* ಐಪಿಎಲ್ ಟೂರ್ನಿಯಿಂದ ಮೊದಲೇ ಹಿಂದೆ ಸರಿಯುವ ತೀರ್ಮಾನ ಮಾಡಿದ್ದ ಯುಜುವೇಂದ್ರ ಚಗಲ್‌* ಯುಜುವೇಂದ್ರ ಚಹಲ್‌ ಆರ್‌ಸಿಬಿ ಅನುಭವಿ ಲೆಗ್‌ಸ್ಪಿನ್ನರ್* ಪೋಷಕರಿಗೆ ಕೋವಿಡ್‌ ಧೃಡಪಟ್ಟಿದ್ದರಿಂದ ಅರ್ಧದಲ್ಲೇ ಮನೆಗೆ ತೆರಳಲು ಯೋಚಿಸಿದ್ದ ಚಹಲ್ 

ನವದೆಹಲಿ(ಮೇ.22): 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ವೇಳೆ ಬಯೋ ಬಬಲ್‌ನೊಳಗೆ ಕೋವಿಡ್‌ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಬಿಸಿಸಿಐ ಮಿಲಿಯನ್‌ ಡಾಲರ್‌ ಕ್ರಿಕೆಟ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಟೂರ್ನಿ ಸ್ಥಗಿತಕೊಂಡು 15 ದಿನಗಳು ಕಳೆದ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಅನುಭವಿ ಸ್ಪಿನ್ನರ್‌ ಯುಜುವೇಂದ್ರ ಚಹಲ್ ಟೂರ್ನಿಯಲ್ಲಿ ತಮ್ಮ ಅಲಭ್ಯತೆಯ ಕುರಿತಂತೆ ಅಚ್ಚರಿಯ ಮಾತುಗಳನ್ನು ಆಡಿದ್ದಾರೆ.

ಐಪಿಎಲ್ ಟೂರ್ನಿ ಮುಂದೂಡುವ ಮುನ್ನವೇ ನಾನು ಟಿ20 ಟೂರ್ನಿಯಿಂದ ಕೆಲವು ಕಾಲ ಬಿಡುವು ಪಡೆಯುವ ಬಗ್ಗೆ ಚಿಂತನೆ ನಡೆಸಿದ್ದೆ. ಯಾಕೆಂದರೆ ಮನೆಯ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿರಲಿಲ್ಲ. ಒಂದು ಕಡೆ ಟೂರ್ನಿ ನಡೆಯುತ್ತಿರುವಾಗಲೇ ಮನೆಯಲ್ಲಿ ಪೋಷಕರಿಗೆ ಕೋವಿಡ್ ದೃಢಪಟ್ಟಿತ್ತು ಎಂದು 30 ವರ್ಷದ ಚಹಲ್ ಹೇಳಿದ್ದಾರೆ.

ನನ್ನ ಪೋಷಕರಿಗೆ ಕೋವಿಡ್ ತಗುಲಿರುವ ವಿಚಾರ ತಿಳಿಯುತ್ತಿದ್ದಂತೆಯೇ ನಾನು ಐಪಿಎಲ್‌ನಿಂದ ವಿರಾಮ ಪಡೆಯಲು ಬಯಸಿದ್ದೆ. ಮನೆಯಲ್ಲಿ ಪೋಷಕರು ಆ ಪರಿಸ್ಥಿತಿಯಲ್ಲಿದ್ದಾಗ ಪಂದ್ಯದತ್ತ ಗಮನ ಹರಿಸಲು ಸಾಧ್ಯವಾಗುತ್ತಿರಲಿಲ್ಲ. ಅವರಿಗೆ ಮೇ.03ರಂದು ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದಾದ ಮರುದಿನವೇ ಟೂರ್ನಿಯನ್ನು ಬಿಸಿಸಿಐ ಅನಿರ್ದಿಷ್ಟಾವಧಿಗೆ ಮುಂದೂಡಿತು ಎಂದು ಇಂಡಿಯಾ ಟುಡೆ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಎಬಿ ಡಿವಿಲಿಯರ್ಸ್‌ ವಿಕೆಟ್‌ ಪಡೆಯುವುದು ನನ್ನ ಕನಸು ಎಂದ ಆರ್‌ಸಿಬಿ ವೇಗಿ..!

ನನ್ನ ತಂದೆಯ ಆಕ್ಸಿಜನ್‌ ಮಟ್ಟವು 85-86ಕ್ಕೆ ಕುಸಿದಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ನಿನ್ನೆಯಷ್ಟೇ ಅವರು ಮನೆಗೆ ವಾಪಾಸ್ಸಾಗಿದ್ದಾರೆ. ಆದರೆ ಇನ್ನೂ ಅವರು ಕೋವಿಡ್‌ನಿಂದ ಗುಣಮುಖರಾಗಿಲ್ಲ. ಆದರೆ ಅದೃಷ್ಟವಶಾತ್ ಅವರ ಆಕ್ಸಿಜನ್ ಮಟ್ಟ ಸದ್ಯ 95-96 ಇದೆ. ಇನ್ನು 7-10 ದಿನಗಳೊಳಗಾಗಿ ಗುಣಮುಖರಾಗುವ ವಿಶ್ವಾಸವಿದೆ ಎಂದು ಯುಜುವೇಂದ್ರ ಚಹಲ್ ಹೇಳಿದ್ದಾರೆ.

ಈ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ಸಹಾ ಟೂರ್ನಿಯ ಮಧ್ಯದಲ್ಲೇ ತೊರೆದು ಮನೆ ಸೇರಿದ್ದರು. ಅಶ್ವಿನ್ ಕುಟುಂಬದ ಸಾಕಷ್ಟು ಮಂದಿ ಕೋವಿಡ್‌ಗೆ ಒಳಗಾಗಿದ್ದರು ಎನ್ನುವುದನ್ನು ಸ್ಮರಿಸಬಹುದಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona