

ಭಾರತಕ್ಕೆ ಸೆಡ್ಡು ಹೊಡೆಯಲು ಮುಂದಾದ ಪಾಕ್:

2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಭಾರತೀಯ ವಾಯು ಸೇನೆಯ ಸೂರ್ಯ ಕಿರಣ್ ಆಕ್ರೋಬಾಟಿಕ್ ಟೀಂ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶೇಷ ಏರ್‌ ಷೋ ನಡೆಸಿ ಜಗತ್ತಿನ ಗಮನ ಸೆಳೆದಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಕೂಡಾ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ವೇಳೆ ತಾವು ಕೂಡಾ ಅಂತಹದ್ದೇ ಏರ್‌ ಷೋ ಮಾಡುವುದಾಗಿ ಘೋಷಿಸಿತ್ತು. ಹೀಗಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಉದ್ಘಾಟನಾ ಸಮಾರಂಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಪಾಕ್ ವಾಯು ಸೇನೆಯ F-16 ಮತ್ತು JF-17 ಜೆಟ್‌ಗಳ ಹಾರಾಟ ನಡೆಸಿತು.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಉದ್ಘಾಟನಾ ಪಂದ್ಯದಲ್ಲೇ ಪಾಕ್‌ಗೆ ಮುಖಭಂಗ; ಕಿವೀಸ್ ಎದುರು ಹೀನಾಯ ಸೋಲು!

3 ದಶಕದ ಬಳಿಕ ಪಾಕ್‌ ನೆಲದಲ್ಲಿ ಐಸಿಸಿ ಟೂರ್ನಿ

ಪಾಕಿಸ್ತಾನ ಬರೋಬ್ಬರಿ 3 ದಶಕದ ಬಳಿಕ ಐಸಿಸಿ ಟೂರ್ನಿ ಆಯೋಜಿಸುತ್ತಿದೆ. ಪಾಕ್‌ನಲ್ಲಿ ಕೊನೆ ಬಾರಿಗೆ ಐಸಿಸಿ ಟೂರ್ನಿಯೊಂದು ನಡೆದಿದ್ದು 1996ರಲ್ಲಿ. ಭಾರತ ಹಾಗೂ ಶ್ರೀಲಂಕಾದ ಜೊತೆ ಪಾಕಿಸ್ತಾನ ಏಕದಿನ ವಿಶ್ವಕಪ್‌ಗೆ ಜಂಟಿ ಆತಿಥ್ಯ ವಹಿಸಿತ್ತು. ಇದಾಗಿ 29 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಯೊಂದಕ್ಕೆ ಪಾಕಿಸ್ತಾನ ಆತಿಥ್ಯ ವಹಿಸಿದೆ. ಭದ್ರತೆ ಹಾಗೂ ರಾಜತಾಂತ್ರಿಕ ಕಾರಣಗಳಿಂದಾಗಿ ಭಾರತ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನಾಡಲು ಪಾಕಿಸ್ತಾನ ಪ್ರವಾಸ ಮಾಡಲು ಹಿಂದೇಟು ಹಾಕಿತ್ತು. ಹೀಗಾಗಿ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದ್ದು, ಭಾರತ ತನ್ನ ಪಾಲಿನ ಪಂದ್ಯಗಳನ್ನು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಆಡಲಿದೆ. 

ಕೊನೆಗೂ ಎಚ್ಚೆತ್ತ ಪಿಸಿಬಿ: ಕರಾಚಿ ಕ್ರೀಡಾಂಗಣದಲ್ಲಿ ಭಾರತದ ಧ್ವಜ

ಕರಾಚಿ: ವಿವಾದದ ಬಳಿಕ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಚಾಂಪಿಯನ್ಸ್‌ ಟ್ರೋಫಿ ಉದ್ಘಾಟನಾ ಪಂದ್ಯದ ವೇಳೆ ಕರಾಚಿ ಕ್ರೀಡಾಂಗಣದಲ್ಲಿ ಭಾರತದ ಧ್ವಜವನ್ನು ಹಾರಿಸಿದೆ.

ಇತ್ತೀಚೆಗೆ, ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳ ರಾಷ್ಟ್ರೀಯ ಧ್ವಜವನ್ನು ಕರಾಚಿ ಹಾಗೂ ಲಾಹೋರ್‌ ಕ್ರೀಡಾಂಗಣದಲ್ಲಿ ಅಳವಡಿಸಲಾಗಿತ್ತು. ಆದರೆ ಎರಡೂ ಕ್ರೀಡಾಂಗಣಗಲ್ಲಿ ಭಾರತದ ಧ್ವಜ ಇರಲಿಲ್ಲ. ಇದು ವಿವಾದಕ್ಕೆ ಕಾರಣವಾಗಿತ್ತು. ಆದರೆ ಬುಧವಾರ ಪಾಕಿಸ್ತಾನ-ನ್ಯೂಜಿಲೆಂಡ್‌ ಪಂದ್ಯದ ವೇಳೆ ಕರಾಚಿ ಮೈದಾನದಲ್ಲಿ ಭಾರತದ ಧ್ವಜವನ್ನು ಇತರ ರಾಷ್ಟ್ರಗಳ ಧ್ವಜದ ಜೊತೆಗೇ ಹಾರಿಸಲಾಗಿದೆ.