ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತವು ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್‌ಗಳಿಂದ ಜಯಗಳಿಸಿ, ಮೂರನೇ ಬಾರಿಗೆ ಪ್ರಶಸ್ತಿ ಗೆದ್ದಿದೆ. ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಚಾಂಪಿಯನ್ ಆದ ಭಾರತಕ್ಕೆ 20 ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ. ರನ್ನರ್ ಅಪ್ ನ್ಯೂಜಿಲೆಂಡ್‌ಗೆ 7.72 ಕೋಟಿ ರೂಪಾಯಿ ಹಾಗೂ ಸೆಮಿಫೈನಲ್ ಸೋತ ತಂಡಗಳಿಗೆ 4.86 ಕೋಟಿ ರೂಪಾಯಿ ಬಹುಮಾನ ನೀಡಲಾಗಿದೆ.

ಬೆಂಗಳೂರು: 9ನೇ ಆವೃತ್ತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ದದ ಫೈನಲ್ ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡವು 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ದಾಖಲೆಯ ಮೂರನೇ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದಕ್ಕೂ ಮೊದಲು ಭಾರತ ತಂಡವು 2002ರಲ್ಲಿ ಶ್ರೀಲಂಕಾ ಜತೆ ಜಂಟಿ ಚಾಂಪಿಯನ್ ಆಗಿತ್ತು. ಇನ್ನು 2013ರಲ್ಲಿ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಗೆಲ್ಲಲು 252 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಶತಕದ ಜತೆಯಾಟವಾಡುವ ಮೂಲಕ ಭರ್ಜರಿ ಆರಂಭ ಒದಗಿಸಿಕೊಟ್ಟರು. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 76 ರನ್ ಸಿಡಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಕಾರಣಕ್ಕಾಗಿ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಗೂ ರೋಹಿತ್ ಭಾಜನರಾದರು. 2017ರಲ್ಲಿ ನಡೆದಿದ್ದ ಕೊನೆಯ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ಎದುರು ಮುಗ್ಗರಿಸಿತ್ತು. ಆದರೆ ಈ ಬಾರಿ ಗೆದ್ದು ಬೀಗುವ ಮೂಲಕ 12 ವರ್ಷಗಳ ನಂತರ ಮತ್ತೊಮ್ಮೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ.

Scroll to load tweet…

ಇದನ್ನೂ ಓದಿ: ಕಿವೀಸ್ ಎದುರಿನ 25 ವರ್ಷ ಹಿಂದಿನ ಲೆಕ್ಕ ಚುಕ್ತಾ ಮಾಡಿದ ಭಾರತ!

ಇನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ ನಗದು ಬಹುಮಾನದ ವಿಚಾರಕ್ಕೆ ಬರುವುದಾದರೇ, ಟೂರ್ನಿ ಆರಂಭಕ್ಕೂ ಮುನ್ನವೇ ಐಸಿಸಿ, ನಗದು ಬಹುಮಾನದ ಮೊತ್ತವನ್ನು 53% ಹೆಚ್ಚಳ ಮಾಡಿತ್ತು. ಜಗತ್ತಿನ 8 ಬಲಿಷ್ಠ ಕ್ರಿಕೆಟ್ ತಂಡಗಳು ಪಾಲ್ಗೊಂಡಿದ್ದ ಈ ಪ್ರತಿಷ್ಠಿತ ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡಕ್ಕೆ ನಗದು ಬಹುಮಾನ 2.24 ಮಿಲಿಯನ್ ಡಾಲರ್ ಅಗಿರಲಿದೆ ಎಂದು ಐಸಿಸಿ ಘೋಷಣೆ ಮಾಡಿತ್ತು. ಇದೀಗ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಂ ಇಂಡಿಯಾ ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ ಸುಮಾರು 20 ಕೋಟಿ ರುಪಾಯಿ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ.

Scroll to load tweet…

ಇನ್ನು ರನ್ನರ್ ಅಪ್ ಸ್ಥಾನ ಪಡೆದ ಮಿಚೆಲ್ ಸ್ಯಾಂಟ್ನರ್ ನೇತೃತ್ವದ ನ್ಯೂಜಿಲೆಂಡ್ ಕ್ರಿಕೆಟ್ ತಂಡವು 1.2 ಮಿಲಿಯನ್ ಡಾಲರ್(₹7.72 ಕೋಟಿ) ರುಪಾಯಿ ನಗದು ಬಹುಮಾನ ತನ್ನದಾಗಿಸಿಕೊಂಡಿತು. ಇನ್ನು ಸೆಮಿಫೈನಲ್‌ನಲ್ಲಿ ಸೋತ ಎರಡು ತಂಡಗಳಾದ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ತಲಾ 5,60,000 ಯುಎಸ್ ಡಾಲರ್(4.86 ಕೋಟಿ ರುಪಾಯಿ)ಗಳನ್ನು ತನ್ನದಾಗಿಸಿಕೊಂಡವು.

ಇದನ್ನೂ ಓದಿ: ಚಾಂಪಿಯನ್ಸ್‌ ಟ್ರೋಫಿ ಗೆದ್ದು ನಿವೃತ್ತಿ ಬಗ್ಗೆ ಖಡಕ್ ತೀರ್ಮಾನ ಪ್ರಕಟಿಸಿದ ರೋಹಿತ್ ಶರ್ಮಾ!

ಇನ್ನುಳಿದಂತೆ ಗ್ರೂಪ್ ಸ್ಟೇಜ್‌ನಲ್ಲಿ ತಂಡವೊಂದು ಪ್ರತಿ ಗೆಲುವಿಗೆ 34,000 ಡಾಲರ್(30 ಲಕ್ಷ ರುಪಾಯಿ) ನಗದು ಬಹುಮಾನ ತನ್ನದಾಗಿಸಿಕೊಂಡಿತು. ಇನ್ನು ಟೂರ್ನಿಯಲ್ಲಿ 5 ಹಾಗೂ 6ನೇ ಸ್ಥಾನ ಪಡೆದ ತಂಡಗಳು ತಲಾ 3 ಕೋಟಿ ರುಪಾಯಿ ನಗದು ಬಹುಮಾನ ಪಡೆದುಕೊಂಡವು. ಇನ್ನು 7 ಹಾಗೂ 8ನೇ ಸ್ಥಾನ ಪಡೆದ ತಂಡಗಳು ತಲಾ 1.2 ಕೋಟಿ ರುಪಾಯಿ ತನ್ನದಾಗಿಸಿಕೊಂಡವು.

ಇನ್ನು ಇದಷ್ಟೇ ಅಲ್ಲದೇ 8 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಖಚಿತ ನಗದು ಬಹುಮಾನ ತಲಾ 1.08 ಕೋಟಿ ರುಪಾಯಿಗಳನ್ನು ತಮ್ಮದಾಗಿಸಿಕೊಂಡವು.

ಇದನ್ನೂ ಓದಿ: 12 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ, 10 ತಿಂಗಳಲ್ಲಿ 2 ಐಸಿಸಿ ಟ್ರೋಫಿ ಗೆದ್ದ ರೋಹಿತ್ ಶರ್ಮಾ ಪಡೆ!

ಭಾರತ ತಂಡಕ್ಕೆ ಸಿಕ್ಕ ಒಟ್ಟು ನಗದು ಬಹುಮಾನ:

ಚಾಂಪಿಯನ್ ನಗದು ಬಹುಮಾನ: 19.4 ಕೋಟಿ ರುಪಾಯಿ
ಗ್ರೂಪ್ ಹಂತದಲ್ಲಿ ಪಂದ್ಯಗಳಲ್ಲಿ 3 ಗೆಲುವು: 90 ಲಕ್ಷ ರುಪಾಯಿ
ಖಚಿತ ನಗದು ಬಹುಮಾನ: 1.08 ಕೋಟಿ

ಒಟ್ಟು 21.38 ಕೋಟಿ ರುಪಾಯಿ ನಗದು ಬಹುಮಾನವನ್ನು ಟೀಂ ಇಂಡಿಯಾ ಈ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ತನ್ನದಾಗಿಸಿಕೊಂಡಿದೆ.