ಕರಾಚಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಅಫ್ಘಾನಿಸ್ತಾನದ ವಿರುದ್ಧ 107 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 315 ರನ್ ಗಳಿಸಿತು. ರಿಕೆಲ್ಟನ್ ಶತಕ (103) ಸಿಡಿಸಿದರು. ಪ್ರತಿಯಾಗಿ, ಅಫ್ಘಾನಿಸ್ತಾನ 43.3 ಓವರ್‌ಗಳಲ್ಲಿ 208 ರನ್‌ಗಳಿಗೆ ಸರ್ವಪತನ ಕಂಡಿತು. ರಹ್ಮತ್ ಶಾ (90) ಒಬ್ಬರೇ ಹೋರಾಟ ನಡೆಸಿದರು. ದಕ್ಷಿಣ ಆಫ್ರಿಕಾ ಪರವಾಗಿ ರಬಾಡ 3 ವಿಕೆಟ್ ಪಡೆದರು. ಈ ಟೂರ್ನಿಯಲ್ಲಿ ಇದುವರೆಗೆ 5 ಶತಕಗಳು ದಾಖಲಾಗಿವೆ.
ಕರಾಚಿ: ಚೊಚ್ಚಲ ಆವೃತ್ತಿಯ ಚಾಂಪಿಯನ್ ದಕ್ಷಿಣ ಆಫ್ರಿಕಾ ತಂಡ ಈ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ. ಮೊದಲ ಬಾರಿ ಟೂರ್ನಿಯಲ್ಲಿ ಆಡುತ್ತಿರುವ ಅಫ್ಘಾನಿಸ್ತಾನ ವಿರುದ್ಧ ಶುಕ್ರವಾರ ಕರಾಚಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹರಿಣ ಪಡೆ 107 ರನ್ ಗೆಲುವು ಸಾಧಿಸಿದೆ. ದೊಡ್ಡ ತಂಡಗಳಿಗೆ ಆಘಾತಕಾರಿ ಸೋಲು ನೀಡುವುದಕ್ಕೆ ಹೆಸರುವಾಸಿಯಾಗಿದ್ದ ಅಫ್ಘಾನಿಸ್ತಾನಕ್ಕೆ ಮಾಜಿ ಚಾಂಪಿಯನ್ನರ ವಿರುದ್ಧ ಯಾವುದೇ ಮ್ಯಾಜಿಕ್ ಮಾಡಲು ಸಾಧ್ಯವಾಗಲಿಲ್ಲ.
ಕರಾಚಿ ಕ್ರೀಡಾಂಗಣದಲ್ಲಿ ಚೇಸಿಂಗ್ ಕಷ್ಟವಾಗಲಿದೆ ಎಂದರಿತಿದ್ದ ದ.ಆಫ್ರಿಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ತಂಡದ ಲೆಕ್ಕಾಚಾರ ಕೈಕೊಡಲಿಲ್ಲ. ಮಾಂತ್ರಿಕ ಸ್ಪಿನ್ನರ್ ಗಳಿಗೆ ಹೆಸರುವಾಸಿಯಾಗಿರುವ ಆಫ್ಘಾನ್‌ನ ದಾಳಿಯನ್ನು ಸಮರ್ಥವಾಗಿ ಎದುರಿಸಿದ ತಂಡ, 6 ವಿಕೆಟ್‌ಗೆ 315 ರನ್ ಕಲೆಹಾಕಿತು. ತನ್ನ ಬೌಲರ್‌ಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ಆಫ್ಘನ್‌ಗೆ ಈ ಮೊತ್ತ ದೊಡ್ಡ ಹೊರೆಯಾಗಿ ಪರಿಣಮಿಸಿತು. ರಹ್ಮತ್ ಶಾ(90) ಏಕಾಂಗಿ ಹೋರಾಟದ ಹೊರತಾಗಿ ತಂಡ 43.3 ಓವರ್ ಗಳಲ್ಲಿ 208 ರನ್‌ಗೆ ಆಲೌಟಾಯಿತು.
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆದ ಗಾಯದ ಬಳಿಕ ಅನುಭವಿಸಿದ ಆತಂಕ ಬಿಚ್ಚಿಟ್ಟ ಮೊಹಮ್ಮದ್ ಶಮಿ
4ನೇ ಓವರ್‌ನಲ್ಲೇ ತಂಡದ ಪ್ರಮುಖ ಬ್ಯಾಟರ್ ರಹ್ಮಾನುಲ್ಲಾ ಗುರ್ಬಾಜ್ (10) ವಿಕೆಟ್ ಕಳೆದುಕೊಂಡ ತಂಡ ಬಳಿಕ ಚೇತರಿಸಿ ಕೊಳ್ಳಲು ಪರದಾಡಿತು. ಇಬ್ರಾಹಿಂ ಜದ್ರಾನ್ 17, ಸಿದೀಖುಲ್ಲಾ ಅತಲ್ 16 ರನ್‌ಗೆ ಔಟಾದರೆ, ನಾಯಕ ಹಶತುಲ್ಲಾ ಶಾಹಿದಿ 4 ಎಸೆತಗಳನ್ನು ಎದುರಿಸಿ ಸೊನ್ನೆಗೆ ಔಟಾದರು. ಆ ಬಳಿಕವೂ ಬ್ಯಾಟರ್‌ಗಳ ಪೆವಿಲಿಯನ್ ಪರೇಡ್ ನಿಲ್ಲಲಿಲ್ಲ. ರಹ್ಮತ್ ಶಾಗೆ ಸೂಕ್ತ ಬೆಂಬಲ ನೀಡಲು ಇತರ ಬ್ಯಾಟರ್‌ಗಳಿಗೆ ಸಾಧ್ಯವಾಗಲಿಲ್ಲ. ಅತುಲ್ಲಾ 19, ಮೊಹಮದ್ ನಬಿ 8, ಗುಲ್ಬದಿನ್ ನೈಬ್ 13, ರಶೀದ್ ಖಾನ್ 18 ರನ್‌ಗೆ ಔಟಾದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕ್ರೀಸ್‌ನಲ್ಲಿ ಭದ್ರವಾಗಿ ನಿಂತ ರಹ್ಮತ್ 90 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್‌ನೊಂದಿಗೆ 92 ರನ್ ಸಿಡಿಸಿ ಔಟಾದರು. ದ.ಆಫ್ರಿಕಾ ಪರ ಕಗಿಸೊ ರಬಾಡ 3, ಲುಂಗಿ ಎನ್‌ಗಿಡಿ, ವಿಯಾನ್ ಮುಲ್ಲರ್ ತಲಾ 2 ವಿಕೆಟ್ ಕಿತ್ತರು.
ರಿಕೆಲ್ಟನ್ ಕಮಾಲ್: ಆಪ್ಪನ್‌ನ ಬೌಲರ್‌ಗಳು ಅಪಾಯಕಾರಿ ಎಂದು ಗೊತ್ತಿದ್ದರಿಂದಲೇ ದ.ಆಫ್ರಿಕಾ ಆರಂಭದಲ್ಲೇ ಎಚ್ಚರಿಕೆಯ ಆಟವಾಡಿತು. ಟೊನಿ ಜೊರ್ಜಿ 11ಕ್ಕೆ ಔಟಾದರೂ, 2ನೇ ವಿಕೆಟ್‌ಗೆ ರಿಕೆಲ್ಟನ್ ಹಾಗೂ ನಾಯಕ ಬವುಮಾ 129 ರನ್ ಜೊತೆಯಾಟವಾಡಿದರು. ಬವುಮಾ 58ಕ್ಕೆ ಔಟಾದರೆ, ರಿಕೆಲ್ಟನ್ 106 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ನೊಂದಿಗೆ 103 ರನ್ ಸಿಡಿಸಿದರು. ಬಳಿಕ ವ್ಯಾನ್ ಡೆರ್ ಡಸೆನ್ 46 ಎಸೆತಗಳಲ್ಲಿ 52, ಮಾರ್ಕ್‌ರಮ್ 36 ಎಸೆತಗಳಲ್ಲಿ ಔಟಾಗದೆ 52 ರನ್ ಸಿಡಿಸಿ ಮೊತ್ತವನ್ನು 300ರ ಗಡಿ ದಾಟಿಸಿದರು. ಆಫ್ಘನ್ ಪರ ನಬಿ 2 ವಿಕೆಟ್ ಕಬಳಿಸಿದರು.
ಮುಂಬೈ ವಿರುದ್ಧ ಆರ್‌ಸಿಬಿಗೆ ತವರಲ್ಲೇ ಶಾಕ್; ಮಂಧನಾ ಪಡೆಗೆ ಹ್ಯಾಟ್ರಿಕ್ ಕನಸು ಭಗ್ನ!
ಸ್ಕೋರ್: ದಕ್ಷಿಣ ಆಫ್ರಿಕಾ 50 ಓವರಲ್ಲಿ 315/6 (ರಿಕೆಲ್ಟನ್ 103, ಬವುಮಾ 58, ಡಸೆನ್ 52, ಮಾರ್ಕರಮ್ ಔಟಾಗದೆ 52, ನಬಿ 2-51),
ಅಫ್ಘಾನಿಸ್ತಾನ 43.3 ಓವರಲ್ಲಿ 208/10 (ರಹ್ಮತ್ ಶಾ 90, ರಶೀದ್ ಖಾನ್ 18, ರಬಾಡ 36-3 )
ನಡೆದಿದ್ದು ಮೂರು ಪಂದ್ಯ, ಸಿಡಿದದ್ದು ಭರ್ಜರಿ 5 ಶತಕ!
ಈ ಬಾರಿ ಚಾಂಪಿಯನ್ ಟ್ರೋಫಿಯಲ್ಲಿ ಬ್ಯಾಟರ್‌ಗಳು ಅಬ್ಬರಿಸುತ್ತಿದ್ದಾರೆ. ಟೂರ್ನಿಯಲ್ಲಿ ಕೇವಲ ಮೂರು ಪಂದ್ಯಗಳಷ್ಟೇ ನಡೆದಿದ್ದರೂ 5 ಶತಕಗಳು ದಾಖಲಾಗಿವೆ. ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್‌ನ ವಿಲ್ ಯಂಗ್, ಟಾಮ್ ಲೇಥಮ್ ಶತಕ ಬಾರಿಸಿದ್ದರು. ಗುರುವಾರ ಭಾರತದ ಶುಭಮನ್ ಗಿಲ್, ಬಾಂಗ್ಲಾದೇಶದ ತೌಹಿದ್ ಹೃದೊಯ್, ಶುಕ್ರವಾರ ದಕ್ಷಿಣ ಆಫ್ರಿಕಾದ ಲ್ಯಾನ್ ರಿಕೆಲ್ಟನ್ ಸೆಂಚುರಿ ಸಿಡಿಸಿ ಸಂಭ್ರಮಿಸಿದ್ದಾರೆ.
