ಚಾಂಪಿಯನ್ಸ್ ಟ್ರೋಫಿ ಪಂದ್ಯದ ನೇರ ಪ್ರಸಾರದಲ್ಲಿ ಪಾಕಿಸ್ತಾನದ ಹೆಸರನ್ನು ಕೈಬಿಟ್ಟಿದ್ದಕ್ಕೆ ಪಿಸಿಬಿ ಐಸಿಸಿಗೆ ದೂರು ನೀಡಿದೆ. ಭಾರತವು ಬಾಂಗ್ಲಾದೇಶವನ್ನು ಸೋಲಿಸಿ ಟೂರ್ನಿಯನ್ನು ಗೆಲುವಿನೊಂದಿಗೆ ಆರಂಭಿಸಿದೆ. ದುಬೈನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯ ಫೆಬ್ರವರಿ 23 ರಂದು ನಡೆಯಲಿದ್ದು, ಉಭಯ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದೆ. ಈ ಪಂದ್ಯದ ಟಿಕೆಟ್‌ಗಳು ಮಾರಾಟವಾಗಿವೆ.
ದುಬೈ: ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯದ ನೇರ ಪ್ರಸಾರ ವೇಳೆ ಟಿವಿ ಹಾಗೂ ಆ್ಯಪ್‌ನಲ್ಲಿ ಪಾಕಿಸ್ತಾನದ ಹೆಸರು ಕಾಣೆಯಾಗಿದ್ದಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಗೆ ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ) ದೂರು ನೀಡಿದೆ.
ಬುಧವಾರದ ಪಾಕಿಸ್ತಾನ-ನ್ಯೂಜಿಲೆಂಡ್ ಹಾಗೂ ಶುಕ್ರವಾರದ ದ.ಆಫ್ರಿಕಾ-ಅಫ್ಘಾನಿಸ್ತಾನ ಪಂದ್ಯದ ನೇರಪ್ರಸಾರ ವೇಳೆ ‘ಚಾಂಪಿಯನ್ಸ್ ಟ್ರೋಫಿ 2025 ಪಾಕಿಸ್ತಾನ’ ಎಂದು ಬರೆಯಲಾಗಿತ್ತು. ಆದರೆ ಭಾರತದ ಪಂದ್ಯದ ವೇಳೆ ಕೇವಲ ‘ಚಾಂಪಿಯನ್ಸ್ ಟ್ರೋಫಿ 2025’ ಎಂದು ನಮೂದಿಸಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪಿಸಿಬಿ, ಈ ಬಗ್ಗೆ ವಿವರಣೆ ನೀಡುವಂತೆ ಕೇಳಿಕೊಂಡಿದೆ. ಅಲ್ಲದೆ, ಮುಂದಿನ ಪಂದ್ಯಗಳಲ್ಲಿ ಈ ರೀತಿ ತಪ್ಪು ಮರುಕಳಿಸದಿರುವ ಬಗ್ಗೆ ಐಸಿಸಿ ಬಳಿ ಆಶ್ವಾಸನೆ ಪಡೆದುಕೊಂಡಿದೆ ಎಂದು ವರದಿಯಾಗಿದೆ.
ಚಾಂಪಿಯನ್ಸ್ ಟ್ರೋಫಿ: ಆಫ್ಘಾನ್ ಮ್ಯಾಜಿಕ್ ಫೇಲ್: ದಕ್ಷಿಣ ಆಫ್ರಿಕಾ ಶುಭಾರಂಭ
ಬಾಂಗ್ಲಾದೇಶ ಬಗ್ಗುಬಡಿದು ಶುಭಾರಂಭ ಮಾಡಿರುವ ಭಾರತ
ಭಾರತ ತಾನೇಕೆ ಮಾಜಿ ಚಾಂಪಿಯನ್ ಎಂಬುದನ್ನು ಈ ಬಾರಿ ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಪಂದ್ಯದಲ್ಲೇ ತೋರಿಸಿಕೊಟ್ಟಿದೆ. ಆರಂಭದಲ್ಲಿ ಬೆಂಕಿ ಬೌಲಿಂಗ್ ಬಳಿಕ ಬ್ಯಾಟರ್‌ಗಳ ಅಬ್ಬರದ ಪ್ರದರ್ಶನದಿಂದಾಗಿ ಬಾಂಗ್ಲಾದೇಶ ವಿರುದ್ಧ 6 ವಿಕೆಟ್ ಗೆಲುವು ಸಾಧಿಸಿದೆ. ಈ ಮೂಲಕ ಬದ್ಧವೈರಿ ಪಾಕಿಸ್ತಾನ ವಿರುದ್ಧ ದುಬೈನಲ್ಲೇ ನಡೆಯಲಿರುವ ಪಂದ್ಯಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.
ಭಾರತ ಸತತ 11ನೇ ಪಂದ್ಯಗಳಲ್ಲಿ ಟಾಸ್ ಸೋತಿತು. ಇದರಿಂದ ತಂಡಕ್ಕೆ ನಷ್ಟವೇನೂ ಆಗಲಿಲ್ಲ. ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾ ತರಗೆಲೆಯಂತೆ ಉರುಳಿತು. ಆದರೆ ತೌಹಿದ್ ಹೃದೊಯ್, ಜಾಕರ್ ಅಲಿ ಹೋರಾಟ ಬಾಂಗ್ಲಾಕ್ಕೆ ಆಕ್ಸಿಜನ್ ನೀಡಿತು. ತಂಡ 49.4 ಓವರ್‌ಗಳಲ್ಲಿ 228ಕ್ಕೆ ಆಲೌಟಾಯಿತು. ಈ ಮೊತ್ತ ಭಾರತಕ್ಕೆ ಕಡಿಮೆಯೇ ಆಗಿದ್ದರೂ, ಗೆಲುವು ಮಾತ್ರ ನಿರೀಕ್ಷಿಸಿದಷ್ಟು ಸುಲಭದಲ್ಲಿ ದಕ್ಕಲಿಲ್ಲ. ತಂಡ 46.3 ಓವರ್‌ಗಳಲ್ಲಿ ಗೆಲುವನ್ನು ತನ್ನತ್ತ ಒಲಿಸಿಕೊಂಡಿತು.
ಸಚಿನ್, ವಿರಾಟ್, ಗಂಭೀರ್ ಹೆಸರಲ್ಲಿದ್ದ ಅಪರೂಪದ ದಾಖಲೆ ಮುರಿದ ಶುಭ್‌ಮನ್ ಗಿಲ್!
ಭಾನುವಾರ ಇಂಡೋ-ಪಾಕ್ ಹೈವೋಲ್ಟೇಜ್ ಫೈಟ್
ಭಾರತ ತಂಡ ತನ್ನ ಮುಂದಿನ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಆ ಪಂದ್ಯದಲ್ಲಿ ಗೆದ್ದರೆ ಭಾರತ ಸೆಮಿಫೈನಲ್ ಸ್ಥಾನ ಬಹುತೇಕ ಖಚಿತಪಡಿಸಿಕೊಳ್ಳಲಿದೆ. ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಪಾಕ್‌ಗೆ ಫೆಬ್ರವರಿ 23ರಂದು ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
ಪಾಕಿಸ್ತಾನವು 2017ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ತಂಡವನ್ನು ಮಣಿಸಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ತುದಿಗಾಲಿನಲ್ಲಿ ನಿಂತಿದೆ. ಈ ಗೆಲುವು ಭಾರತ ತಂಡವನ್ನು ಬಹುತೇಕ ಸೆಮೀಸ್ ಹಾದಿಯನ್ನು ಖಚಿತಪಡಿಸಲಿದೆ. ಆದರೆ ಒಂದು ವೇಳೆ ಪಾಕಿಸ್ತಾನ ತಂಡವು ಭಾರತ ಎದುರು ಸೋತರೇ ಬಹುತೇಕ ಲೀಗ್ ಹಂತದಲ್ಲಿಯೇ ತನ್ನ ಅಭಿಯಾನವನ್ನು ಕೊನೆಗೊಳಿಸುವ ಭೀತಿಗೆ ಸಿಲುಕಿದೆ. ಹೀಗಾಗಿ ಈ ಪಂದ್ಯ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ. ಈಗಾಗಲೇ ಈ ಪಂದ್ಯದ ಎಲ್ಲಾ ಟಕೆಟ್‌ಗಳು ಸೋಲ್ಡೌಟ್ ಆಗಿದ್ದು, ಸೂಪರ್ ಸಂಡೆಯಲ್ಲಿ ಒಂದು ಜಿದ್ದಾಜಿದ್ದಿನ ಪಂದ್ಯವನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
