ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತವು ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿದೆ. ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿ 251 ರನ್ ಗಳಿಸಿತು. ಭಾರತವು 49 ಓವರ್‌ಗಳಲ್ಲಿ ಗುರಿ ತಲುಪಿತು. ಈ ಗೆಲುವಿನೊಂದಿಗೆ, ಭಾರತವು 2000 ರಲ್ಲಿ ಕಿವೀಸ್ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಂಡಿತು ಮತ್ತು ರೋಹಿತ್ ಶರ್ಮಾ ನಾಯಕತ್ವದಲ್ಲಿ ಈ ಸಾಧನೆ ಮಾಡಿದೆ.

ದುಬೈ: ಮಿನಿ ವಿಶ್ವಕಪ್‌ ಖ್ಯಾತಿಯ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ 3ನೇ ಬಾರಿ ಕಿರೀಟ ಗೆದ್ದು ಮೆರೆದಾಡಿದೆ. 140 ಕೋಟಿ ಭಾರತೀಯರ ನಿರೀಕ್ಷೆ, ಹಾರೈಕೆ ಹುಸಿಯಾಗದಂತೆ ನೋಡಿಕೊಂಡ ಟೀಂ ಇಂಡಿಯಾ, ಈ ಬಾರಿ ಟೂರ್ನಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ತಂಡವನ್ನು 4 ವಿಕೆಟ್‌ಗಳಿಂದ ಬಗ್ಗುಬಡಿಯಿತು. 2ನೇ ಬಾರಿ ಟ್ರೋಫಿ ಗೆಲ್ಲುವ ಕಿವೀಸ್‌ ಕನಸು ನುಚ್ಚುನೂರಾಯಿತು.

ಭಾರತಕ್ಕೆ ಟಾಸ್‌ ಗೆಲ್ಲುವ ಅದೃಷ್ಟ ಈ ಪಂದ್ಯದಲ್ಲೂ ಸಿಗಲಿಲ್ಲ. ಟಾಸ್‌ ಗೆದ್ದ ಕಿವೀಸ್‌ ಆಯ್ಕೆ ಮಾಡಿಕೊಂಡಿದ್ದು ಬ್ಯಾಟಿಂಗ್‌. ಇದರಿಂದ ಭಾರತವೇನೂ ತಲೆಕೆಡಿಸಿಕೊಳ್ಳಲಿಲ್ಲ. ನ್ಯೂಜಿಲೆಂಡ್‌ನ್ನು 7 ವಿಕೆಟ್‌ಗೆ 251 ರನ್‌ಗಳಿಗೆ ನಿಯಂತ್ರಿಸಿತು. ದುಬೈನಲ್ಲಿ ಈಗಾಗಲೇ 3 ಸಲ ಚೇಸ್‌ ಮಾಡಿ ಗೆಲುವು ಒಲಿಸಿಕೊಂಡಿದ್ದ ಭಾರತ, ಫೈನಲ್‌ನಲ್ಲೂ ಎದೆಗುಂದಲಿಲ್ಲ. ರೋಹಿತ್‌ರ ಅಬ್ಬರದ ಆಟ, ಬಳಿಕ ಶ್ರೇಯಸ್‌, ರಾಹುಲ್‌ ಜವಾಬ್ದಾರಿಯುತ ಆಟದಿಂದಾಗಿ ತಂಡ 49 ಓವರ್‌ಗಳಲ್ಲಿ ಗೆದ್ದಿತು.

ಭಾರತ ಈ ಬಾರಿ ಗೆಲುವಿನೊಂದಿಗೆ 25 ವರ್ಷಗಳ ಹಿಂದಿನ ಲೆಕ್ಕ ಚುಕ್ತಾ ಮಾಡಿತು. 2000ರ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಕಿವೀಸ್‌ ವಿರುದ್ಧ ಭಾರತ ಸೋತಿತ್ತು. ಈ ಬಾರಿ ಸೇಡು ತೀರಿಸಿಕೊಂಡು, ಟ್ರೋಫಿಯನ್ನು ಭಾರತ ತನ್ನ ತೆಕ್ಕೆಗೆ ಪಡೆದುಕೊಂಡಿತು.

ಇದನ್ನೂ ಓದಿ: ಚಾಂಪಿಯನ್ಸ್‌ ಟ್ರೋಫಿ ಗೆದ್ದು ನಿವೃತ್ತಿ ಬಗ್ಗೆ ಖಡಕ್ ತೀರ್ಮಾನ ಪ್ರಕಟಿಸಿದ ರೋಹಿತ್ ಶರ್ಮಾ!

ಐಸಿಸಿ ಫೈನಲ್‌ನಲ್ಲಿ ಕಿವೀಸ್‌ಗೆ 5 ಸೋಲು

ನ್ಯೂಜಿಲೆಂಡ್‌ ತಂಡ ಐಸಿಸಿ ಫೈನಲ್‌ನಲ್ಲಿ 5ನೇ ಬಾರಿ ಸೋಲು ಕಂಡಿದೆ. 2009ರ ಚಾಂಪಿಯನ್ಸ್‌ ಟ್ರೋಫಿ, 2015, 2019ರ ಏಕದಿನ ವಿಶ್ವಕಪ್‌, 2021ರ ಟಿ20 ವಿಶ್ವಕಪ್‌, 2025ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಕಿವೀಸ್‌ ರನ್ನರ್‌-ಅಪ್‌ ಆಗಿದೆ.

ಕೊನೆಗೂ ಕಿವೀಸ್‌ ವಿರುದ್ಧ ಫೈನಲ್‌ ಜಯ

ಭಾರತ ತಂಡ ಐಸಿಸಿ ಫೈನಲ್‌ನಲ್ಲಿ ಇದೇ ಮೊದಲ ಬಾರಿ ಕಿವೀಸ್‌ ವಿರುದ್ಧ ಗೆದ್ದಿದೆ. 2000ರ ಚಾಂಪಿಯನ್ಸ್‌ ಟ್ರೋಫಿ, 2019-21ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತಕ್ಕೆ ಸೋಲು ಎದುರಾಗಿತ್ತು.

ಇದನ್ನೂ ಓದಿ: 12 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ, 10 ತಿಂಗಳಲ್ಲಿ 2 ಐಸಿಸಿ ಟ್ರೋಫಿ ಗೆದ್ದ ರೋಹಿತ್ ಶರ್ಮಾ ಪಡೆ!

2+ ಐಸಿಸಿ ಟ್ರೋಫಿ ಗೆದ್ದ ಭಾರತದ 2ನೇ, ವಿಶ್ವದ 6ನೇ ನಾಯಕ ರೋಹಿತ್‌

ರೋಹಿತ್‌ 2 ಅಥವಾ ಅದಕ್ಕಿಂತ ಹೆಚ್ಚು ಐಸಿಸಿ ಟ್ರೋಫಿ ಗೆದ್ದ ಭಾರತದ 2ನೇ ಹಾಗೂ ವಿಶ್ವದ 6ನೇ ನಾಯಕ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌(4), ಎಂ.ಎಸ್‌.ಧೋನಿ(3), ವೆಸ್ಟ್‌ಇಂಡೀಸ್‌ನ ಕ್ಲೈವ್‌ ಲಾಯ್ಡ್‌(2), ಆಸ್ಟ್ರೇಲಿಯಾದ ಪ್ಯಾಟ್‌ ಕಮಿನ್ಸ್(2), ವೆಸ್ಟ್‌ಇಂಡೀಸ್‌ನ ಡ್ಯಾರೆನ್‌ ಸಮಿ(2) ಇತರ ಸಾಧಕರು.