ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಭಾರತ ತಂಡವು 22 ರನ್‌ಗಳಿಂದ ಸೋಲನುಭವಿಸಿದೆ. ಸೋಲಿನ ಬಳಿಕ ಮೊಹಮ್ಮದ್ ಸಿರಾಜ್ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಗೆಲುವು-ಸೋಲಿಗಿಂತ ಪಂದ್ಯದಿಂದ ಕಲಿತ ಪಾಠ ಮುಖ್ಯ ಎಂದಿದ್ದಾರೆ.
ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವೆ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 22 ರನ್ ಅಂತರದ ರೋಚಕ ಜಯ ಸಾಧಿಸಿದೆ. ಕೊನೆಯ ಕ್ಷಣದವರೆಗೂ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಕೊನೆಗೂ ಮೊಹಮ್ಮದ್ ಸಿರಾಜ್ ಅವರನ್ನು ಬೌಲ್ಡ್ ಮಾಡಿದ ಶೋಯೆಬ್ ಬಷೀರ್, ಇಂಗ್ಲೆಂಡ್‌ಗೆ ಸ್ಮರಣೀಯ ಗೆಲುವಿನ ಸಿಹಿಯುಣಿಸುವಲ್ಲಿ ಯಶಸ್ವಿಯಾಗಿದ್ದರು.
ಕ್ರಿಕೆಟ್ ಕಾಶಿ ಎಂದು ಕರೆಯಲ್ಪಡುವ ಲಾರ್ಡ್ಸ್ ಮೈದಾನದಲ್ಲಿ ಗೆಲ್ಲಲು 193 ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ಕೆಲವೇ ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿತು. ಕೊನೆಯವರಾಗಿ ಔಟ್ ಆದ ಮೊಹಮ್ಮದ್ ಸಿರಾಜ್ ಮೈದಾನದಲ್ಲಿಯೇ ತಮ್ಮ ಬೇಸರವನ್ನು ಹೊರಹಾಕಿದ್ದರು. ಇದೀಗ ಮೊಹಮ್ಮದ್ ಸಿರಾಜ್ ಆ ಘಟನೆಯ ಕುರಿತಂತೆ ಒಂದು ದಿನದ ಬಳಿಕ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
"ಏನು ಫಲಿತಾಂಶ ಬಂದಿದೆ ಅನ್ನುವುದಕ್ಕಿಂತ ಏನು ನಿಮಗೆ ಕಲಿಸಿದೆ ಎನ್ನುವುದರ ಮೇಲೆ ಕೆಲವು ಮ್ಯಾಚ್‌ಗಳು ಯಾವತ್ತಿಗೂ ನಮ್ಮ ಜತೆಯಲ್ಲಿಯೇ ಇರುತ್ತವೆ" ಎಂದು ಮೊಹಮ್ಮದ್ ಸಿರಾಜ್ ತಮ್ಮ ಅಧಿಕೃತ ಟ್ವಿಟರ್(ಎಕ್ಸ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಶತಾಯಗತಾಯ ಭಾರತ ಕ್ರಿಕೆಟ್ ತಂಡವನ್ನು ಗೆಲುವಿನ ದಡ ಸೇರಿಸಲು ಕೊನೆಯ ವಿಕೆಟ್‌ಗೆ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಸಿರಾಜ್ ನೆಲಕಚ್ಚಿ ಆಡುವ ಪ್ರಯತ್ನ ಮಾಡಿದರು. ಆದರೆ ಗೆಲ್ಲಲು ಕೇವಲ 22 ರನ್ ಅಗತ್ಯವಿದ್ದಾಗ ಸಿರಾಜ್ ವಿಕೆಟ್ ಪತನವಾಯಿತು.
ಐದನೇ ದಿನದಾಟದ ಆರನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಕ್ರೀಸ್‌ಗಿಳಿದರು. 193 ರನ್‌ಗಳ ಗುರಿ ಬೆನ್ನತ್ತಿದ ಭಾರತಕ್ಕೆ ಆಗ 82 ರನ್‌ಗಳ ಅಗತ್ಯವಿತ್ತು. ಬಾಲಂಗೋಚಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಕಟ್ಟಿಕೊಂಡು ಅತ್ಯಂತ ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದ ಜಡ್ಡು ಅಜೇಯ 61 ರನ್ ಸಿಡಿಸಿದರು. ಜಡೇಜಾ ಹಾಗೂ ಸಿರಾಜ್ ಜೋಡಿ ಪವಾಡಸದೃಶ ರೂಪದಲ್ಲಿ ಭಾರತಕ್ಕೆ ಗೆಲುವು ತಂದುಕೊಡಲಿದ್ದಾರೆ ಎಂದು ಎಲ್ಲರೂ ಊಹಿಸಿದ್ದರು. ಆದರೆ ಭಾರತದ ಗೆಲುವಿನ ಆಸೆಗೆ ಸ್ಪಿನ್ನರ್ ಶೋಯೆಬ್ ಬಷೀರ್ ತಣ್ಣೀರು ಎರಚಿದರು.
ಇಂಗ್ಲೆಂಡ್ ದಾಳಿಯ ಎದುರು, ಯಶಸ್ವಿ ಜೈಸ್ವಾಲ್ ಶುಭ್‌ಮನ್ ಗಿಲ್, ರಿಷಭ್ ಪಂತ್, ವಾಷಿಂಗ್ಟನ್ ಸುಂದರ್, ಕರುಣ್ ನಾಯರ್, ವಾಷಿಂಗ್ಟನ್ ಸುಂದರ್ ಕನಿಷ್ಠ 35 ಎಸೆತ ಎದುರಿಸಲು ಸಾಧ್ಯವಾಗಲಿಲ್ಲ. ಆದರೆ ಬಾಲಂಗೋಚಿಗಳಾದ ಜಸ್ಪ್ರೀತ್ ಬುಮ್ರಾ(54 ಎಸೆತ) ಹಾಗೂ ಮೊಹಮ್ಮದ್ ಸಿರಾಜ್(30 ಎಸೆತ) ಎದುರಿಸುವ ಮೂಲಕ ಎದುರಾಳಿ ಪಡೆಯ ಎದುರು ದಿಟ್ಟ ಹೋರಾಟ ತೋರಿದರು.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಸರಣಿಯಲ್ಲಿ ಇದೀಗ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು 2-1 ರ ಮುನ್ನಡೆ ಸಾಧಿಸಿದೆ. ಇದೀಗ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ ಈ ಟೆಸ್ಟ್ ಸರಣಿ ಗೆಲ್ಲಬೇಕಿದ್ದರೇ ಇನ್ನುಳಿದ ಎರಡು ಟೆಸ್ಟ್ ಪಂದ್ಯವನ್ನು ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ. ಕಳೆದ ಮೂರು ಟೆಸ್ಟ್ ಪಂದ್ಯದಲ್ಲಿ ದೊಡ್ಡ ಮೊತ್ತ ಸಿಡಿಸಲು ವಿಫಲವಾಗಿರುವ ಕನ್ನಡಿಗ ಕರುಣ್ ನಾಯರ್ ಅವರನ್ನು ಟೀಂ ಮ್ಯಾನೇಜ್‌ಮೆಂಟ್ ತಂಡದಿಂದ ನಾಲ್ಕನೇ ಟೆಸ್ಟ್‌ಗೆ ಕೈಬಿಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇನ್ನು ತಂಡದ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ನಾಲ್ಕನೇ ಟೆಸ್ಟ್ ಆಡುತ್ತಾರೆಯೇ ಎನ್ನುವ ಪ್ರಶ್ನೆಗೆ ಸದ್ಯದಲ್ಲಿಯೇ ಉತ್ತರ ಸಿಗಲಿದೆ ಎಂದು ಟೀಂ ಇಂಡಿಯಾ ಕ್ಯಾಪ್ಟನ್ ಶುಭ್‌ಮನ್ ಗಿಲ್ ಹೇಳಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯವು ಜುಲೈ 23ರಿಂದ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಲಿದೆ.
